ಕೃಷಿಯಲ್ಲಿ ಮಣ್ಣಿನ ಉತ್ಪಾದಕತೆಯು ಪ್ರಮುಖ ಪಾತ್ರವಹಿಸುತ್ತದೆ. ಮಣ್ಣಿನ ಉತ್ಪಾದಕತೆಯು ಮಣ್ಣಿನ ಗುಣಲಕ್ಷಣಗಳು, ಆರೋಗ್ಯ ಮತ್ತು ಪ್ರಮುಖವಾಗಿ ಮಣ್ಣಿನ ಫಲವತ್ತತೆಯನ್ನು ಅವಲಂಬಿಸಿದೆ. ಸಸ್ಯಗಳ ಬೆಳವಣಿಗೆಗೆ ಅತ್ಯವಶ್ಯವಿರುವ ನೀರು ಮತ್ತು ಗಾಳಿಯನ್ನು ಹಿಡಿದಿಟ್ಟುಕೊಳ್ಳುವುದು ಮತ್ತು ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುವ ಮಣ್ಣು ಪೋಷಕಾಂಶಗಳ ಆಗರವಾಗಿದೆ.
ಮಣ್ಣು ಸವೆತದೊಂದಿಗೆ ಮಣ್ಣಲ್ಲಿನ ಉಪಯುಕ್ತವಾದ ಪೋಷಕಾಂಶಗಳು ನಾಶವಾಗುತ್ತವೆ. ಈಗಾಗಲೇ ಶೇ. 33% ಮಣ್ಣು ತನ್ನ ಫಲವತ್ತತೆ ಕಳೆದುಕೊಂಡಿದೆ. ಈ ಸಜೀವಿ ಮಣ್ಣು ಒಮ್ಮೆ ನಾಶವಾದರೆ ಪುನರ್ ಪಡಿಯಲಾಗದು. ಯುರೋಪಿಯನ್ ಕಮಿಶನ್‍ನ ಸಮೀಕ್ಷೆಯ ಪ್ರಕಾರ ಆರೋಗ್ಯಕರ ಆಹಾರ, ಜನಸಂಖ್ಯೆ, ಪ್ರಕೃತಿ ಮತ್ತು ವಾತಾವರಣವು 2030ರ ಒಳಗಾಗಿ ಶೇ. 75 ರಷ್ಟು ಮಣ್ಣು ಆರೋಗ್ಯವಾಗಿದೆ ಎಂದು ಖಚಿತಪಡಿಸಿಕೊಳ್ಳುವ ಅವಶ್ಯಕತೆಯಿದೆ.
ಹೀಗಾಗಿ ಮಣ್ಣಿನ ಆರೋಗ್ಯ ರಕ್ಷಣೆ ಅತ್ಯಂತ ಪ್ರಮುಖವಾದ ಸಂಗತಿ. ಮುಂಗಾರಿನ ಬೇಸಾಯಕ್ಕೆ ಭೂಮಿ ಸಿದ್ದಗೊಳಿಸುವ ಮಾಗಿ ಉಳುಮೆ ಹಳೆಯ ಕೃಷಿ ವಿಧಾನ. ಆದರೆ ವೈಜ್ಞಾನಿಕವಾಗಿಯೂ ಸಾಬೀತಾದ ಕೃಷಿ ವಿಧಾನ. ಈ ಮಾಗಿ ಉಳುಮೆಯನ್ನು ನೇಗಿಲಿನಿಂದ ಭೂಮಿ ಹಸನಾಗಿಸಲು ರೈತರು ಬೇಸಿಗೆಯಲ್ಲಿ ಮಾಡಬಹುದಾದ ಪ್ರಕ್ರಿಯೆಯಾಗಿದೆ. ಆದರೆ ಇಂದಿನ ಆಧುನಿಕ ಕೃಷಿ ಪದ್ದತಿಯಲ್ಲಿ ಕಾರ್ಮಿಕ ಸಮಸ್ಯ ಮತ್ತು ಅತ್ಯಾಧುನಿಕ ಕೃಷಿಕ ಯಂತ್ರೋಪಕರಣಗಳ ವಿಪರೀತ ಬಳಕೆಯಿಂದ ರೈತದ ಆದಾಯ ಕಡಿಮೆಯಾಗಿ ಬೇಸಾಯ ಖರ್ಚು ಹೆಚ್ಚಾಗುತ್ತಿದ್ದು. ಮಣ್ಣಿನ ಆರೋಗ್ಯ ಮತ್ತು ಫಲವತ್ತೆಯನ್ನು ರಕ್ಷಿಸುವುದರ ಜೊತೆಗೆ ಖರ್ಚಿನ ಬೇಸಾಯವನ್ನು ಕೈಗೊಂಡು ಆದಾಯವನ್ನು ಹೆಚ್ಚಿಸಿಕೊಳ್ಳಬಹುದು. ಹೀಗಾಗಿ ರೈತರು ಮಣ್ಣಿನ ಆರೋಗ್ಯದ ಕಾಳಜಿ ವಹಿಸಲು ಮಾಗಿ ಉಳುಮೆಯಂತಹ ಕಡಿಮೆ ಖರ್ಚಿನ ಬೇಸಾಯ ಕ್ರಮಕ್ಕೆ ಮಹತ್ವ ನೀಡಬೇಕಾಗುತ್ತದೆ.
ಮಾಗಿ ಉಳುಮೆ ಎಂದರೇನು : ಮಾಗಿ ಉಳುಮೆ (Summeಡಿ Pಟoughiಟಿg) ಎಂಬುವುದು ಮುಂಗಾರಿಗಿಂತ ಮುಂಚೆ ಹಾಗೂ ಹಿಂಗಾರು ಬೆಳೆಗಳ ಕಟಾವಿನ ನಂತರ ಅಂದರೆ ಬೇಸಿಗೆಯಲ್ಲಿ ಕೈಗೊಳ್ಳಬಹುದಾದ ಕಡಿಮೆ ಖರ್ಚಿನ ಆದರೆ ಬಹುಪಯೋಗಿ ಕೃಷಿ ಚಟುವಟಿಕೆಯಾಗಿದೆ. ಆದರಿಂದು ಅನೇಕ ರೈತರು ಮಾಗಿ ಉಳುಮೆಯ ಮಹತ್ವವನ್ನರಿಯದೇ ನಿರ್ಲಕ್ಷ್ಯವಹಿಸುತ್ತಿದ್ದಾರೆ.
ಮಾಗಿ ಉಳುಮೆಯಿಂದಾಗುವ ಪ್ರಯೋಜನಗಳು: ಜಮೀನಿನ ಮಣ್ಣಿನ ಮೇಲೆ ಪರಿಣಾಮ: ಬೇಸಿಗೆಯಲ್ಲಿ ಮಾಗಿ ಉಳುಮೆಯಿಂದ ತಯಾರಾದ ಜಮೀನು ಮುಂಗಾರು ಮಳೆಯಾಗುತ್ತಿದ್ದಂತೆ ಹರಗಿ ಬಿತ್ತಲು ಸುಲಭವಾಗುವುದರಿಂದ ಕೃಷಿ ಭೂಮಿಯಲ್ಲಿನ ಮಣ್ಣು ತಿರುವು ಮುರುವಾಗಿ ಸಡಿಲವಾಗಿ ಬಿದ್ದಂತಹ ಮಳೆ ನೀರು ಸುಲಭವಾಗಿ ಅಲ್ಲಿಯೇ ಇಂಗಿ ಭೂಮಿಯ ಅಂತರ್ಜಲ ಮಟ್ಟ ಮತ್ತು ತೇವಾಂಶದ ಪ್ರಮಾಣ ಹೆಚ್ಚಾಗಿ ಮಳೆ ನೀರನ್ನು ಸಾಕಷ್ಟು ಪ್ರಮಾಣದಲ್ಲಿ ಇಂಗುವದಕ್ಕೆ ಸಹಕಾರಿಯಾಗುವುದರ ಜೊತೆಗೆ ಬಿತ್ತಿದ ಬೀಜಗಳ ಮೊಳಕೆ ಪ್ರಮಾಣ ಹಾಗೂ ಸದೃಢ ಸಸಿಗಳ ಸಂಖ್ಯೆ ಹೆಚ್ಚಾಗಿ ಅಧಿಕ ಇಳುವರಿ ಪಡೆಯಲು ಅನುಕೂಲವಾಗುತ್ತದೆ.
ಮಣ್ಣಿನ ಮೇಲ್ಪದರ ಸಡಿಲಗೊಂಡಿರುವುದರಿಂದ ಬೇರುಗಳು ಸರಾಗವಾಗಿ ಆಳಕ್ಕೆ ಇಳಿದು ಬೆಳೆಗಳ ಬೆಳವಣಿಗೆಯಿಂದ ಉತ್ತಮ ಫಸಲನ್ನು ಪಡೆಯಬಹುದು. ಮಾಗಿ ಉಳುಮೆಯನ್ನು ಇಳಿಜಾರಿಗೆ ಅಡ್ಡಲಾಗಿ ಮಾಡುವುದರಿಂದ ಮಣ್ಣು, ನೀರಿನ ಸಂರಕ್ಷಣೆ ಮತ್ತು ಮಳೆ ನೀರು ಸಂಗ್ರಹಣೆ ಹಾಗೂ ಅದರ ದಕ್ಷ ಉಪಯೋಗವನ್ನು ಹೆಚ್ಚಿನ ಖರ್ಚಿಲ್ಲದೆ ಮಾಡಬಹುದು. ಮಾಗಿ ಉಳುಮೆ ಮಾಡುವುದರಿಂದ ಜಮೀನಿನಲ್ಲಿ ಕೊರಕಲು ಬಿದ್ದು, ದಿಣ್ಣೆ ಮತ್ತು ಹಳ್ಳಗಳು ಆಗದ ಹಾಗೆ ತಪ್ಪಿಸಿ ಭೂ ಸಂರಕ್ಷಣೆ ಮಾಡಲು ಸಹಕಾರಿಯಾಗುತ್ತದೆ.
ಕಳೆಗಳ ನಿಯಂತ್ರಣ: ಮಾಗಿ ಉಳುಮೆ ಕೈಗೊಳ್ಳುವ ಮೂಲಕ ಕರಿಕೆಯ ಬೇರುಗಳು ಹಾಗೂ ಜೇಕಿನ ಗಡ್ಡೆಗಳನ್ನು ಮತ್ತು ಇನ್ನಿತರ ಕಳೆಗಳ ಅವಶೇಷಗಳನ್ನು ಸುಲಭವಾಗಿ ಆರಿಸಿ ತೆಗೆಯಲು ಸಹಾಯವಾಗುವುದರಿಂದ ಮುಂದಿನ ಬೆಳೆಗಳಲ್ಲಿ ಇಂತಹ ಕಳೆಗಳನ್ನು ಪ್ರಥಮ ಹಂತದಲ್ಲಿಯೇ ಹತೋಟಿ ಮಾಡಿ. ಇವುಗಳ ನಿಯಂತ್ರಣಕ್ಕಾಗಿ ತಗಲುವ ಕೂಲಿ ಮತ್ತು ಕಳೆನಾಶಕಗಳ ವೆಚ್ಚ ಮತ್ತು ಸಮಯವನ್ನು ಕಡಿಮೆಗೊಳಿಸಬಹುದಾಗಿದೆ.
ಕೀಟಗಳು ಮತ್ತು ರೋಗಾಣುಗಳ ನಿಯಂತ್ರಣ: ಹಿಂಗಾರು ಹಂಗಾಮಿನಲ್ಲಿ ಬೆಳೆದ ಬೆಳೆಗಳಿಗೆ ಸಂಬಂಧಿಸಿದ ಕೀಟಗಳ ಕೋಶ ಮತ್ತು ಅವುಗಳ ತತ್ತಿಗಳು ಸೂರ್ಯನ ಶಾಖಕ್ಕೆ ಒಗ್ಗುವುದರಿಂದ ಜಮೀನಿನ ಒಳಗೆ ಇರಬಹುದಾದ ಪೈರಿನ ವೈರಿಗಳಾದ ಕೆಲವು ಕೀಟಗಳು ಮತ್ತು ಸಸ್ಯ ರೋಗಗಳ ರೋಗಾಣುಗಳನ್ನು ಕೋಶದ ಹಂತದಲ್ಲಿಯೇ ಕಡಿಮೆ ಖರ್ಚಿನಲ್ಲಿ ಹತೋಟಿ ಮಾಡುವ ಮೂಲಕ ಮುಂದೆ ಆಗಬಹುದಾದ ಹೆಚ್ಚಿನ ಹಾವಳಿಯನ್ನು ಪ್ರಾಥಮಿಕ ಹಂತದಲ್ಲಿಯೇ ನಿಯಂತ್ರಿಸಿ ಕೀಟನಾಶಕಗಳಿಗೆ ತಗಲುವ ಅನಾವಶ್ಯಕ ಖರ್ಚನ್ನು ಕಡಿಮೆಗೊಳಿಸಬಹುದು.
ಬೆಳೆ ಉಳಿಕೆಗಳು: ಬೆಳೆ ಕಟಾವಿನ ನಂತರ ಉಳಿದ ಬೆಳೆ ಉಳಿಕೆಗಳು ಮತ್ತು ತ್ಯಾಜ್ಯವಸ್ತುಗಳು ಮಣ್ಣಿನಲ್ಲಿ ಬೇಗನೆ ಕೊಳೆತು ಉತ್ತಮ ಸಾವಯವ ಗೊಬ್ಬರವಾಗಿ ಮುಂಬರುವ ಬೆಳೆಗಳಿಗೆ ಪೂರೈಕೆಯಾಗುತ್ತದೆ. ಭೂ ಮೇಲ್ಮೈ ಸಾವಯವ ಹೊದಿಕೆ ಹಾಗೂ ಮಣ್ಣಿನಲ್ಲಿ ತೇವಾಂಶವನ್ನು ಹಿಡಿದಿಟ್ಟುಕೊಂಡು ಸಾವಯವ ಅಂಶ ಉಳಿಸÀುವುದರಿಂದ ಕೃಷಿ ಪರಿಸರದಲ್ಲಿ ಸಾವಯವ ಪದಾರ್ಥಗಳಿಂದ ಮಣ್ಣಿನ ಭೌತಿಕ ಮತ್ತು ರಾಸಾಯನಿಕ ಗುಣಧರ್ಮಗಳು ಉತ್ತಮಗೊಂಡು ಫಲವತ್ತತೆ ಹಾಗೂ ಉತ್ಪಾದಕತೆ ಹೆಚ್ಚಿಸುವ ಮೂಲಕ ಸ್ವಾಭಾವಿಕ ಕ್ರಿಯೆಗಳನ್ನು ತ್ವರಿತಗೊಳಿಸಿದಂತಾಗುತ್ತದೆ.
ನೈಸರ್ಗಿಕ ಹಾಗೂ ಜೈವಿಕ ಪರಿಸರದ ಮೇಲೆ ಪರಿಣಾಮ: ಮಾಗಿ ಉಳುಮೆಯಿಂದ ಕೀಟಗಳ ಕೋಶಗಳು ಮತ್ತು ರೋಗಾಣುಗಳನ್ನು ಕೊಕ್ಕರೆ ಮತ್ತು ಮುಂತಾದ ಪಕ್ಷಿಗಳು ಹೆಕ್ಕಿ ತಿನ್ನುವುದರಿಂದ ಜೈವಿಕ ನಿಯಂತ್ರಣದಿಂದ ಕೀಟ ಮತ್ತು ರೋಗಗಳನ್ನು ಹತೋಟಿ ಮಾಡಿ ಮಣ್ಣಿನ ಆರೋಗ್ಯ, ಪರಿಸರ ಮತ್ತು ಆಹಾರದಲ್ಲಿ ರಾಸಾಯನಿಕಗಳ ಪ್ರಮಾಣವನ್ನು ಕಡಿಮೆಗೊಳಿಸುವುದರ ಜೊತೆಗೆ ಮಣ್ಣಿನಲ್ಲಿ ಜೈವಿಕ ಕ್ರಿಯೆಯನ್ನು ಹೆಚ್ಚಿಸಲು ಸಹಕಾರಿಯಾದಂತಾಗುತ್ತದೆ.
ಹೀಗಾಗಿ ಉತ್ತಮ ಇಳುವರಿ ಪಡೆಯಬೇಕಾದರೆ ರೈತರು ಆಳವಾದ ಕಪ್ಪು ಮಣ್ಣಿನಲ್ಲಿ 2 ರಿಂದ 3 ಮರ್ಷಕ್ಕೊಮ್ಮೆ ಮತ್ತು ಕೆಂಪು ಮಣ್ಣಿನಲ್ಲಿ ಪ್ರತಿ ವರ್ಷಕೊಮ್ಮೆ ಆಳವಾಗಿ ಉಳುಮೆ ಮಾಡುವುದು ಸೂಕ್ತ. ಇದರಿಂದ ಮಳೆ ನೀರು ಕೊಯ್ಲು ಚೆನ್ನಾಗಿ ಆಗುವುದಲ್ಲದೆ ಅಧಿಕ ತೇವಾಂಶದಿಂದಾಗಿ ಭೂಮಿಯು ಫಲವತ್ತತೆಯಿಂದ ಕೂಡಿರುತ್ತದೆ. ಇದರಿಂದಾಗಿಯೇ “ಬಡವನ ಮಾಗಿ ಉಳುಮೆ ಸಾಹುಕಾರನ ಗೊಬ್ಬರಕ್ಕೆ ಸಮಾನ” ಎಂಬ ನಾಣ್ನುಡಿ ಎಲ್ಲ ಕೃಷಿಕರಲ್ಲಿ ಮನೆಮಾತಾಗಿದೆ. ಮಣ್ಣಿನ ಆರೋಗ್ಯ ಮತ್ತು ಫಲವತ್ತತೆಯನ್ನು ರಕ್ಷಿಸುವುದರ ಜೊತೆಗೆ ಕಡಿಮೆ ಖರ್ಚಿನ ಬೇಸಾಯವನ್ನು ಕೈಗೊಂಡು ತಮ್ಮ ಆದಾಯವನ್ನೂ ಸಹ ಹೆಚ್ಚಿಸಿಕೊಳ್ಳಬಹುದು.
- ಡಾ. ಶ್ರೀನಿವಾಸ, ಬಿ. ವಿ, ಡಾ. ಯುಸುಫ್‍ಅಲಿ ನಿಂಬರಗಿ ಮತ್ತು ಡಾ. ವಿನೋದ ಕುಮಾರ ನಾಯ್ಕ ಐಸಿಎಆರ್- ಕೃಷಿ ವಿಜ್ಞಾನ ಕೇಂದ್ರ, ಕಲಬುರಗಿ.