ಸುರಪುರ : ಅಖಿಲ ಭಾರತ ಕಾಂಗ್ರೆಸ್ ಸಮಿತಿ ರಾಷ್ಟ್ರೀಯ ಅಧ್ಯಕ್ಷರಾಗಿ ಡಾ.ಮಲ್ಲಿಕಾರ್ಜುನ ಖರ್ಗೆಅವರು ಆಯ್ಕೆಯಾಗಿ ಪ್ರಥಮ ಬಾರಿಗೆ ನಗರಕ್ಕೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಹಮ್ಮಿಕೊಂಡಿರುವ ಕಾರ್ಯಕ್ರಮದ ಕುರಿತು ನಗರದ ವಸಂತ ಮಹಲ್ ಕಾಂಗ್ರೆಸ್ ಕಚೇರಿಯಲ್ಲಿ ಕರ್ನಾಟಕ ವಿಧಾನ ಪರಿಷತ್ ಮಾಜಿ ಸಭಾಪತಿ ಹಾಗೂ ರಾಜ್ಯ ಕಾಂಗ್ರೆಸ್‍ನ ಉಪಾಧ್ಯಕ್ಷ ಡೇವಿಡ್ ಸೀಮಿಯನ್ ಅವರ ನೇತೃತ್ವದಲ್ಲಿ ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ಅವರು ಸುದ್ದಿಗೋಷ್ಠಿ ನಡೆಸಿದರು.
ಈ ಸಂದರ್ಭದಲ್ಲಿ ಡೇವಿಡ್ ಸೀಮಿಯನ್ ಅವರು ಮಾತನಾಡಿ,ಎಐಸಿಸಿ ರಾಷ್ಟ್ರೀಯ ಅಧ್ಯಕ್ಷರಾಗಿ ಡಾ:ಮಲ್ಲಿಕಾರ್ಜುನ ಖರ್ಗೆಯವರು ಆಯ್ಕೆಯಾಗಿದ್ದರಿಂದ ಕಲ್ಯಾಣ ಕರ್ನಾಟಕಕ್ಕೆ ಸಂಬಂಧಿಸಿದ ಏಳು ಜಿಲ್ಲೆಗಳಿಗೆ ಸಂಬಂಧಪಟ್ಟಂತೆ ಡಿ.10 ರಂದು ಕಲಬುರಗಿಯಲ್ಲಿ ಬೃಹತ್ ಅಭಿನಂದನಾ ಸಮಾರಂಭ ಹಮ್ಮಿಕೊಂಡಿದ್ದು ಸಮಾರಂಭದಲ್ಲಿ ಸುಮಾರು 2 ಲಕ್ಷ ಜನರು ಸೇರುವ ನಿರೀಕ್ಷೆಯಿದೆ ಎಂದರು.
ಡಾ.ಮಲ್ಲಿಕಾರ್ಜುನ ಖರ್ಗೆಯವರು ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿರುವುದು ರಾಜ್ಯದ ಜನತೆಯ ಅದರಲ್ಲೂ ಕಲ್ಯಾಣ ಕರ್ನಾಟಕದ ಸೌಭಾಗ್ಯ. ಒಂದು ಕಪ್ಪು ಚುಕ್ಕೆ ಇರದ ನಾಡು ಕಂಡ ಅಪರೂಪದ ರಾಜಕಾರಣಿ. ರಾಜ್ಯದಿಂದ ಎಸ್.ನಿಜಲಿಂಗಪ್ಪ ಬಿಟ್ಟರೆ ಖರ್ಗೆಯವರು ಆಯ್ಕೆಯಾದ ಎರಡನೇ. ವ್ಯಕ್ತಿ. ಅವರು ಕೆಳಮಟ್ಟದಿಂದ ಮೇಲ್ಮಟ್ಟಕ್ಕೆ ಏರಿದ್ದಾರೆ. ಇದಕ್ಕೆ ಅವರಲ್ಲಿನ ಪಕ್ಷ ನಿಷ್ಠೆ ಕಾರಣ. ಅನೇಕ ಹುದ್ದೆಗಳನ್ನು ಸಮರ್ಥವಾಗಿ ನಿಬಾಹಿಸುವ ಮೂಲಕ ರಾಜ್ಯ ಮತ್ತು ರಾಷ್ಟ್ರ ರಾಜಕಾರಣದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಶಾಸಕರಾಗಿ, ಸಚಿವರಾಗಿ, ವಿಪ ನಾಯಕನಾಗಿ, ಉತ್ತಮ ಸಂಸದ ಪಟುವಾಗಿ ಕೆಲಸ ಮಾಡಿದ್ದಾರೆ. ಅವರಿಂದ ಈಗ ಹುದ್ದೆಯ ಘನತೆ ಹೆಚ್ಚಾಗಿದೆ ಎಂದರು.
ಸಮಾರಂಭದ ಸ್ವಾಗತ ಸಮಿತಿ ಸೇರಿದಂತೆ ವಿವಿಧ ಸಮಿತಿಗಳನ್ನು ರಚಿಸಲಾಗಿದೆ. ಶಾಸಕರು, ಮಾಜಿ ಶಾಸಕರು, ಸ್ಥಳೀಯ ಹಾಲಿ ಮತ್ತು ಮಾಜಿ ಸದಸ್ಯರು, ಚುನಾವಣೆಯಲ್ಲಿ ಸೋತ ಅಭ್ಯರ್ಥಿಗಳು, ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ. ಡಾ.ಮಲ್ಲಿಕಾರ್ಜುನ ಖರ್ಗೆ ಅವರು ಕಲ್ಯಾಣ ಕರ್ನಾಟಕದ ಹೆಮ್ಮೆಯ ರಾಜಕಾರಣಿ. ಇದೊಂದು ಅವಿಸ್ಮರಣೀಯ ಸಮಾರಂಭವಾಗಲಿದೆ ಎಂದರು.
ಕಳೆದ ಒಂದು ವರ್ಷದಿಂದ ರಾಜ್ಯ ಮತ್ತು ದೇಶದಲ್ಲಿ ಕಾಂಗ್ರೆಸ್ ಅಲೆ ಉತ್ತಮವಾಗಿದೆ. ಬಿಜೆಪಿ ಸರಕಾರ 40 ಪರ್ಸೆಂಟ್ ಸರಕಾರ ಎಂಬುದಾಗಿ ಪೋಷ್ಟರ್ ಹಂಚಲಾಗಿದೆ. ಇದನ್ನು ಅರಗಿಸಿಕೊಳ್ಳಲಾಗದೆ ಮತದಾರರ ಪಟ್ಟಿಯಿಂದ ಕಾಂಗ್ರೆಸ್ ಮತದಾರರನ್ನು ತೆಗೆದು ಹಾಕುತ್ತಿದ್ದಾರೆ. ಇದನ್ನು ಚುನಾವಣಾಧಿಕಾರಿಗಳು ತಡೆಯದಿದ್ದರೆ ಡಿಸೆಂಬರ್ ಕೊನೆಯಲ್ಲಿ ದೊಡ್ಡ ಮಟ್ಟದ ಕ್ರಾಂತಿ ನಡೆಯಲಿದೆ ಎಂದರು.
ಬಿಜೆಪಿ ಶಾಸಕರು, ಸಚಿವರು ಡಿ.ಕೆ.ಶಿ ಮತ್ತು ಸಿದ್ದರಾಮಯ್ಯನವರ ಜತೆ ನಿರಂತರವಾಗಿ ಸಂಪರ್ಕದಲ್ಲಿದ್ದಾರೆ. ಜೆಡಿಎಸ್ ಬಿಟ್ಟು ಕಾಂಗ್ರೆಸ್ ಪಕ್ಷ ಸೇರಲು ಕೆಲ ನಾಯಕರು ತುದಿಗಾಲಿನಲ್ಲಿ ನಿಂತಿದ್ದಾರೆ. ಆದ್ದರಿಂದ ಮುಂದಿನ ದಿನದಲ್ಲಿ ಸ್ಪಷ್ಟ ಬಹುಮತದ ಸರಕಾರ ನೀಡಲಿದ್ದೇವೆ. ಜನರಿಗೆ ಈಗಾಗಲೇ ಕಾಂಗ್ರೆಸ್ಸಿನ ಮೇಲೆ ಮನಸ್ಸಾಗಿದೆ ಎಂದ ಅವರು, ರಾಜಕೀಯದಲ್ಲಿ ಆಸೆ, ಆಕಾಂಕ್ಷೆ ಇರುವುದು ಸಹಜ. ಇದು ಎಲ್ಲಾ ಪಕ್ಷದಲ್ಲಿಯೂ ಇರುತ್ತದೆ. ಕಾಂಗ್ರೆಸ್ ಪಕ್ಷದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಯಾವುದೇ ಗುದ್ದಾಟವಿಲ್ಲ. ಇದನ್ನು ಪಕ್ಷದ ಹೈಕಮಾಂಡ್ ತೀರ್ಮಾನಿಸಲಿದೆ.
ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ಮಾತನಾಡಿ, ಡಾ.ಮಲ್ಲಿಕಾರ್ಜುನ ಖರ್ಗೆಯವರು ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರಾಗಿ ಪ್ರಥಮ ಬಾರಿಗೆ ಕಲಬುರಗಿಗೆ ಆಗಮಿಸುತ್ತಿದ್ದು ಅವರನ್ನು ಅದ್ಧೂರಿಯಾಗಿ ಸ್ವಾಗತಿಸಲಾಗುತ್ತಿದೆ. ತಾಲೂಕಿನಿಂದ ಸುಮಾರು 20 ಸಾವಿರ ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಕಾಂಗ್ರೆಸ್ ಪಕ್ಷದ ಜಿಲಾಧ್ಯಕ್ಷ ಬಸರೆಡ್ಡಿ ಅನಪೂರ ಮಾತನಾಡಿ, ಹಿಂದುಳಿದ ಹೈದರಾಬಾದ್ ಕರ್ನಾಟಕ ಅಭಿವೃದ್ಧಿಗಾಗಿ ಶ್ರಮಿಸಿದ ಡಾ.ಮಲ್ಲಿಕಾರ್ಜುನ ಖರ್ಗೆಅವರ ಸೇವೆ ಅನನ್ಯ. ಈ ಭಾಗದಲ್ಲಿ ಸಾಕಷ್ಟು ಅಭಿವೃದ್ಧಿ ಕಾಮಗಾರಿಗಳನ್ನು ಮಾಡಿರುತ್ತಾರೆ. ಈ ಭಾಗದ ವಿದ್ಯಾರ್ಥಿಗಳ ಶೈಕ್ಷಣಿಕ, ಉದ್ಯೋಗಕ್ಕಾಗಿ ಅವರು 371 (ಜೆ) ಕೊಡುಗೆ ನೀಡಿದ್ದಾರೆ. ಅವರು ಪ್ರಥಮ ಬಾರಿಗೆ ಕಲಬುರಗಿಗೆ ಆಗಮಿಸುತ್ತಿದ್ದು ಯಾದಗಿರಿ ಜಿಲ್ಲೆಯಿಂದ 50 ಸಾವಿರ ಜನರು ಸಮಾವೇಶಕ್ಕೆ ಹೋಗುತ್ತಿದ್ದಾರೆ. ನಮ್ಮ ಭಾಗದವರು ಎಐಸಿಸಿ ಅಧ್ಯಕ್ಷರಾಗಿರುವುದು ಹೆಮ್ಮೆಯ ಸಂಗತಿ ಎಂದರು.
ಸುರಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಿಂಗರಾಜ ಬಾಚಿಮಟ್ಟಿ, ಯುತ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ರಾಜಾ ಕುಮಾರ ನಾಯಕ, ಮುಖಂಡ ರಾಜಶೇಖರಗೌಡ ವಜ್ಜಲ್, ಅಬ್ದುಲ್ ಅಲೀಂ ಗೋಗಿ, ಮುದಿಗೌಡ ಕುಪ್ಪಿ ಇದ್ದರು.