ಸುರಪುರ: ಇದೇ ವರ್ಷದ ಜನೇವರಿ ೧ನೇ ತಾರೀಖು ನಾರಾಯಣಪುರದಲ್ಲಿ ನಡೆದ ಎರಡು ಕೋಮಿನ ಮದ್ಯದ ಗಲಾಟೆಯಲ್ಲಿ ನಮ್ಮ ವಾಲ್ಮೀಕಿ ಸಮುದಾಯದ ಜನರ ಮೇಲೆ ತೀವ್ರ ಹಲ್ಲೆಯಾಗಿ,ಗಂಭೀರ ಗಾಯಗಳಾಗಿದ್ದವು,ಆದರೆ ಅನ್ಯ ಕೋಮಿನ ಜನರ ಪ್ರತಿ ದೂರನ್ನು ನಮ್ಮ ದೂರಿನ ನಂತರದ ದಿನ ದಾಖಲಿಸಿಕೊಂಡು,ನಿಜವಾದ ಆರೋಪಿಗಳನ್ನು ಬಿಟ್ಟು ನಮ್ಮ ಸಮುದಾಯದ ಜನರನ್ನು ಈಗ ಬಂಧಿಸಲಾಗಿದೆ.
ಇದ್ಯಾವ ನ್ಯಾಯ? ಆದ್ದರಿಂದ ನಮ್ಮ ವಾಲ್ಮೀಕಿ ಸಮುದಾಯದ ಜನರು ನೀಡಿದ ದೂರಿನಲ್ಲಿಯ ಎಲ್ಲಾ ಆರೋಪಿಗಳನ್ನು ಬಂಧಿಸಬೇಕು ಮತ್ತು ನಮ್ಮ ಸಮುದಾಯದ ವಿರುದ್ಧ ಪ್ರತಿ ದೂರು ದಾಖಲಿಸಿಕೊಂಡು ಅನ್ಯಾಯವೆಸಗಿರುವ ನಾರಾಯಣಪುರ ಪೊಲೀಸ್ ಠಾಣೆಯ ಪಿಎಸ್‌ಐ ಅವರ ಮೇಲೆ ಕ್ರಮ ಕೈಗೊಳ್ಳಬೇಕು.
ಇಲ್ಲವಾದಲ್ಲಿ ಸುರಪುರ ಪೊಲೀಸ್ ಉಪ ಅಧೀಕ್ಷಕರ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿರುವ ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ನಿಯಂತ್ರಣ) ಯಾದಗಿರಿ ಜಿಲ್ಲಾ ಮಟ್ಟದ ಜಾಗೃತಿ ಉಸ್ತುವಾರಿ ಸಮಿತಿಯ ಸದಸ್ಯ ರಮೇಶ ದೊರೆ ಆಲ್ದಾಳವರು ಪೊಲೀಸ್ ಮಹಾನಿರೀಕ್ಷಕರು ಈಶಾನ್ಯ ವಲಯ ಕಲಬುರಗಿ ಅವರಿಗೆ ಬರೆದ ಮನವಿಯಲ್ಲಿ ತಿಳಿಸಿದ್ದಾರೆ.