ಕಲಬುರಗಿ: ಪ್ರಸಕ್ತ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲಾ ಸ್ವೀಪ್ ಸಮಿತಿಯಿಂದ ಶುಕ್ರವಾರ ಕಲಬುರಗಿ ನಗರದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ (ಪುರುಷ) ಯಲ್ಲಿ ಚಿತ್ರಕಲಾ ಸ್ಪರ್ಧೆಯ ಮೂಲಕ ಮತದಾನ ಕುರಿತು ಜಾಗೃತಿ ಮೂಡಿಸಲಾಯಿತು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಜಿಲ್ಲಾ ಸ್ವೀಪ್ ಸಮಿತಿಯ ಅಧ್ಯಕ್ಷರಾದ ಡಾ. ಪಿ. ರಾಜಾ ಅವರು ಸ್ವತ: ಕುಂಚ ಹಿಡಿದು ಚಿತ್ರ ಬಿಡಿಸಿದರು. ಈ ಸಂದರ್ಭದಲ್ಲಿ ಶಾಲಾ ಮಕ್ಕಳು ಕೂಡಾ ಮತದಾನ ನಮ್ಮೆಲ್ಲರ ಹಕ್ಕು, ಆಮಿಷಕ್ಕೆ ಒಳಗಾಗದಿರಿ ನಿಮ್ಮ ಮತ ಅಮೂಲ್ಯ, ವೋಟ್ ಫಾರ್ ಕಲಬುರಗಿ, ವೋಟ್ ಫಾರ್ ಇಂಡಿಯಾ, ಮತದಾನ ನಮ್ಮೆಲ್ಲರ ಹಕ್ಕು ಮುಂತಾದ ಘೋಷಣೆವುಳ್ಳ ಚಿತ್ರಗಳಿಗೆ ರಂಗು ತುಂಬಿದರು.
ಚುನಾವಣೆ ಸಂದರ್ಭದಲ್ಲಿ ಅಭ್ಯರ್ಥಿಗಳು ಹಣ, ಮದ್ಯ, ಸೀರೆ ಮುಂತಾದವುಗಳನ್ನು ಹಂಚಲಿದ್ದು, ಇಂತಹ ಆಮಿಷಗಳಿಗೆ ಮರುಳಾಗಬೇಡಿ. ಪ್ರತಿಯೊಬ್ಬರೂ ಮುಕ್ತ ಮತ್ತು ನಿರ್ಭಿತಿಯಿಂದ ಮತ ಚಲಾಯಿಸುವ ಮೂಲಕ ಪ್ರಜಾಪ್ರಭುತ್ವ ಎತ್ತಿ ಹಿಡಿಯಬೇಕು ಎಂದು ಶಾಲಾ ಮಕ್ಕಳು ಜನತೆಗೆ ಸಂದೇಶ ಸಾರಿದರು.
ಈ ಸಂದರ್ಭದಲ್ಲಿ ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತೆ ಹಾಗೂ ಗುಲಬರ್ಗಾ ಉತ್ತರ ವಿಧಾನಸಭಾಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ಬಿ. ಫೌಜಿಯಾ ತರನ್ನುಮ್, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಶಾಂತಗೌಡ, ಮಹಾನಗರ ಪಾಲಿಕೆ ಪರಿಸರ ಇಂಜಿನಿಯರ್ ಮುನಾಫ್ ಪಟೇಲ್, ವಿವಿಧ ಶಾಲಾ ಶಿಕ್ಷಕರು ಹಾಗೂ ಶಾಲಾ ಮಕ್ಕಳು ಹಾಜರಿದ್ದರು.