ಸುರಪುರ: ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಬೇರೆ ಜಿಲ್ಲೆಗಳಂತೆಯೆ ನಮ್ಮ ಯಾದಗಿರಿ ಜಿಲ್ಲೆಯಲ್ಲಿಯೂ ೫೦:೫೦ರ ಅನುಪಾತದಲ್ಲಿ ಬಡ್ತಿ ನೀಡುವಂತೆ ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಹಳ್ಳೆಪ್ಪ ಕಾಂಜಾಂಜಿ ಆಗ್ರಹಿಸಿದ್ದಾರೆ.
ಈ ಕುರಿತು ಸಾರ್ವಜನಿಕ ಶಿಕ್ಷಣ ಇಲಾಖೆಯ ಜಿಲ್ಲಾ ಉಪ ನಿರ್ದೇಶಕರಿಗೆ ಪತ್ರ ಬರೆದಿರುವ ಅವರು, ಬಿ.ಇಡಿ. ಪದವಿ ಪಡೆದಿರುವ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಪ್ರೌಢಶಾಲೆಗೆ ಬಡ್ತಿ ನೀಡುವಂತೆ ನಮ್ಮ ಜಿಲ್ಲೆಯ ಶಿಕ್ಷಕರಿಗೂ ಬಡ್ತಿ ನೀಡಿ. ಬೇರೆ ಜಿಲ್ಲೆಗಳಲ್ಲಿ ೨೦೧೯ರ ಡಿಸೆಂಬರ್‌ನಿಂದಲೆ ಬಡ್ತಿ ಪ್ರಕ್ರಿಯೆ ಆರಂಭವಾಗಿದೆ. ಆದರೆ ಯಾದಗಿರಿ ಜಿಲ್ಲೆಯಲ್ಲಿ ಇದುವರೆಗೂ ಒಬ್ಬ ಶಿಕ್ಷಕರಿಗೂ ಬಡ್ತಿ ನೀಡಿರುವುದಿಲ್ಲ.
ವರ್ಗಾವಣೆ ಪ್ರಕ್ರಿಯೆ ಇನ್ನೇನು ಆರಂಭಗೊಳ್ಳಲಿದೆ. ಇದಕ್ಕಿಂತ ಮುಂಚೆ ಜೇಷ್ಠತಾ ಆಧಾರದಲ್ಲಿ ಶೀಘ್ರ ಬಡ್ತಿ ನೀಡಬೇಕು. ಇಲ್ಲವಾದರೆ ಉಪ ನಿರ್ದೇಶಕರ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.