ಕೋವಿಡ್ 2ನೇ ಅಲೆ‌ಯ ಸಂದಿಗ್ಧ ಸ್ಥಿತಿ‌ ಸಮರ್ಥವಾಗಿ ಎದುರಿಸಲು ಸಿಎಂ ಕರೆ‌

0
35

ಕಲಬುರಗಿ: ಕೊರೋನಾ‌ ಎರಡನೇ ಅಲೆ ನಮ್ಮ ನಿರೀಕ್ಷೆಗೆ ಮೀರಿದೆ. ಇಂತಹ ಸಂದಿಗ್ಧ ಸ್ಥಿತಿಯನ್ನು ಸಮರ್ಥವಾಗಿ ಎದುರಿಸೋಣ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಕರೆ ನೀಡಿದರು.

ಶನಿವಾರ ಅವರು ಬೆಂಗಳೂರಿನ ತಮ್ಮ ಗೃಹ ಕಚೇರಿ ಕೃಷ್ಣಾದಿಂದ ರಾಜ್ಯದ ವಿವಿಧ ಜಿಲ್ಲೆಯ ಕೋವಿಡ್ ಚಿಕಿತ್ಸೆಯಲ್ಲಿ ನಿರತ 11 ವೈದ್ಯರೊಂದಿಗೆ ವಿಡಿಯೋ ಸಂವಾದ ನಡೆಸಿ ಕೋವಿಡ್ ನಿಯಂತ್ರಣಕ್ಕೆ‌ ಚಿಕಿತ್ಸೆ ಮತ್ತು ಸಲಹೆ ಪಡೆದು ಮಾತನಾಡಿದರು.

Contact Your\'s Advertisement; 9902492681

ಇಂದಿನ ಪರಿಸ್ಥಿತಿಯಲ್ಲಿ ಜನರ ಜೀವ ಉಳಿಸುವುದು ನಮ್ಮ ಪ್ರಥಮಾದ್ಯತೆ ಆಗಬೇಕಾಗಿದೆ. ಇದಕ್ಕಾಗಿ ಆಕ್ಸಿಜನ್, ಔಷಧಿಗಳು ಹಾಗೂ ಮಾನವ ಸಂಪನ್ಮೂಲಗಳನ್ನು ಸಮರ್ಪಕವಾಗಿ ಬಳಸುವಂತೆ ಅವರು ಕರೆ ನೀಡಿದರು.

ಕಳೆದೊಂದು ವರ್ಷದಿಂದ ಮಹಾಮಾರಿ ಕೊರೋನಾ ಕಾರಣದಿಂದ ವೈದ್ಯರು ಸೇರಿದಂತೆ ಆರೋಗ್ಯ ಸಿಬ್ಬಂದಿಗಳ ಮೇಲೆ ಕೆಲಸದ ಒತ್ತಡ ಹೆಚ್ಚಾಗಿದೆ. ವೈದ್ಯರು, ನರ್ಸ್ ಸೇರಿದಂತೆ ಎಲ್ಲ ವೈದ್ಯಕೀಯ ಸಿಬ್ಬಂದಿ ನಮ್ಮ ಅಮೂಲ್ಯ ಆಸ್ತಿ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಣ್ಣಿಸಿದರು.

ಇಂತಹ ವೈದ್ಯಕೀಯ ಸಿಬ್ಬಂದಿ ರಕ್ಷಣೆಗೆ ಸರ್ಕಾರ ಬದ್ಧವಿದೆ. ಸೋಂಕು ತೀವ್ರಗೊಳ್ಳುತ್ತಿರುವ ಈ ಸಂದರ್ಭದಲ್ಲಿ ವೈದ್ಯರು ಮಾನವೀಯತೆ ನೆಲೆಗಟ್ಟಿನಲ್ಲಿ ಕೆಲಸ ಮಾಡುವ ಮೂಲಕ ಸೋಂಕಿತರು ಹಾಗೂ ತಮ್ಮ ಜೀವ ರಕ್ಷಣೆಗೆ ಮುಂದಾಗಬೇಕು ಎಂದು ಕರೆ ನೀಡಿದರು.

ಇದಕ್ಕೂ ಮುನ್ನ ರಾಜ್ಯದ ವಿವಿಧ ಜಿಲ್ಲೆಯ 11 ವೈದ್ಯರೊಂದಿಗೆ ಪ್ರತ್ಯೇಕವಾಗಿ ಸಂವಾದ‌ ನಡೆಸಿದ ಮುಖ್ಯಮಂತ್ರಿಗಳು ವೈದ್ಯರು ಮತ್ತು ಅವರ ಕುಟುಂಬದವರ ಆರೋಗ್ಯ ಕ್ಷೇಮ ವಿಚಾರಿಸಿ ಆಯಾ ಜಿಲ್ಲೆಯಲ್ಲಿ ಪ್ರಸ್ತುತ ಕೋವಿಡ್ ಪರಿಸ್ಥಿತಿ, ನಿಯಂತ್ರಣಕ್ಕೆ ಕೈಗೊಂಡ ಕ್ರಮ, ಆಕ್ಸಿಜನ್, ರೆಮಿಡಿಸಿವಿರ್ ಪೂರೈಕೆ, ಮಾನವ ಸಂಪನ್ಮೂಲ ಬಳಕೆ, ಗ್ರಾಮೀಣ ಭಾಗದಲ್ಲಿ ‌ಸೋಂಕು ತಡೆಗೆ ಕೈಗೊಂಡ ಕ್ರಮ ಮತ್ತು ಕೋವಿಡ್ ಲಸಿಕೆ ಬಗ್ಗೆ ಮಾಹಿತಿ ಪಡೆದುಕೊಂಡರು.

ಮುಖ್ಯಮಂತ್ರಿಗಳ ವಿಡಿಯೋ ಸಂವಾದದಲ್ಲಿ ಕಲಬುರಗಿ ಜಿಮ್ಸ್ ಆಸ್ಪತ್ರೆಯ ಮೆಡಿಸಿನ್ ವಿಭಾಗದ ಡಾ.ಧನರಾಜ ಜಿ.ಡಿ. ಭಾಗವಹಿಸಿದ್ದರು.

ಕಲಬುರಗಿ ಜಿಲ್ಲೆಯಲ್ಲಿ ಪ್ರಸ್ತುತ ಪರಿಸ್ಥಿತಿ ಹೇಗಿದೆ ಎಂದು ಸಿ.ಎಂ. ಅವರು ಕೇಳಿದರು. ಇದಕ್ಕೆ ಉತ್ತರಿಸಿದ ಡಾ.ಧನರಾಜ ಜಿ.ಡಿ. ಅವರು ಪ್ರಸ್ತುತ ಜಿಲ್ಲೆಯಲ್ಲಿ 15536 ಸಕ್ರಿಯ ಪ್ರಕರಣಗಳಿದ್ದು, ಇದುವರೆಗೆ ಕೋವಿಡ್ ಸೋಂಕಿಗೆ 612 ಜನ ತುತ್ತಾಗಿದ್ದಾರೆ. ವಾರದ ಹಿಂದೆ ಆಕ್ಸಿಜನ್‌ ಬೆಡ್ ಸಮಸ್ಯೆವಿತ್ತು, ಆದರೆ ಕಳೆದ 2-3 ದಿನದಿಂದ ಸೋಂಕಿನ ತೀವ್ರಗತಿ ಇಳಿಕೆಯಾಗಿದ್ದರಿಂದ ಪ್ರಸ್ತುತ ಜಿಲ್ಲೆಯಲ್ಲಿ ಹಾಸಿಗೆ ಸಮಸ್ಯೆ ಇಲ್ಲ ಎಂದರು.

416 ಹಾಸಿಗೆಗಳು ಕೋವಿಡ್ ಸೋಂಕಿತರಿಗೆ‌ ಮೀಸಲಿಡಲಾಗಿದೆ. ಇದರಲ್ಲಿ 101 ಐ.ಸಿ.ಯು, 76 ಹೆಚ್.ಡಿ.ಯೂ ಹಾಗೂ ಉಳಿದವು ಸಾಮಾನ್ಯ ಆಕ್ಸಿಜನ್ ಬೆಡ್ ಗಳಿವೆ ಎಂದರು.

90 ಜನ ರೋಗಿಗಳು ಗಂಭೀರ ಸ್ಥಿತಿಯಲ್ಲಿದ್ದು, ಇದರಲ್ಲಿ 60 ರೋಗಿಗಳಿಗೆ ವೆಂಟಿಲೇಟರ್‌ ಮೇಲೆ ಚಿಕಿತ್ಸೆ‌ ನೀಡಲಾಗುತ್ತಿದೆ ಎಂದು ವೈದ್ಯ ಡಾ.ಧನರಾಜ ಜಿ.ಡಿ. ಹೇಳಿದರು

ಬೆಂಗಳೂರು ನಗರ, ಉಡುಪಿ, ಬಳ್ಳಾರಿ, ವಿಜಯಪುರ, ಮಂಗಳೂರು, ಬೆಳಗಾವಿ ಜಿಲ್ಲೆಯ ಗೋಕಾಕ, ಮೈಸೂರು, ಹಾಸನ ಜಿಲ್ಲೆಯ ಅರಕಲಗೂಡು, ತುಮಕೂರು, ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ಕೋವಿಡ್ ಕರ್ತವ್ಯ ನಿರತ ವೈದ್ಯರು ಸಂವಾದದಲ್ಲಿ‌ ಭಾಗಿಯಾಗಿದ್ದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತ ಡಾ ಕೆ. ವಿ. ತ್ರಿಲೋಕ ಚಂದ್ರ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತ ಡಾ.ಪಿ.ಎಸ್.ಹರ್ಷ ಅವರು ವೈದ್ಯರೊಂದಿಗಿನ ಮುಖ್ಯಮಂತ್ರಿಯವರ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here