ಶಹಾಪುರ : ಸಂಘ ಸಂಸ್ಥೆಗಳು ಯುವಕರಲ್ಲಿ ಅಡಗಿರುವ ಪ್ರತಿಭೆಗಳನ್ನು ಹೆಕ್ಕಿ ತೆಗೆದು ಅವರಿಗೆ ಸೂಕ್ತವಾದ ವೇದಿಕೆ ಕಲ್ಪಿಸಿಕೊಡುವುದರ ಜೊತೆಗೆ ಸಮಾಜಮುಖಿಯಾಗಿ ಕಾರ್ಯ ನಿರ್ವಹಿಸಲಿ ಎಂದು ಕನ್ನಡಪರ ಹೋರಾಟಗಾರರಾದ ಡಾ. ಶರಣು ಬಿ. ಗದ್ದುಗೆ ಹೇಳಿದರು.
ನಗರದ ದೇಶಮುಖ್ ಬಡಾವಣೆಯಲ್ಲಿರುವ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ಹಮ್ಮಿಕೊಂಡಿರುವ ಶ್ರೀ ನಟರಾಜ ನೃತ್ಯ ಹಾಗೂ ಸಾಂಸ್ಕೃತಿಕ ಸಂಸ್ಥೆಯ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಇನ್ನೋರ್ವ ಅತಿಥಿಗಳಾದ ಶಹಾಪೂರ್ ಪೊಲೀಸ್ ಠಾಣೆಯ ಸಿಪಿಐ ಚನ್ನಯ್ಯ ಹಿರೇಮಠ ಮಾತನಾಡಿ ಆಗಾಗ ಮನುಷ್ಯ ಸಂಸಾರ ಜಂಜಾಟದಿಂದ ಹೊರಬ೦ದು ಕಲೆ ಸಾಹಿತ್ಯ ಸಂಗೀತ ಮತ್ತು ನೃತ್ಯ ಹಾಗೂ ಇಂತಹ ಮುಂತಾದ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರಿಂದ ಮಾನಸಿಕ ಹಾಗೂ ದೈಹಿಕವಾಗಿ ಸದೃಢರಾಗಿರಲು ಸಾಧ್ಯ ವಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಆದರ್ಶ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಶಿವರಾಜ್ ದೇಶಮುಖ್ ಅವರು ಇದೊಂದು ಸಂಸ್ಥೆ ಇಂದು ಚಿಗುರೊಡೆದು ಬಹುದೊಡ್ಡ ಹೆಮ್ಮರವಾಗಿ ಬೆಳೆಯಲಿ ಎಂದು ಆಶಿಸಿದರು ಮುಂಬರುವ ದಿನಗಳಲ್ಲಿ ಕಲಾವಿದರಿಗೆ ಆಶ್ರಯ ತಾಣವಾಗಲಿ ಅಲ್ಲದೆ ಮತ್ತಷ್ಟು ವಿಭಿನ್ನ ರೀತಿಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿ ಎಂದು ಶುಭ ಹಾರೈಸಿದರು.
ಸಮಾರಂಭದ ವೇದಿಕೆ ಮೇಲೆ ಮುಡಬೂಳ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಶ್ರೀಮತಿ ರಕ್ಷಿತಾ ಅರವಿಂದರೆಡ್ಡಿ,ಖ್ಯಾತ ಕಲಾವಿದೆ ಶ್ರೀಮತಿ ಕವಿತಾ ಪತ್ತಾರ್, ಜಿಲ್ಲಾಧಿಕಾರಿಗಳ ಕಾರ್ಯಾಲಯದ ಲೆಕ್ಕಾಧೀಕ್ಷಕರಾದ ಮಲ್ಲಿಕಾರ್ಜುನ್ ಸಿ ಕೊಲ್ಲೂರು,ಸಂಸ್ಥೆಯ ಕಾರ್ಯದರ್ಶಿ ಸಂಗೀತಾ ಹೂಗಾರ್, ಕಲಾನಿಕೇತನ ಟ್ರಸ್ಟ್ ಅಧ್ಯಕ್ಷ ಬಸವರಾಜ ಸಿನ್ನೂರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡಿದ್ದರು.
ನಂತರ ವೈಷ್ಣವಿ ಪತ್ತಾರ್,ಮೇಘಾ ಕಟ್ಟಿಮನಿ,ಗಂಗಾಧರ ಹೊಟ್ಟಿ,ಸಂಜು ಬೊಮ್ಮಣ್ಣಿ,ಬಸವರಾಜ್ ಅಯ್ಯಾಳ, ಅವರಿಂದ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು ಈ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ ಕಲಾವಿದರಿಗೆ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು.
ಸಂಸ್ಥೆಯ ಅಧ್ಯಕ್ಷರಾದ ಸುರೇಖಾ ಕುಂಬಾರ ಪ್ರಾಸ್ತಾವಿಕ ಮಾತುಗಳನ್ನಾಡಿದರು ದೇವಿಂದ್ರ ಅಂಗಡಿ ಸ್ವಾಗತಿಸಿದರು ಸ್ವಾತಿ ಕಲಬುರಗಿ ಪ್ರಾರ್ಥಿಸಿದರು ಶರಣು ಯಡ್ರಾಮಿ ನಿರೂಪಿಸಿದರು ಶಂಕರ ಹುಲ್ಕಲ್ ವಂದಿಸಿದರು.