ಎನ್ ಕೌಂಟರ್ ಬಗ್ಗೆ ಒಂದಿಷ್ಟು ಮಾಹಿತಿ ತಿಳಿದಿರಲಿ

0
62

ಪ್ರವೀಣ್ ಕೊಲೆ ಆರೋಪಿಗಳನ್ನು ಎನ್ ಕೌಂಟರ್ ಮಾಡಲಾಗುವುದು ಎಂದು ಸಚಿವರು ಹೇಳಿದ್ದಾರೆ. ಯಾವಾಗ ಎನ್ ಕೌಂಟರ್ ಮಾಡಬೇಕು ಎನ್ನುವುದನ್ನು ಐಪಿಸಿ ಸೆಕ್ಷನ್ 97 ಮತ್ತು ಐಪಿಸಿ ಸೆಕ್ಷನ್ 100 ಸ್ಪಷ್ಟವಾಗಿ ಹೇಳಿದೆ. ಪೊಲೀಸರಿಗೆ ಜೀವಭಯ ಉಂಟಾದಾಗ ಮತ್ತು ಪೊಲೀಸರ ಮೇಲೆ ಮಾರಣಾಂತಿಕ ಹಲ್ಲೆಯಾದಾಗ ಜೀವರಕ್ಷಣೆಗಾಗಿ ಪೊಲೀಸರು ಎನ್ ಕೌಂಟರ್ ಮಾಡಬಹುದು. ಆರೋಪಿಗಳ ಎನ್ ಕೌಂಟರ್ ಆಗಬೇಕು ಎಂದು ಬಯಸುವವರು ಪೊಲೀಸರ ಮೇಲೆ ಮಾರಣಾಂತಿಕ ಹಲ್ಲೆಯಾಗಲಿ ಎಂದು ಬಯಸುತ್ತಾರೆಯೇ ?

ಮಾರಣಾಂತಿಕ ಹಲ್ಲೆಯಾಗದ ಹೊರತು ಪೊಲೀಸರು ಎನ್ ಕೌಂಟರ್ ನಡೆಸುವಂತಿಲ್ಲ. ಹಾಗೇನಾದರೂ ಸಮೂಹ ಸನ್ನಿಗೆ ಒಳಗಾದ ಜನರ ಖುಷಿಗಾಗಿಯೋ, ರಾಜಕಾರಣಿಗಳ ಪ್ರಶಂಸೆಗಾಗಿಯೋ ಯಾವುದಾದರೂ ಪೊಲೀಸ್ ಅಧಿಕಾರಿ ಎನ್ ಕೌಂಟರ್ ಮಾಡಿದರೆ ಅಂತಹ ಅಧಿಕಾರಿ ಜೀವನಪೂರ್ತಿ ನ್ಯಾಯಾಲಯಕ್ಕೆ ಅಲೆಯಬೇಕಾಗುತ್ತದೆ. ಉತ್ತಮ ವಕೀಲರೇನಾದರೂ ಸಿಕ್ಕಿದರೆ ನಿವೃತ್ತಿಯಾದ ಬಳಿಕವೂ ಎನ್ ಕೌಂಟರ್ ಕೇಸ್ ಮುಗಿಯದೇ ಒದ್ದಾಡಬೇಕಾಗುತ್ತದೆ. ಆರೋಪಿ ಯಾವ ಆಯುಧದಿಂದ ಹಲ್ಲೆ ಮಾಡಿದ ? ಹಲ್ಲೆ ಮಾಡಿದ ಆಯುಧ ಎಲ್ಲಿದೆ ? ಎಲ್ಲಿಗೆ ಹಲ್ಲೆಯಾಯಿತು ? ಆರೋಪಿ ಕೈಯಲ್ಲಿದ್ದ ಆಯುಧ ಆತನಿಗೆ ಎಲ್ಲಿ ಸಿಕ್ಕಿತು ? ಸಾಕ್ಷ್ಯಗಳು ಏನು ? ಇಂತಹ ಸಾವಿರ ಪ್ರಶ್ನೆಗಳಿಗೆ ಪೊಲೀಸ್ ಅಧಿಕಾರಿಯು ಕಟಕಟೆಯಲ್ಲಿ ನಿಂತು ಉತ್ತರ ಹೇಳಬೇಕಾಗುತ್ತದೆ. ಇಂತಹ ಶಾಸಕ, ಇಂತಹ ಸಚಿವರು ಎನ್ ಕೌಂಟರ್ ಮಾಡಲು ಹೇಳಿದರು ಎಂದು ಹೇಳುವಂತಿಲ್ಲ. ಹೋಗಲಿ, ಹಿರಿಯ ಅಧಿಕಾರಿಗಳ ಸೂಚನೆ ಮೇಲೆ ಎನ್ ಕೌಂಟರ್ ಮಾಡಿದೆ ಎಂದೂ ಹೇಳಿ ತಪ್ಪಿಸಿಕೊಳ್ಳುವಂತಿಲ್ಲ. ಹಾಗೆಲ್ಲಾ ಯಾರ್ಯಾರದ್ದೋ ಸೂಚನೆ ಮೇಲೆ ಎನ್ ಕೌಂಟರ್ ಮಾಡುವಂತಿಲ್ಲ. ಜೀವರಕ್ಷಣೆಗಾಗಿ ಆ ಕ್ಷಣದಲ್ಲಿ ಪೊಲೀಸರು ಎನ್ ಕೌಂಟರ್ ನಿರ್ಧಾರ ತೆಗೆದುಕೊಳ್ಳುವುದಕ್ಕೆ ಮಾತ್ರ IPC 97 ಮತ್ತು IPC 100 ಅನುಮತಿ ನೀಡುತ್ತದೆ.

Contact Your\'s Advertisement; 9902492681

ನಕಲಿ ಎನ್ ಕೌಂಟರ್ ಎಂದು ಸಾಭೀತಾದರೆ ಪೊಲೀಸ್ ಅಧಿಕಾರಿ ಜೈಲಿಗೆ ಹೋಗಬೇಕಾಗುತ್ತದೆ. ಆ ಇಡೀ ಪ್ರಕರಣವನ್ನು ಜನ ಮರೆತಿರುತ್ತಾರೆ. ಈಗ ಎನ್ ಕೌಂಟರ್ ಗೆ ಆಫ್ ದಿ ರೆಕಾರ್ಡ್ ಸೂಚನೆ ನೀಡಿದ್ದ ರಾಜಕಾರಣಿಗಳು ವೃದ್ದರಾಗಿ ರಾಜಕೀಯ ನೇಪಥ್ಯಕ್ಕೆ ಸರಿದಿರುತ್ತಾರೆ. ಹಾಗಾಗಿ ರಾಜಕಾರಣಿಗಳು, ಸಮೂಹಸನ್ನಿಗೊಳಗಾದ ಮೂರ್ಖ ಜನರು ಈವರೆಗೆ ಅಮಾಯಕ ಬಡ ಹಿಂದುಳಿದ ವರ್ಗದ ಜನರನ್ನು ಸಾಯಿಸಿದ್ದು ಸಾಕು. ಈಗ ಎನ್ ಕೌಂಟರ್ ಹೆಸರಲ್ಲಿ ಪೊಲೀಸರನ್ನು ಜೀವಂತ ಶವವಾಗಿಸಬೇಡಿ.

– ನವೀನ್ ಸೂರಿಂಜೆ, ಹಿರಿಯ ಪತ್ರಕರ್ತರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here