ಕಲಬುರಗಿ: ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರವರು ಚುನಾವಣೆಯ ಮೂಲಕ ದೇಶದಲ್ಲಿ ಪ್ರಜಾಪ್ರಭುತ್ವ ಗಟ್ಟಿಯಾಗಿ ನೆಲೆಗೊಳ್ಳಬೇಕೆಂಬ ಕನಸು ಕಂಡಿದ್ದರು. ಅವರ ಕನಸ್ಸನ್ನು ಸಂಪೂರ್ಣವಾಗಿ ನನಸಾಗಿಸಲು ಇದೇ ಏಪ್ರಿಲ್ ೨೩ ರಂದು ನಡೆಯುವ ಲೋಕಸಭಾ ಚುನಾವಣೆಯ ಮತದಾನದ ದಿನದಂದು ಎಲ್ಲರೂ ಕಡ್ಡಾಯವಾಗಿ ಮತ ಚಲಾಯಿಸುವ ಮೂಲಕ ಪ್ರಜಾಪ್ರಭುತ್ವ ಬಲಗೊಳಿಸಬೇಕೆಂದು ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ ಕರೆ ನೀಡಿದರು.
ಅವರು ರವಿವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ ಹಾಗೂ ಮಹಾನಗರ ಪಾಲಿಕೆ ಇವುಗಳ ಸಂಯುಕ್ತಾಶ್ರಯದಲ್ಲಿ ನಗರದ ಜಗತ್ ವೃತ್ತದ ಡಾ. ಬಿ.ಆರ್. ಅಂಬೇಡ್ಕರ ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮೂಲಕ ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ. ಬಾಬಾಸಾಹೇಬ ಅಂಬೇಡ್ಕರವರ ೧೨೮ನೇ ಜಯಂತ್ಯೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು.
ಭಾರತ ದೇಶದಲ್ಲಿ ಅನೇಕ ಭಾಷೆ, ವೇಷ, ಧರ್ಮ, ಸಂಸ್ಕೃತಿಗಳಿದ್ದರೂ ಎಲ್ಲರೂ ಒಗ್ಗಟ್ಟಾಗಿ ಬಾಳುತ್ತಿರುವುದಕ್ಕೆ ಸಂವಿಧಾನವೇ ಮೂಲ ಕಾರಣವಾಗಿದೆ. ನಮ್ಮ ಪ್ರಜಾಪ್ರಭುತ್ವ ದೇಶದಲ್ಲಿ ಸಂವಿಧಾನ ಇರದಿದ್ದರೆ ಯಾರೂ ಸ್ವತಂತ್ರರಾಗಿ ಹಾಗೂ ಸಮಾನರಾಗಿ ಬದುಕುತ್ತಿರಲಿಲ್ಲ. ಸಂವಿಧಾನವು ಎಲ್ಲರಿಗೂ ಸಮಾನತೆ, ಸಮಾನ ಅವಕಾಶ, ಒಂದೇ ಸಮನಾದ ಹಕ್ಕು ಮತ್ತು ಕರ್ತವ್ಯಗಳನ್ನು ಒದಗಿಸಿದೆ. ಎಲ್ಲರೂ ಸಂಪೂರ್ಣ ಸಮಾನತೆಯಿಂದ ಬದುಕಲು ಕೇವಲ ಭಾರತ ದೇಶದಲ್ಲಿ ಮಾತ್ರ ಸಾಧ್ಯವಾಗಿದೆ ಎಂದು ಹೇಳಿದರು.
ಅಂಬೇಡ್ಕರರು ಕೇವಲ ಸಂವಿಧಾನದ ಶಿಲ್ಪಿಗಳಲ್ಲದೇ ಸ್ವಾತಂತ್ರ್ಯ ಪೂರ್ವ ಹಾಗೂ ನಂತರದಲ್ಲಿ ದೇಶದಲ್ಲಿ ಸಾಮಾಜಿಕ ಸಮಾನತೆಗೆ ಬಹಳ ಹೊರಾಡಿದ್ದಾರೆ. ಮೂಢನಂಬಿಕೆಗಳು ಹಾಗೂ ವರ್ಣಾಶ್ರಮವನ್ನು ಹೊಗಲಾಡಿಸಲು ಹೋರಾಡಿದ್ದಾರೆ. ದೇಶದ ಪ್ರತಿಯೊಬ್ಬರಿಗೂ ಆರ್ಥಿಕ ಸಮಾನತೆ ನೀಡುವಲ್ಲಿಯೂ ಸಹ ಅವರ ಪಾತ್ರ ಹಿರಿದಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಪಿ. ರಾಜಾ ಮಾತನಾಡಿ, ಅಂಬೇಡ್ಕರವರು ಎಲ್ಲ ಕ್ಷೇತ್ರಗಳಿಗೂ ತಮ್ಮ ಕೊಡುಗೆಯನ್ನು ನೀಡಿದ್ದಾರೆ. ಎಲ್ಲರೂ ಆರ್ಥಿಕ, ಸಾಮಾಜಿಕ, ರಾಜಕೀಯ, ಶೈಕ್ಷಣಿಕ ಹಾಗೂ ಸಮಾಜದಲ್ಲಿ ಎಲ್ಲ ರೀತಿಯಲ್ಲಿ ಸಮಾನತೆ ತರುವಲ್ಲಿ ಪ್ರಯತ್ನಿಸಿದ್ದಾರೆ. ಅಸ್ಪೃಷ್ಯತೆ ಹೊಗಲಾಡಿಸಲು ಹಾಗೂ ಮಹಿಳೆಯರಿಗೆ ಸರ್ವ ಹಕ್ಕುಗಳನ್ನು ದೊರಕಿಸುವಲ್ಲಿ ತಮ್ಮ ಜೀವನವನ್ನೇ ಮುಡುಪಾಗಿಟ್ಟಿದ್ದಾರೆ. ಅಂಬೇಡ್ಕರರ ತತ್ವ ಸಿದ್ಧಾಂತಗಳನ್ನು ಎಲ್ಲರೂ ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಅವರ ಮಾರ್ಗದರ್ಶನದಂತೆ ನಾವು ನಡೆಯಬೇಕು ಎಂದು ಹೇಳಿದರು.
ಕಲಬುರಗಿ ಗೋದುತಾಯಿ ದೊಡ್ಡಪ್ಪ ಅಪ್ಪ ಕಲಾ ಮತ್ತು ವಾಣಿಜ್ಯ ಮಹಿಳಾ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕಿ ಡಾ. ಪುಟ್ಟಮಣಿ ದೇವಿದಾಸ ಉಪನ್ಯಾಸ ನೀಡಿ, ಡಾ. ಬಿ.ಆರ್. ಅಂಬೇಡ್ಕರರ ಬದುಕಿನ ಪ್ರತಿಯೊಂದು ಕ್ಷಣವೂ ಅರ್ಥ ಗಂರ್ಭಿತವಾಗಿತ್ತು. ಸದಾ ಸಮಾಜದ ಒಳಿತಿನ ಬಗ್ಗೆ ಚಿಂತನೆ ಮಾಡುತ್ತಿದ್ದರು. ಅಂದಿನ ಕಾಲದ ಅಸಾಧ್ಯತೆಗಳ ಮಧ್ಯೆ ಅವರು ಸಮಾಜದಲ್ಲಿ ಸಮಾನತೆ ಸಾಧಿಸಲು ಪ್ರಯತ್ನಿಸಿದರು. ದೇಶಕ್ಕೆ ವೇದಗಳ ಅವಶ್ಯಕತೆಯಿದ್ದಾಗ ವೇದವ್ಯಾಸರು ವೇದಗಳನ್ನು ಬರೆದಿದ್ದಾರೆ. ದೇಶಕ್ಕೆ ಪುರಾಣದ ಅವಶ್ಯಕತೆಯಿದ್ದಾಗ ವಾಲ್ಮೀಕಿ ಪುರಾಣ ಬರೆದಿದ್ದಾರೆ. ಅದೇ ರೀತಿ ದೇಶಕ್ಕೆ ಸಂವಿಧಾನ ಅವಶ್ಯಕತೆಯಿದ್ದಾಗ ಡಾ. ಬಿ.ಆರ್. ಅಂಬೇಡ್ಕರರು ಸಂವಿಧಾನ ರಚಿಸಿದ್ದಾರೆ. ಇದುವೇ ತಳಸಮುದಾಯದ ವಿಶೇಷತೆಯಾಗಿದೆ. ತಳ ಸಮುದಾಯ ಎಂದರೆ ದೇಶದಲ್ಲಿ ಸಮಾಜವನ್ನು ಕಟ್ಟುವ ಸಮುದಾಯವಾಗಿದೆ. ಕಾರಣ ತಳ ಸಮುದಾಯದವರು ಯಾರೂ ತಮ್ಮ ಜಾತಿಯನ್ನು ಮುಚ್ಚಿಡಬಾರದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಿದ್ಧಾರ್ಥ ವಿಹಾರ ಟ್ರಸ್ಟಿನ ಸಂಗಾನಂದ ಭಂತೇಜಿ, ಕಲಬುರಗಿ ಈಶಾನ್ಯ ವಲಯದ ಪೊಲೀಸ್ ಮಹಾನಿರೀಕ್ಷಕ ಮನೀಷ ಖರ್ಬೀಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಡಾ ಮಾಟೀನ್ ಮಾರ್ಬನ್ಯಾಂಗ್ ಹಾಗೂ ಮಹಾನಗರ ಪಾಲಿಕೆ ಆಯುಕ್ತೆ ಬಿ. ಫೌಜಿಯಾ ತರನ್ನುಮ್, ಕಲಬುರಗಿ ಸಹಾಯಕ ಆಯುಕ್ತ ರಾಹುಲ್ ತುಕಾರಾಂ ಪಾಂಡ್ವೆ, ಐ.ಎ.ಎಸ್. ಪ್ರೊಬೇಷನರಿ ಅಧಿಕಾರಿ ಸ್ನೇಹಲ್ ಸುಧಾಕರ ಲೋಖಂಡೆ, ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಯೋಗೇಶ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಸನ್ನ ದೇಸಾಯಿ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಕೆ.ಹೆಚ್. ಸತೀಶ, ಮುಖಂಡರಾದ ಅವಿನಾಶ ಗಾಯಕವಾಡ, ಸೋಮಶೇಖರ ಮದನಕರ, ಬಾಬು ಮೋರೆ ಮುಂತಾದವರು ಪಾಲ್ಗೊಂಡಿದ್ದರು.