ವಾಡಿ: ಪಟ್ಟಣದ ಸರಕಾರಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಆಕ್ಸಿಜನ್ ಸಹಿತ ಬೆಡ್ ವ್ಯವಸ್ಥೆ ಒದಗಿಸುವ ಮೂಲಕ ಕೂಲಿ ಕಾರ್ಮಿಕರ ಜೀವ ಉಳಿಸಬೇಕು ಎಂದು ಬಿಜೆಪಿ ಶಕ್ತಿಕೇಂದ್ರದ ಪ್ರಧಾನ ಕಾರ್ಯದರ್ಶಿ ವೀರಣ್ಣ ಯಾರಿ, ಭಾಜಪ ಹಿರಿಯ ಮುಖಂಡ ಶಿವರಾಮ ಪವಾರ ಹಾಗೂ ಮಾಜಿ ಶಾಸಕ ದಿ.ವಾಲ್ಮೀಕಿ ನಾಯಕ ಅವರ ಪುತ್ರ ವಿಠ್ಠಲ ನಾಯಕ ಅವರು ಜಿಲ್ಲಾ ಉಸ್ತೂವಾರಿ ಸಚಿವ ಮುರುಗೇಶ ನಿರಾಣಿ ಅವರಲ್ಲಿ ಮನವಿ ಮಾಡಿದ್ದಾರೆ.
ಸೋಮವಾರ ಚಿತ್ತಾಪುರಕ್ಕೆ ಭೇಟಿ ನೀಡಿದ್ದ ಸಚಿವರಿಗೆ ಮನವಿ ಸಲ್ಲಿಸಿದ ಬಿಜೆಪಿ ನಾಯಕರು, ವಾಡಿ ಹಾಗೂ ನಾಲವಾರ ವಲಯದಲ್ಲಿ ತಲ್ಲಣಿಸಿದ ಮಹಾಮಾರಿ ಸೋಂಕಿನ ಭೀಕರತೆ ಹಾಗೂ ಹದಗೆಟ್ಟ ತಾಲೂಕಿನ ಆರೋಗ್ಯ ವ್ಯವಸ್ಥೆ ಕುರಿತು ಗಮನ ಸೆಳೆದರು. ಸಾಂಕ್ರಾಮಿಕ ರೋಗ ಕೊರೊನಾದಿಂದ ಅನೇಕರು ಬಳಲುತ್ತಿದ್ದಾರೆ. ೩೦ಕ್ಕೂ ಹೆಚ್ಚು ಮಂದಿ ಸೋಂಕಿನಿಂದ ಚೇತರಿಸಿಕೊಳ್ಳಲಾಗದೆ ಮೃತಪಟ್ಟಿದ್ದಾರೆ.
ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಸೂಕ್ತ ಚಿಕಿತ್ಸೆ ಸಿಗುತ್ತಿಲ್ಲ. ವಾಡಿ ಆಸ್ಪತ್ರೆಗೆ ಆಕ್ಸಿಜನ್ ವ್ಯವಸ್ಥೆ ಕಲ್ಪಿಸಿದರೆ ಬಡ ರೋಗಿಗಳ ಪ್ರಾಣ ಉಳಿಯುತ್ತದೆ. ಅಲ್ಲದೆ ಲಾಕ್ಡೌನ್ ಸಂಕಷ್ಟದಿಂದಾಗಿ ಕೂಲಿ ಕಾರ್ಮಿಕರು, ಬಡ ಕುಟುಂಬಗಳು ಒಂದು ಹೊತ್ತಿನ ಊಟಕ್ಕೂ ಪರಿತಪಿಸುವಂತಾಗಿದೆ. ಅಂತಹ ಕುಟುಂಬಗಳಿಗೆ ಲಾಕ್ಡೌನ್ ತೆರವಾಗುವ ವರೆಗೂ ಪ್ರತಿನಿತ್ಯ ಆಹಾರ ತಲುಪಿಸುವ ವ್ಯವಸ್ಥೆ ಮಾಡಬೇಕು. ಈ ನಿಟ್ಟಿನಲ್ಲಿ ಕ್ರಮಕೈಗೊಳ್ಳುವಂತೆ ತಾಲೂಕು ಆಡಳಿತಕ್ಕೆ ಆದೇಶ ನೀಡಬೇಕು ಎಂದು ಸಚಿವರಲ್ಲಿ ಮನವಿ ಮಾಡಿದರು.