ಕಲ್ಯಾಣ ಕರ್ನಾಟಕ ಹಾಗೆಂದರೇನು?

0
39
-ಡಾ. ಶಿವರಂಜನ್ ಸತ್ಯಂಪೇಟೆ, ಕಲಬುರಗಿ

ಈ ಹಿಂದೆ ನಿಜಾಮ ಅರಸ ಆಡಳಿತ ನಡೆಸುತ್ತಿದ್ದ ಕಲಬುರಗಿ, ಬೀದರ್, ಯಾದಗಿರಿ, ರಾಯಚೂರು, ಕೊಪ್ಪಳ  ಪ್ರದೇಶವನ್ನು ಹೈದರಾಬಾದ್ ಕರ್ನಾಟಕ ಎಂದು ಗುರುತಿಸಲಾಗುತ್ತಿತ್ತು. ನಿಜಾಮನ ದಾಸ್ಯದ ಸಂಕೊಲೆಯಿಂದ ಸೆ.೧೭, ೧೯೪೮ರಂದು ಬಿಡುಗಡೆಗೊಂಡು ಭಾರತದ ಒಕ್ಕೂಟ ವ್ಯವಸ್ಥೆಯಲ್ಲಿ ಸೇರ್ಪಡೆಗೊಂಡಿದ್ದರೂ ಅದೇ ಹೈದರಾಬಾದ್ ಪ್ರಾಂತ್ಯದ ಹೆಸರಿನಿಂದ ಕರೆದುಕೊಂಡು ಬರಲಾಗಿತ್ತು.

ಅಂದಿನಿಂದ ಇಂದಿವರೆಗೆ ಆಡಳಿತ ನಡೆಸಿದ ಸರ್ಕಾರಗಳ ಮಲತಾಯಿ ಧೋರಣೆ ಹಾಗೂ ಈ ಭಾಗದ ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆಯಿಂದಾಗಿ ಈ ಪ್ರದೇಶ ಅಭಿವೃದ್ಧಿ ದೃಷ್ಟಿಯಿಂದ ತೀರಾ ಹಿಂದುಳಿದಿತ್ತು. ಹೀಗಾಗಿ ಈ ಭಾಗದಿಂದ ವೈಜನಾಥ ಪಾಟೀಲ ನೇತೃತ್ವದಲ್ಲಿ ಪ್ರತ್ಯೇಕತೆಯ ಕೂಗೂ ಸಹ ಕೇಳಿಬಂದಿತ್ತು. ಬಹುದಿನಗಳ ಈ ಬೇಡಿಕೆ ಹಿನ್ನೆಲೆಯಲ್ಲಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಸೆ. ೧೭, ೨೦೧೯ರಂದು ಈ ಹೆಸರು ಬಸಲಾಯಿಸಿ ಕಲ್ಯಾಣ ಕರ್ನಾಟಕ ಎಂದು ಮರು ನಾಮಕರಣ ಮಾಡಿದರು.

Contact Your\'s Advertisement; 9902492681

ಕಲ್ಯಾಣ ಕರ್ನಾಟಕ ಎಂಬ ಹೆಸರು ಚಾಲೂಕ್ಯರಿಂದ (ಕಲ್ಯಾಣಿ ಚಾಲೂಕ್ಯರು) ಬಂದಿದೆ. ಅದು ಆಗಿನ ಕಾಲದಲ್ಲಿ ಬಸವಾದಿ ಶರಣರು ಹುಟ್ಟು ಹಾಕಿದ ವಚನ ಚಳುವಳಿ ಹಾಗೂ ವಚನ ಸಾಹಿತ್ಯ ರಚನೆಯ ಕೇಂದ್ರ ಬಿಂದು ಆಗಿತ್ತು. ಈ ಹೆಸರು ಹೈದರಾಬಾದ್ ಕರ್ನಾಟಕ ಎನ್ನುವ ಹೆಸರಿಗಿಂತ ಅತ್ಯಂತ ಸೂಕ್ತವಾದ ಹೆಸರಾಗಿತ್ತು.

ಏಕೆಂದರೆ ಈಗ ಈ ಜಿಲ್ಲೆಗಳಿಗೆ ಹೈದರಾಬಾದ್ ಪ್ರಾಂತ್ಯಕ್ಕಾಗಲಿ, ತೆಲಂಗಾಣಕ್ಕಾಗಲಿ, ಹೈದರಾಬಾದ್ ನಗರಕ್ಕಾಗಲಿ ಯಾವುದೇ ಸಂಬಂಧವಿಲ್ಲ. ಶರಣರ ಕಾಯಕಭೂಮಿಯಾದ ಈ ನೆಲಕ್ಕೆ ಕಲ್ಯಾಣ ಕರ್ನಾಟಕ ಎಂದು ಮರು ನಾಮಕರಣ ಮಾಡಬೇಕೆಂಬ ಬೇಡಿಕೆ ಬಹುದಿನಗಳಿಂದಲೂ ಕೇಳಿ ಬರುತ್ತಿತ್ತು.  ಪ್ಲೇಟೊನ ತಿeಟಟಜಿಚಿiಡಿ sಣಚಿಣe ಗಿಂತ ಕಡಿಮೆಯಿಲ್ಲದ ಸಮ ಸಮಾಜದ ಕಲ್ಪನೆಯನ್ನು ಅಂದಿನ ಕಾಲದಲ್ಲಿ ಶರಣರು ಜಾರಿಗೆ ತಂದಿದ್ದರು.

ಬಳ್ಳಾರಿ ಜಿಲ್ಲೆ ಸೇರಿದಂತೆ ಈ ೬ ಜಿಲ್ಲೆಗಳ ಪ್ರಾದೇಶಿಕ ಅಸಮಾನತೆ ತೊಡೆದು ಹಾಕಲು ಡಾ. ಡಿ.ಎಂ. ನಂಜುಂಡಪ್ಪ ನೇತೃತ್ವದ ಸಮಿತಿ ರಚನೆಗೊಂಡು ಎರಡು ದಶಕ ಪೂರೈಸುತ್ತಿದ್ದರೂ ಆ ಸಮಿತಿ ನೀಡಿದ ಶಿಫಾರಸುಗಳ ಅನುಷ್ಠಾನ ಇನ್ನೂ ಪೂರ್ಣಗೊಂಡಿರುವುದಿಲ್ಲ. ಹೈದರಾಬಾದ್ ಕರ್ನಾಟಕ ಎಂದಿದ್ದ ಈ  ಪ್ರದೇಶಕ್ಕೆ ಸರ್ಕಾರ ಕಲ್ಯಾಣ ಕರ್ನಾಟಕ ಎಂದು ಮರು ನಾಮಕರಣವೇನೋ ಮಾಡಿದೆ. ಆದರೆ ಕೇವಲ ಉಪ್ಪಿನ ಡಬ್ಬಿಗೆ ಸಕ್ಕರೆ ಡಬ್ಬಿ ಎಂದು ಮರು ನಾಮಕರಣ ಮಾಡಿದರೆ ಸಾಲದು. ಈ ಭಾಗದ ಕಲ್ಯಾಣಕ್ಕಾಗಿ ಸಾಕಷ್ಟು ಅನುದಾನ ಬಿಡುಗಡೆ ಮಾಡಬೇಕಾಗಿದೆ. ಕಲ್ಯಾಣ ಕರ್ನಾಟಕದ ಆಶಯವಾದ ಅಭಿವೃದ್ಧಿ ಮತ್ತು ಸಂಪತ್ತಿನ ಅಸಮತೋಲನ ನೀಗಬೇಕಾಗಿದೆ.

ಈ ಭಾಗದ ಅಭಿವೃದ್ಧಿ ದೃಷ್ಟಿಯಿಂದ ಕಲಬುರಗಿಯಲ್ಲಿ ಸ್ಥಾಪಿಸಲಾಗಿರುವ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಗೆ ನೀಡಿದ ಸರ್ಕಾರದ ಅನುದಾನ ಸಮರ್ಪಕ ಬಳಕೆ ಆಗುತ್ತಿಲ್ಲ. ಎಷ್ಟೋ ಬಾರಿ ಸರ್ಕಾರದ ಅನುದಾನ ವಾಪಸ್ ಹೋಗಿರುವುದು ಈ ಭಾಗದ ದುರ್ದೈವ ಎಂದೇ ಹೇಳಬೇಕಾಗಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here