ಭಾಗ-1: ಸತ್ಯಂಪೇಟೆ ಕಾಲಂ: ಮೌಢ್ಯದ ಗುಂಡಿಗೆ ತಳ್ಳುತ್ತಿರುವ ಸರಕಾರ!

2
528

ಬೌದ್ಧಿಕ ದಾರಿದ್ರ್ಯ ಇದ್ದರ ಕೈಯಲ್ಲಿ ಆಡಳಿತದ ಚುಕ್ಕಾಣಿ ಸಿಕ್ಕರೆ ಏನಾಗಬಹುದು ಎಂಬುದಕ್ಕೆ ಕುಮಾರ ಸ್ವಾಮಿ ಅವರ ಸರಕಾರ ಸಾಕ್ಷಿಯಾಗಿದೆ. ಕಾಂಗ್ರೆಸ್ ಪಕ್ಷದ ಬೆಂಬಲದೊಂದಿಗೆ ಅಧಿಕಾರಕ್ಕೆ ಬಂದ ದಿನಗಳಿಂದ ಇಲ್ಲಿಯವರೆಗೆ ಕುಮಾರ ಸ್ವಾಮಿ ಹಾಗೂ ಅವರ ಕುಟುಂಬಸ್ಥರು ದೇವಾಲಯ ಸುತ್ತುವುದು ನಿಲ್ಲಿಸಿಲ್ಲ. ನಿಲ್ಲಿಸುವ ಯಾವ ಲಕ್ಷಣವೂ ಇಲ್ಲ. ಎಚ್.ಡಿ.ರೇವಣ್ಣ ಅವರಂತೂ ದೈವತ್ವವೆಂಬ ವಿಷಮಶೀತ ಜ್ವರದಿಂದ ಬಳಲುತ್ತಿದ್ದಾರೆ. ತಾವಷ್ಟೆ ಈ ಜ್ವರದಿಂದ ಬಳಲಿದ್ದರೆ ನಾವು ಯಾರೂ ಪ್ರತಿಕ್ರಿಯಿಸುವ ಅಗತ್ಯ ಇರಲಿಲ್ಲ. ಆದರೆ ದೇವಾಲಯ ಸುತ್ತುವ ರೋಗವನ್ನು ರಾಜ್ಯದ ಜನತೆಗೆ ಹಬ್ಬಿಸುವಲ್ಲಿ ಇವರೆಲ್ಲ ತೊಡಗಿದ್ದಾರೆ.

ನೀರ ಕಂಡಲ್ಲಿ ಮುಳುಗುವರಯ್ಯಾ,

Contact Your\'s Advertisement; 9902492681

ಮರನ ಕಂಡಲ್ಲಿ ಸುತ್ತುವರಯ್ಯಾ.

ಬತ್ತುವ ಜಲವ, ಒಣಗುವ ಮರನ

ಮೆಚ್ಚಿದವರು ನಿಮ್ಮನೆತ್ತ ಬಲ್ಲರು ಕೂಡಲಸಂಗಮದೇವಾ.

ಶರಣರ ವಿಚಾರಗಳು ಸ್ಪಟಿಕದ ಶಲಾಕೆಯಂತೆ ಸ್ಪಷ್ಟವಾಗಿವೆ. ವಾಸ್ತವ, ವೈಜ್ಞಾನಿಕ, ವೈಚಾರಿಕವಾಗಿವೆ. ವಚನಗಳ ವಿಚಾರ ಅಳವಡಿಸಿಕೊಳ್ಳಬೇಕಾದ ಸರಕಾರ ಅಜ್ಞಾನವನ್ನು ಅಪ್ಪಿಕೊಳ್ಳುತ್ತಿದೆ.

ಕಳೆದ ಸರಕಾರ ಜಾರಿಗೆ ತಂದಿದ್ದ ಮೌಢ್ಯ ವಿದೇಯಕದ ಕಾನೂನು ವಿಧಾನಸೌಧದಲ್ಲಿ ಧೂಳು ತಿನ್ನುತ್ತಾ ಮೆತ್ತಗೆ ಮಲಗಿದೆ. ಅದನ್ನು ತಟ್ಟಿ ಎಬ್ಬಿಸಬೇಕಾದ ಸರಕಾರ ಅದರ ತಂಟೆಗೆ ಹೋಗದೆ ಜನತೆಯನ್ನು ಮತ್ತಷ್ಟು ಕಂದಕಕ್ಕೆ ದೂಡುತ್ತಿದೆ. ಸಂವಿಧಾನದ ಪರಿಚ್ಛೇದ 20/ A ಮೌಢ್ಯವನ್ನು ಬೆಳೆಸುವುದು ಹಾಗೂ ಅದನ್ನು ಪರಿಪೋಷಿಸುವುದು ಕಾನೂನು ಬಾಹಿರ.

ಜೂನ ಆರಂಭಗೊಂಡರು ರಾಜ್ಯದಲ್ಲಿ ಮಳೆ ಚುರುಕುಗೊಂಡಿಲ್ಲ. ಜನ ಕಂಗಾಲಾಗಿದ್ದಾರೆ. ಸರಕಾರದಲ್ಲಿರುವ ಅಧಿಕಾರಿಗಳಿಗೆ ರಾಜ್ಯ ಸರಕಾರ ಹೋಮ, ಹವನ, ಯಜ್ಞ ಮಾಡಲು ಆದೇಶ ಮಾಡಿದೆ. ಇದೆಂಥ ದುರಂತ! ಯಜ್ಞ ಯಾಗ ಹೋಮ ಹವನ ಪರ್ಜನ್ಯ ಜಪಗಳಿಗೆ ಮಳೆ ಬರಿಸಲು ಸಾಧ್ಯವೆ? ನಿಜಕ್ಕೂ ಮಳೆ ಈ ಕ್ರಿಯೆಗಳಿಂದ ಬರುತ್ತಿದ್ದರೆ ಇಡೀ ರಾಜ್ಯದ ಜನರಿಗೆ ಕರೆಕೊಟ್ಟು ಎಲ್ಲಾ ಪ್ರಜೆಗಳಿಂದ ಹೋಮ ಹವನ ಇತ್ಯಾದಿ ಮಾಡಿಸಬೇಕಿತ್ತಲ್ಲವೆ?.

ಒಂದು ಕಡೆ ಜನತೆಯನ್ನು ಮೌಢ್ಯಕ್ಕೆ ಗುರಿ ಮಾಡುವುದು, ಇನ್ನೊಂದು ಕಡೆ ಆ ನೆಪದಲ್ಲಿ ಯರ್ರಾಬಿರ್ರಿ ಹಣ ಪೋಲು ಮಾಡುವುದು. ಇದು ಚುನಾಯಿತ ಸರಕಾರಗಳು ಮಾಡುವ ಕೆಲಸವೆ ? ಸರಕಾರದ ಶಿಕ್ಷಣ ಮಂತ್ರಿ ಜಿ.ಟಿ. ದೇವೇಗೌಡ ಎಂಬ ಮಹಾಶಯರೊಬ್ಬರು ಸಮಾರಂಭವೊಂದರಲ್ಲಿ ಪೇಜಾವರ ಶ್ರೀಗಳ ಆಶೀರ್ವಾದದಿಂದ ಮಳೆ ಆಗುತ್ತಿದೆ ಎಂದಿದ್ದಾರೆ!.

ಇವರೆಲ್ಲರ ತಲೆಯಲ್ಲಿ ಮಿದುಳು ಇದೆಯೋ ? ಅಥವಾ ಅದು ನಿಷ್ಕ್ರಿಯಗೊಂಡಿದೆಯೋ ? ಎಂಬ ಅನುಮಾನ ರಾಜ್ಯದ ಹಲವರಿಗೆ ಕಾಡುತ್ತಿದೆ. ಮಳೆ ಬಾರದೆ ನಾಡಿನ ಜನ ಕಂಗಾಲಾದಾಗ ಆ ಜನಗಳಿಗೆ ವಾಸ್ತವಿಕ ಪರಿಸ್ಥಿತಿಯನ್ನು ಮನದಷ್ಟು ಮಾಡಿಸಬೇಕು. ನಾಡಿನ ತುಂಬೆಲ್ಲ ಹಸಿರು ಮಾಯವಾಗಿದೆ. ಪಶು, ಪಕ್ಷಿ, ಹಕ್ಕಿ, ಸರಿಸೃಪಗಳ ಸಂಕುಲ ನಾಶವಾಗಿದೆ. ಕೆರೆ ಹಳ್ಳ ಬಾವಿಗಳು ಬತ್ತಿ ಹೋಗಿವೆ. ಇದಕ್ಕೆಲ್ಲ ಮುಖ್ಯ ಕಾರಣ ನಾವೆಲ್ಲ ಇಂದು ಕಾಂಕ್ರೀಟ್ ಕಾಡಿನಲ್ಲಿ ವಾಸಮಾಡುತ್ತಿದ್ದೇವೆ. ಇದಕ್ಕೆಲ್ಲ ಮುಖ್ಯ ಕಾರಣ ಮನುಷ್ಯನ ಸ್ವಾರ್ಥ.

ಈ ಸಂಗತಿಗಳನ್ನು ಜನತೆಗೆ ಮನದಟ್ಟು ಮಾಡಿಸಬೇಕು. ಹಸಿರೇ ನಮ್ಮ ಉಸಿರು ಎಂಬುದು ನಮ್ಮ ಸರಕಾರಗಳ ಧೇಯ್ಯೋದ್ದೇಶವಾಗಬೇಕು. ಹಸಿರು ಉಳಿದರೆ ನೀರು ಗಾಳಿ ಬೆಳಕು ಎಂಬ ಸಂಗತಿಯನ್ನು  ಗಟ್ಟಿಗೊಳಿಸಬೇಕು. ಮಹಲಿನಲ್ಲಿಯೇ ಇರಲಿ ಗುಡಿಸಲ ವಾಸಿಯೇ ಇರಲಿ ಎಲ್ಲರಿಗೂ ಮರ ಉಳಿಸಿ ಬೆಳೆಸುವುದನ್ನು ಕಡ್ಡಾಯ ಮಾಡಬೇಕು. ಮಳೆ ನೀರು ಬಳಕೆಯ ಹಲವಾರು ಯೋಜನೆಗಳು ಸಮರ್ಪಕವಾಗಿ ಜಾರಿಯಾಗುವಂತೆ ನೋಡಿಕೊಳ್ಳಬೇಕು.

ಇದೆಲ್ಲ ಮರೆತ ಸರಕಾರ ತನ್ನ ಹೊಣೆಗೇಡಿತನ ಪ್ರದರ್ಶಿಸಿ ಜಾರಿಕೊಳ್ಳುತ್ತಿದೆ. ತನ್ನ ವೈಫಲ್ಯತೆಯನ್ನು ದೈವದ ಮೇಲೆ ಹಾಕಿ ಬಚಾವಾಗುತ್ತಿದೆ. ಜೊತೆ ಜೊತೆಗೆ ಇಲ್ಲಿನ ಜನಗಳನ್ನು ಮೂಢತನದ ಕಂದಕಕ್ಕೆ ತಳ್ಳುತ್ತಿದೆ.

-ವಿಶ್ವಾರಾಧ್ಯ ಸತ್ಯಂಪೇಟೆ

2 ಕಾಮೆಂಟ್ಗಳನ್ನು

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here