ವಾಡಿ: ಶಾಲೆಯನ್ನೇ ನಂಬಿಕೊಂಡು ಬದುಕಿನ ಬಂಡಿ ಎಳೆಯುತ್ತಿರುವ ಅತಿಥಿ ಶಿಕ್ಷಕರನ್ನು ಕೊರೊನಾ ಪ್ಯಾಕೇಜ್‍ನಿಂದ ಹೊರಗಿಡುವ ಮೂಲಕ ಸರಕಾರವೇ ನಮ್ಮ ತಿಥಿ ಮಾಡಲು ಹೊರಟಿದೆ ಎಂದು ಸರಕಾರಿ ಶಾಲಾ ಕಾಲೇಜುಗಳ ಅತಿಥಿ ಶಿಕ್ಷಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿ ಹಾಗೂ ಅತಿಥಿ ಶಿಕ್ಷಕರ ಹೋರಾಟ ಸಮಿತಿ ನೇತೃತ್ವದಲ್ಲಿ ಸೋಮವಾರ ವಾಡಿ ನಗರದ ಮೌಲಾನಾ ಅಬ್ದುಲ್ ಕಲಾಂ ಆಜಾದ್ ವೃತ್ತದಲ್ಲಿ ಸಾಂಕೇತಿಕ ಪ್ರತಿಭಟನೆ ನಡೆಸುವ ಮೂಲಕ ಸರಕಾರದ ವಿರುದ್ಧ ಟೀಕಾಪ್ರಹಾರ ನಡೆಸಿದರು. ಕ್ರೂರಿ ಕೊರೊನಾ ಕಾಲಿಟ್ಟ ಗಳಿಗೆಯಿಂದ ಕಳೆದ ಐದಾರು ತಿಂಗಳಿಂದ ಶಾಲೆಗಳಿಗೆ ಬೀಗ ಬಿದ್ದಿದೆ. ಗೌರವಧನ ನಂಬಿಕೊಂಡು ಉಪಜೀವನ ನಡೆಸುತ್ತಿದ್ದ ನಮಗೆ ಭಾರಿ ಹೊಡೆತ ಬಿದ್ದಿದೆ. ಆರ್ಥಿಕ ಸಂಕಷ್ಟ ಎದುರಾಗಿ ಬದುಕು ದುಸ್ಥರಗೊಂಡಿದೆ. ಸರಕಾರ ಪ್ರಕಟಿಸಿದ ಕೊರೊನಾ ಪ್ಯಾಕೇಜ್‍ನಿಂದ ಅತಿಥಿ ಶಿಕ್ಷಕರನ್ನು ಹೊರಗಿಟ್ಟಿದ್ದಾರೆ. ನಮ್ಮ ಕಷ್ಟ ಸರಕಾರಕ್ಕೆ ಅರ್ಥವಾಗಿಲ್ಲ. ಹಸಿವಿನಿಂದ ಸಾಯಿರಿ ಎಂದು ಸರಕಾರವೇ ನಮಗೆ ಹೇಳಿದಂತಿದೆ ಎಂದು ಅತಿಥಿ ಶಿಕ್ಷಕರಾದ ಶಿವಾನಂದ ಪೂಜಾರಿ, ಶ್ರೀದೇವಿ ಎಸ್.ಮಲಕಂಡಿ ಹಾಗೂ ವಿ.ಕೆ.ಪದ್ಮರೇಖಾ ದೂರಿದರು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ಶಿಕ್ಷಣ ಉಳಿಸಿ ಸಮಿತಿಯ ಸಹ ಸಂಚಾಲಕ ಯೇಸಪ್ಪ ಕೇದಾರ, ರಾಜ್ಯದ ಶಾಲಾ ಕಾಲೇಜುಗಳ ಅತಿಥಿ ಶಿಕ್ಷಕರಿಗೆ ಕೊರೊನಾ ಪ್ಯಾಕೇಜ್ ಘೋಷಣೆ ಮಾಡಬೇಕು. ಗೌರವಧನ ಹೆಚ್ಚಿಸಿ ಉದ್ಯೋಗ ಭದ್ರತೆ ಒದಗಿಸಬೇಕು. ಮುಂಬರುವ ಎಲ್ಲಾ ನೇಮಕಾತಿಗಳಲ್ಲಿ ಅತಿಥಿ ಶಿಕ್ಷಕರಿಗೆ ಪ್ರಾತಿನಿಧ್ಯ ನೀಡಬೇಕು. ಗೌರವಧನದಲ್ಲಿ ದುಡಿದ ಈ ಶಿಕ್ಷಕರನ್ನು ನಿರ್ಧಿಷ್ಟ ಸಂಖ್ಯೆಯಲ್ಲಿ ಖಾಯಂ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಬೇಕು. ಅತಿಥಿ ಶಿಕ್ಷಕರ ಗೌರವಧನ ಹೆಚ್ಚಿಸಬೇಕು. ಸೇವಾ ಪ್ರಮಾಣಪತ್ರ ನೀಡಬೇಕು. ಪಿಎಫ್ ಮತ್ತು ಇಎಸ್‍ಐ ಸೌಲಭ್ಯಗಳನ್ನು ನೀಡಲು ಕ್ರಮಕೈಗೊಳ್ಳಬೇಕು. ಯಾವುದೇ ಕಾರಣಕ್ಕೂ ಅತಿಥಿ ಶಿಕ್ಷಕರನ್ನು ಸರಕಾರ ಕಡೆಗಣಿಸಬಾರದು. ನಿರ್ಲಕ್ಷ್ಯ ಧೋರಣೆ ತೆಳದರೆ ಉನ್ನತ ಹಂತದ ಹೋರಾಟಕ್ಕೆ ಕರೆ ನೀಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿಯ ಜಿಲ್ಲಾ ಸಂಚಾಲಕ ವೀರಭದ್ರಪ್ಪ ಆರ್.ಕೆ, ಶಿಕ್ಷಕರಾದ ಶಿವಾನಂದ ಪೂಜಾರಿ, ಶರಣು ದೋಶೆಟ್ಟಿ, ಸೀತಾಬಾಯಿ ಹೇರೂರ, ಈರಣ್ಣ ನಾಟೀಕಾರ, ಆಕಾಶ ಭರಮನ್ ಸೇರಿದಂತೆ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಸರಕಾರಕ್ಕೆ ಬರೆದ ಮನವಿ ಪತ್ರವನ್ನು ನಾಲವಾರ ಕಂದಾಯ ನಿರೀಕ್ಷಕ ಮಹ್ಮದ್ ಸುಬಾನ್ ಸ್ವೀಕರಿಸಿದರು.