ವಿಚಾರಗಳಿಂದ ಜಗತ್ತನ್ನು ಆಳಬಹುದು ಎಂಬುದನ್ನು ತೋರಿಸಿಕೊಟ್ಟವರು ಬಸವಣ್ಣನವರು

0
370

ಶಹಾಪುರ: ಜಗತ್ತನ್ನು ಮದ್ದು ಗುಂಡು ಬಂದೂಕುಗಳಿಂದ ಆಳಲು ಆಗುವುದಿಲ್ಲ. ವಿಚಾರಗಳಿಂದ ಇಡೀ ಜಗತ್ತನ್ನು ಆಳಬಹುದು ಎಂಬುದನ್ನು ಬಸವಣ್ಣವರು ತೋರಿಸಿಕೊಟ್ಟರು ಎಂದು ಗುರುಮಿಠಕಲ್ ಖಾಸಾಮಠದ ಪೂಜ್ಯ ಶ್ರೀ ಶಾಂತವೀರ ಮುರುಘರಾಜೇಂದ್ರ ಸ್ವಾಮೀಜಿಗಳು ಅಭಿಪ್ರಾಯ ಪಟ್ಟರು.

ನಗರದ ಬಸವಮಾರ್ಗ ಪ್ರತಿಷ್ಠಾನ ಹಾಗೂ ಜಾಗತಿಕ ಲಿಂಗಾಯತ ಮಹಾಸಭೆ ಜಂಟಿಯಾಗಿ ಏರ್ಪಡಿಸಿದ್ದ ಬುದ್ದ ಬಸವ ಅಂಬೇಡ್ಕರ ಹಾಗೂ ಪರಮವ್ವ ಕುಂಬಾರ ಅವರ ಸ್ಮರಣಾರ್ಥ ಏರ್ಪಡಿಸಿದ್ದ ತಿಂಗಳ ಬಸವ ಬೆಳಕು-೮೭ ರ ಸಭೆಯಲ್ಲಿ ’ಬಿತ್ತಿದ ಬೀಜ ಕೆಟ್ಟಿತೆನಬೇಡ’ ಎಂಬ ವಿಷಯದ ಕುರಿತು ಮಾತನಾಡಿದರು.

Contact Your\'s Advertisement; 9902492681

ಸಂಘರ್ಷ ಸವಾಲುಗಳಿಲ್ಲದ ಬದುಕು ಬದುಕಲ್ಲ. ಅದು ನೀರಸ. ಬಸವಣ್ಣನವರು ಸಂಘರ್ಷಗಳಿಗೆ ಎದೆಗೊಟ್ಟು ನಿಂತರು. ಕ್ಷಣ ಕ್ಷಣಕ್ಕೂ ಅಂದಿನ ಶರಣರು ಸಾವಿರಾರು ಸಮಸ್ಯೆಗಳನ್ನು ಎದುರಿಸಿದರು.ತಲ ತಲಾಂತರದಿಂದ ಶೋಷಣೆಗೆ ಗುರಿಯಾಗಿದ್ದ ಜನಗಳ ಪರವಾಗಿ ಶರಣರೆಲ್ಲ ಮಾತನಾಡುತ್ತಿರುವಂತೆ ಪಟ್ಟಭದ್ರರು ಶರಣರೆಲ್ಲರ ಎದುರುಗಡೆ ದುತ್ತೆಂದು ನಿಂತರು. ಆದರೆ ಬಸವಣ್ಣ ಅವರೆಲ್ಲರ ವಿರುದ್ಧ ವಚನಗಳ ಮದ್ದು ಗುಂಡುಗಳನ್ನು ಬಳಸಿ ಅವರನ್ನೂ ತಮ್ಮವರನ್ನಾಗಿ ಮಾಡಿಕೊಂಡರು ಎಂದು ಬಣ್ಣಿಸಿದರು.

ಪ್ರಜಾಪ್ರಭುತ್ವ ಇಲ್ಲದ ರಾಜಪ್ರಭುತ್ವ ಹೊಂದಿದ್ದ ಆ ದಿನಗಳು ತುರ್ತು ಪರಿಸ್ಥಿತಿಗಿಂತ ಕರಾಳವಾಗಿದ್ದ ದಿನಗಳವು. ರಾಜಪ್ರಭುತ್ವ ಹಾಗೂ ಪುರೋಹಿತಶಾಹಿಗಳು ಜಂಟಿಯಾಗಿ ಸಮಾಜವನ್ನು ಆಳುತ್ತಿದ್ದ ಕಠಿಣ ಸಮಯ. ಇಂಥ ದುರ್ದರ ಪ್ರಸಂಗದಲ್ಲೂ ಕಾಯಕ ಜೀವಿಗಳ ಒಳಗೆ ನೈತಿಕ ಶಕ್ತಿಯನ್ನು ತುಂಬಿ ಅವರೆಲ್ಲರನ್ನು ಕರಾಳ ವ್ಯವಸ್ಥೆಯ ವಿರುದ್ಧ ಸಿಡಿದು ನಿಲ್ಲುವ ಶಕ್ತಿಯನ್ನು ಬಸವಣ್ಣನವರು ತುಂಬಿದರು ಎಂದು ವಚನಗಳ ಸಹಿತ ಸಭೆಗೆ ವಿವರಿಸಿದರು.

ಬಸವಣ್ಣನವರು ಹನ್ನೆರಡನೆಯ ಶತಮಾನದಲ್ಲಿ ಬಿತ್ತಿದ ಬೀಜ ಎಂದಿಗೂ ವಿಫಲವಾಗದ ಜೀವಸತ್ವ ಇರುವ ಬೀಜಗಳಾಗಿವೆ. ಹೀಗಾಗಿ ಶರಣರ ವಿಚಾರಧಾರೆ ಸೂರ್ಯ, ಚಂದ್ರರು ಇರುವವರೆಗೂ ಮುಂದುವರೆಯುತ್ತವೆ. ಶರಣರ ವಿಚಾರದ ಬೀಜ, ಹುಸಿ ಬೀಜವಲ್ಲ. ಅವು ಸತ್ವ ಭರಿತವಾದ, ಜೀವನಾನುಭವ ಉಳ್ಳ, ಅನುಭವ ಮಂಟಪ ಎಂಬ ಅಂದಿನ ಸಂಸತ್ತಿನಲ್ಲಿ ಚರ್ಚಿಸಿ ಒಪ್ಪಿತ ವಚನಗಳಿಗೆ ಎಂದೂ ಸಾವು ಇರಲಾರದು ಎಂದವರು ಅಭಿಪ್ರಾಯಪಟ್ಟರು.

ಬುದ್ಧ ಬಸವ ಅಂಬೇಡ್ಕರ್ ಎಂಬ ಭಾರತ ಮೂರು ರತ್ನಗಳು ಜಗತ್ತನ್ನು ಬೆಳಗುವ ಶಕ್ತಿಯನ್ನು ಹೊಂದಿವೆ. ಜೀವಿಗಳಿಗೆಲ್ಲ ಇಂದು ಬೇಕಾಗಿರುವುದು ಮೂರು ಜನ ಮಹಾತ್ಮದ ಬದುಕು ಹಾಗೂ ಬೋಧನೆ. ಇಡೀ ಜಗತ್ತು ಮೂರು ಜನ ಮಹಾತ್ಮರ ವಿಚಾರಗಳಿಗೆ ಹಾತೊರೆಯುತ್ತಿದೆ. ಜಗತ್ತಿನಾದ್ಯಂತ ಬುದ್ದ ಬಸವ ಅಂಬೇಡ್ಕರರ ವಿಚಾರಗಳ ಕುರಿತು ಗಹನವಾದ ಚರ್ಚೆಗಳು, ವಿಚಾರ ಸಂಕಿರಣಗಳು ನಡೆದಿವೆ. ವಿದ್ವಜನರ ಮೆಚ್ಚುಗೆ ಪಾತ್ರವಾಗಿ ಎಲ್ಲೆಲ್ಲೂ ಮಹನೀಯರ ಪ್ರತಿಮೆಗಳು ಅನಾವರಣಗೊಳ್ಳುತ್ತಿವೆ. ಆದರೆ ಹಿತ್ತಲಗಿಡ ಮದ್ದಲ್ಲ ಎಂಬಂತೆ ಭಾರತೀಯರಾದ ನಾವುಗಳು ನಮ್ಮ ದೇಶದ ಮೂರು ಜನ ಮಹಾತ್ಮರ ಬಗೆಗೆ ನಾವು ಕಾಳಜಿ ಹೊಂದದಿರುವುದು ದುರಂತದ ಸಂಗತಿ ಎಂದು ಬಸವ ಮಾರ್ಗ ಪ್ರತಿಷ್ಠಾನದ ಅಧ್ಯಕ್ಷ ವಿಶ್ವಾರಾಧ್ಯ ಸತ್ಯಂಪೇಟೆ ಪ್ರಾಸ್ತಾವಿಕವಾಗಿ ಮಾತನಾಡಿ, ವಿಷಾಧಿಸಿದರು.

ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಡಾ.ಬಸವರಾಜ ಇಜೇರಿ ಮಾತನಾಡಿ ಬುದ್ಧನ ಕರುಣೆ, ಬಸವಣ್ಣನವರ ಅಂತಕರಣ ಡಾ.ಬಿ.ಆರ್.ಅಂಬೇಡ್ಕರರ ಸಂವಿಧಾನದ ಆತ್ಮದಂತೆ ನಡೆದುಕೊಂಡರೆ ನಮ್ಮ ಬದುಕು ಬಂಗಾರವಾಗುವುದಲ್ಲಿ ಅನುಮಾನವೇ ಇಲ್ಲ. ಪಟ್ಟಭದ್ರರ ಮಾತುಗಳನ್ನು ಆಲಿಸಿ ಸವೆಯೇ ಬದುಕಬೇಕಾದ ಜೀವನವನ್ನು ಭ್ರಾಂತಿಗಳ ತಾಣವಾಗಿಸಿದ್ದೇವೆ. ವಾಸ್ತವ ಬದುಕಿನಲ್ಲಿ ಜೀವಿಸುವ ಧೈರ್ಯವನ್ನು ನಾವು ಮಾಡುತ್ತಿಲ್ಲ. ಕರುಣೆ ಪ್ರೀತಿ ವಿಶ್ವಾಸ ಮನುಷ್ಯತ್ವವನ್ನು ಇಟ್ಟುಕೊಂಡು ಹೋದರೆ ಸಮಾಜದ ಸ್ಥಿತಿ ಉನ್ನತಕ್ಕೆರುತ್ತದೆ ಎಂದವರು ಅಭಿಪ್ರಾಯ ಪಟ್ಟರು. ಬಸವಮಾರ್ಗ ಪ್ರತಿಷ್ಠಾನದ ಮೂಲಕ ಪ್ರತಿ ತಿಂಗಳು ಚಿಂತನಾತ್ಮಕ ಕಾರ್ಯಕ್ರಮ ಹಮ್ಮಿಕೊಂಡು ಸಮಾಜದ ಅಜ್ಞಾನ ಅಂಧಕಾರದ ಕಸವನ್ನು ಹೊಡೆಯುವ ಕೆಲಸ ಮಾಡುತ್ತಿದೆ ಎಂದವರು ಶ್ಲಾಘಿಸಿದರು.

ಸಭೆಯನ್ನು ಜ್ಯೋತಿ ಬೆಳಗಿಸುವ ಮೂಲಕ ನಂದಿನಿ ಇಜೇರಿ ಉದ್ಘಾಟಿಸಿದರು. ಮಡಿವಾಳಮ್ಮ ಕುಂಬಾರ ಸ್ವಾಗತಿಸಿದರು. ಅಲ್ಲಮಪ್ರಭು ಸತ್ಯಂಪೇಟೆ, ಮಹಾದೇವಪ್ಪ ಗಾಳೆನೋರ, ಚೆನ್ನಮಲ್ಲಿಕಾರ್ಜುನ ಗುಂಡಾನೋರ ವಚನಗಳನ್ನು ಹಾಡಿದರು. ಚೆನ್ನಪ್ಪ ಹರನೂರ, ನಾಡಗೌಡ, ಬಸ್ಸಮ್ಮ ಮಾಲಿ ಮಾ,ಪಾಟೀಲ, ಗುರುಬಸವಯ್ಯ ಗದ್ದುಗೆ, ಸಂಗಮ್ಮ ಮುಡಬೂಳ, ಶಿವಕುಮಾರ ಆವಂಟಿ, ಚಂದ್ರು, ರಮೇಶ ವಜ್ಜಲ, ರಾಘವೇಂದ್ರ ಹಾರಣಗೇರಾ, ಚೇತನ ಮಳಗ, ಶರಣಪ್ಪ ಸಲಾದಪುರ, ಸಿದ್ಧರಾಮ ಹೊನ್ಕಲ್ಲ, ಶಿವು ಕರದಳ್ಳಿ, ಜಟ್ಟೆಪ್ಪ ಸತ್ಯಂಪೇಟೆ , ಷಣ್ಮುಖ ಕುಂಬಾರ , ರಾಜು ಕುಂಬಾರ ಮುಂತಾದವರು ಭಾಗವಹಿಸಿದ್ದರು. ಕೊನೆಯಲ್ಲಿ ಸಾಯಿಕುಮಾರ ಇಜೇರಿ ಶರಣು ಸಮರ್ಪಣೆ ಮಾಡಿದರು. ವೇದಿಕೆಯ ಮೇಲೆ, ಡಾ.ಬಸವರಾಜ ನಂದಿನಿ ಶಹಾಪುರ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here