ನಂಜುಂಡಪ್ಪ ವರದಿ ಹಾಗೂ 371 (ಜೆ) ಕಲಂ ಅಡಿಯಲ್ಲಿ ಈ ಪ್ರದೇಶಕ್ಕೆ ಬೇಕಾಗಿರುವ ಎಲ್ಲ ಬಗೆಯ ಸೌಲತ್ತು ಮತ್ತು ಅವಕಾಶಗಳನ್ನು ಸರ್ಕಾರ ಕಲ್ಪಿಸಬೇಕಾಗಿದೆ. -ಡಾ. ಬಸವರಾಜ ಸಬರದ, ಹಿರಿಯ ಸಾಹಿತಿ, ಕಲಬುರಗಿ
ಕಲಬುರಗಿ: ಕನ್ನಡಕ್ಕೆ ಮೊಟ್ಟ ಮೊದಲ ಕೃತಿ ನೀಡಿರುವ ಕೀರ್ತಿ ಹೊಂದಿರುವ ಕಲ್ಯಾಣ ಕರ್ನಾಟಕ ಭಾಗದ ಸಾಹಿತಿ, ಬರಹಗಾರರಿಗೆ ವಿವಿಧ ಅಕಾಡೆಮಿ ಹಾಗೂ ಪ್ರಾಧಿಕಾರದ ಅಧ್ಯಕ್ಷ, ಸದಸ್ಯರನ್ನಾಗಿ ನೇಮಕ ಮಾಡಬೇಕು ಎಂದು ಕಲಬುರಗಿ ಸಾಹಿತ್ಯ ಬಳಗದ ಡಾ. ಬಸವರಾಜ ಸಬರದ ಆಗ್ರಹಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಡಿಯಲ್ಲಿ ರಾಜ್ಯದ ವಿವಿಧೆಡೆ ಸುಮಾರು 32 ಪ್ರತಿಷ್ಠಾನಗಳು ಸ್ಥಾಪನೆಯಾಗಿದ್ದು, ಆದರೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ಮಾತ್ರ ಈವರೆಗೆ ಒಂದೇ ಒಂದು ಪ್ರತಿಷ್ಠಾನ ಸ್ಥಾಪಿಸಿಲ್ಲ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
ಕಲಬುರಗಿಯಲ್ಲಿ ಬಿ.ಶ್ಯಾಮಸುಂದರ , ಬೀದರ್ ನಲ್ಲಿ ಜಯದೇವಿ ತಾಯಿ ಲಿಗಾಡೆ, ಕೊಪ್ಪಳದಲ್ಲಿ ಡಾ. ಸಿದ್ದಯ್ಯ ಪುರಾಣಿಕ, ರಾಯಚೂರಿನಲ್ಲಿ ಶಾಂತರಸ, ಯಾದಗಿರಿಯಲ್ಲಿ ಮೋಟ್ನಳ್ಳಿ ಹಸನಸಾಬ್, ಕಲಬುರಗಿಯಲ್ಲಿ ಡಾ. ಚನ್ನಣ್ಣ ವಾಲೀಕಾರ, ಬಳ್ಳಾರಿಯಲ್ಲಿ ಬಿ.ಚಿ. ಹೆಸರಿನ ಪ್ರತಿಷ್ಠಾನಗಳನ್ನು ಸ್ಥಾಪಿಸುವ ಮೂಲಕ ಹಿಂದುಳಿದ ಈ ಭಾಗಕ್ಕೆ ನ್ಯಾಯ ದೊರಕಿಸಬೇಕು ಎಂದು ಅವರು ಆಗ್ರಹಿಸಿದರು.
ಏಳು ಜಿಲ್ಲೆಗಳನ್ನು ಒಳಗೊಂಡಿರುವ ಕಲಬುರಗಿ ವಿಭಾಗ ಸಾಂಸ್ಕೃತಿಕ ವಾಗಿ ಶ್ರೀಮಂತವಾಗಿದ್ದರೂ ಸರ್ಕಾರದ ನಿರ್ಲಕ್ಷ್ಯ ಹಾಗೂ ಮಲತಾಯಿ ಧೋರಣೆಯಿಂದಾಗಿ ಈವರೆಗೆ ದೊರೆಯಬೇಕಾಗಿದ್ದ ಪ್ರಾದೇಶಿಕ ಮತ್ತು ಸಾಮಾಜಿಕ ನ್ಯಾಯ ಸಿಕ್ಕಿಲ್ಲ ಎಂದು ದೂರಿದರು.
ಸ್ವಾತಂತ್ರ್ಯ ನಂತರದಿಂದ ಇಲ್ಲಿಯವರೆಗೆ ಈ ಭಾಗದ ಬೆರಳೆಣಿಕೆಯಷ್ಟು ಸಾಹಿತಿ, ಕಲಾವಿದರು ಮಾತ್ರ ವಿವಿಧ ಅಕಾಡೆಮಿಗಳ ಅಧ್ಯಕ್ಷರಾಗಿ ನೇಮಕವಾಗಿರುವುದನ್ನು ಬಿಟ್ಟರೆ ಈವರೆಗೆ ಸಾಮಾಜಿಕ ಹಾಗೂ ಪ್ರಾದೇಶಿಕ ನ್ಯಾಯ ಸಿಕ್ಕಿರುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಶಿವರಾಜ ಪಾಟೀಲ, ಡಾ. ಗವಿಸಿದ್ಧ ಪಾಟೀಲ, ಡಾ. ಸುನಿಲ ಜಾಬಾದಿ ಇದ್ದರು.