ಕಲಬುರಗಿ: ಪ್ರತಿಯೊಬ್ಬರೂ ಸಾಮಾಜಿಕ ಮೌಲ್ಯಗಳನ್ನು ಮೈಗೂಡಿಸಿಕೊಳ್ಳುವ ಮೂಲಕ ಪರೋಪಕಾರಿ ಜೀವನ ನಡೆಸಬೇಕು. ಈ ಮೂಲಕ ನಾವು ಭವಿಷ್ಯದಲ್ಲಿ ಮಾದರಿ ಜೀವನ ನಡೆಸಲು ಸಾಧ್ಯವಾಗಲಿದೆ ಎಂದು ಹಾರಕೂಡ ಸಂಸ್ಥಾನ ಹಿರೆಮಠದ ಪೀಠಾದಿಪತಿ ಶ್ರೀ ಡಾ.ಚನ್ನವೀರ ಶಿವಾಚಾರ್ಯರು ನುಡಿದರು.
ವಿಶ್ವಜ್ಯೋತಿ ಪ್ರತಿಷ್ಠಾನ ಹಾಗೂ ಛಪ್ಪರಬಂದಿ ಪ್ರಭಾಕರ ಫೌಂಡೇಶನ್‌ಗಳ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ವಿಶೇಷ ಗೌರವ ಸ್ವೀಕರಿಸಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ತಂತ್ರಜ್ಞಾನದ ಪ್ರಭಾವದಿಂದಾಗಿ ಮಾನವೀಯ ಮೌಲ್ಯಗಳು ಕಣ್ಮರೆಯಾಗುತ್ತಿವೆ. ಈ ಸಂದರ್ಭದಲ್ಲಿ ಮೌಲ್ಯಗಳ ಪುನರುತ್ಥಾನ ಮಾಡಬೇಕಾದ ಅಗತ್ಯವಿದೆ ಎಂದು ಅಭಿಪ್ರಾಯಿಸಿದರು.
ಸಾಂಸ್ಕೃತಿಕ ಸಂಘಟಕ ವಿಜಯಕುಮಾರ ತೇಗಲತಿಪ್ಪಿ ಮಾತನಾಡಿ, ಇಂದಿನ ಆಧುನಿಕ ಕಾಲದಲ್ಲಿ ನಮ್ಮಲ್ಲಿನ ಸ್ವಾರ್ಥ ಮನೋಭಾವ ಬಿಟ್ಟು, ಇಡೀ ಸಮಾಜವೇ ನನ್ನದು ಎಂಬ ಭಾವನೆ ಬೆಳೆಸಿಕೊಳ್ಳಬೇಕು. ಅಂದಾಗ ಮಾತ್ರ ಸುಂದರ ಮತ್ತು ನೆಮ್ಮದಿಯ ಬದುಕು ಕಟ್ಟಿಕೊಳ್ಳಲು ಸಾಧ್ಯ ಎಂದು ಹೇಳಿದರು.
ಸಾಹಿತ್ಯ ಪ್ರೇರಕ ಡಾ.ಶರಣರಾಜ್ ಛಪ್ಪರಬಂದಿ, ನಾಲ್ಕು ಚಕ್ರ ಚಾರಿಟೇಬಲ್ ಟ್ರಸ್ಟ್‌ನ ಮುಖ್ಯಸ್ಥರಾದ ಮಾಲಾ ದಣ್ಣೂರ, ಮಾಲಾ ಕಣ್ಣಿ, ಪ್ರಮುಖರಾದ ವಿನೋದ ಶೆಲಗಾರ, ಪ್ರಭುಲಿಂಗ ಮೂಲಗೆ, ಪ್ರಭವ ಪಟ್ಟಣಕರ್, ಶರಣಬಸವ ಜಂಗಿನಮಠ, ವಿಶ್ವನಾಥ ತೊಟ್ನಳ್ಳಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.