ಸುರಪುರ: ಕೃಷ್ಣಾ ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಡುತ್ತಿರುವುದರಿಂದ ದೇವಾಪುರ ಹಳ್ಳಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿರುವುದರಿಂದ ಹಳ್ಳದ ದಂಡೆಯಲ್ಲಿನ ನೂರಾರು ಎಕರೆ ಭತ್ತದ ಬೆಳೆ ಜಲಾವೃತಗೊಂಡಿದ್ದು ರೈತರಲ್ಲಿ ಆತಂಕ ಮೂಡಿಸಿದೆ.
ಕೃಷ್ಣಾ ನದಿಗೆ ೨.೮೦ ಲಕ್ಷ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದ್ದು ಇದರಿಂದ ದೇವಾಪುರ ಗ್ರಾಮದ ಸಮೀಪದಲ್ಲಿನ ಹಳ್ಳಕ್ಕು ನೀರು ಹೆಚ್ಚಾಗಿದೆ.ಸುಮಾರು ಐದು ನೂರು ಎಕರೆ ಬೆಳೆ ನೀರಲ್ಲಿ ನಿಂತಿದ್ದು ಮತ್ತೆ ಪ್ರವಾಹದ ಭೀತಿಯಿಂದ ರೈತರು ನಲುಗಿದ್ದಾರೆ.
ಈ ಕುರಿತು ದೇವಾಪುರ ಗ್ರಾಮದ ರೈತರಾದ ವಿರೇಶ ಮುಷ್ಠಳ್ಳಿ ಹಾಗು ಭೀಮರಾಯ ಶಿಕಾರಿ ಮಾತನಾಡಿ,ಕಳೆದ ವರ್ಷವೆ ನೂರಾರು ಎಕರೆ ರೈತರ ಸಾವಿರಾರು ಎಕರೆ ಬೆಳೆ ನಷ್ಟವಾಗಿದ್ದು ಒಂದು ರುಪಾಯಿಕೂಡ ಪರಿಹಾರ ಬಂದಿಲ್ಲ.ಈಗ ಮತ್ತೆ ಸಾಲ ಮಾಡಿ ಭತ್ತದ ಬೆಳೆಗೆ ಎರಡು ಬಾರಿ ರಸಗೊಬ್ಬರ ಹಾಕುವ ಜೊತೆಗೆ ಕ್ರಿಮಿನಾಶಕ ಕೆಲಸಗಾರರಿಗೆ ಎಂದು ಲಕ್ಷಾಂತರ ರೂಪಾಯಿ ಖರ್ಚಾಗಿದೆ.ಈಗ ಮತ್ತೆ ಪ್ರವಾಹ ಬರುವ ಭೀತಿ ಎದುರಾಗಿದೆ.ಇದರಿಂದ ಮತ್ತೆ ಬೆಳೆ ನಷ್ಟವಾಗುವ ಸಾಧ್ಯತೆಯಿದೆ.
ಈಬಾರಿ ಬೆಳೆ ನಷ್ಟವಾದರೆ ನಮಗೆ ಸಾವು ಒಂದೆ ದಾರಿಯಾಗಲಿದೆ ಎಂದು ಬೇಸರದಿಂದ ನುಡಿಯುತ್ತಾರೆ.ಅಲ್ಲದೆ ಕೂಡಲೆ ಸರಕಾರ ಬೆಳೆ ನಷ್ಟಕ್ಕೊಳಗಾಗುವ ಎಲ್ಲಾ ರೈತರಿಗೆ ತ್ವರಿತವಾಗಿ ಪರಿಹಾರ ನೀಡುವತ್ತ ಮುಂದಾಗಬೇಕೆಂದು ಒತ್ತಾಯಿಸಿದ್ದಾರೆ.
ಕಳೆದ ವರ್ಷ ರೈತರಿಗೆ ಪರಿಹಾರ ಸಿಗದೆ ಪರದಾಡುತ್ತಿರುವ ರೈತರಿಗೆ ಮತ್ತೆ ಪ್ರವಾಹ ಗಾಯದ ಮೇಲೆ ಬರೆ ಎಳೆದಂತಾಗಲಿದೆ.ಸರಕಾರ ಈಗಲೆ ಎಚ್ಚೆತ್ತು ರೈತರ ನೆರವಿಗೆ ಮುಂದಾಗುವುದೆ ಕಾದು ನೋಡಬೇಕಿದೆ.