ಮಧ್ಯಪಾನದ ದುಷ್ಪರಿಣಾಮಗಳ ಬಗ್ಗೆ ಅತಿಹೆಚ್ಚು ತಿಳುವಳಿಕೆ ನೀಡಿದ ವ್ಯಕ್ತಿ ಡಾ. ಬಾಬಾಸಾಹೇಬ್ ಅಂಬೇಡ್ಕರ್

0
80

ಮಧ್ಯಪಾನದ ದುಷ್ಪರಿಣಾಮಗಳ ಕುರಿತಂತೆ ದಲಿತರಿಗೆ ಅತಿಹೆಚ್ಚು ತಿಳುವಳಿಕೆಯನ್ನು ನೀಡಿದ ವ್ಯಕ್ತಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರು. ಇಂಥಾ ಅಂಬೇಡ್ಕರ್ ವಾದಿಗಳು ಎಷ್ಟಿದ್ದಾರೆ ಇಂಡಿಯಾದಲ್ಲಿ? ಕರ್ನಾಟಕದಲ್ಲಿ?

ಮುಂಬೈನಲ್ಲಿ ಚುನಾವಣೆಯೊಂದಕ್ಕೆ ಅವರು ಸ್ಪರ್ಧಿಸಿದಾಗ ಅದರಲ್ಲಿ ಸ್ವಯಂ ಕಾರ್ಯಕರ್ತನಾಗಿ ಕೆಲಸ ಮಾಡಲು ನಾಮ್ದೇವ್ ನಿಮ್ಗಢೆ ಅವಕಾಶ ಕೇಳಿದಾಗ ಬೈದು ಹೀಗೆ ಹೇಳಿದ್ದರು. “ನೀನು ವಿದ್ಯಾರ್ಥಿ. ಓದು ಮಾತ್ರ ನಿನ್ನ ಗುರಿಯಾಗಬೇಕು. ನಿನ್ನಂಥ ವಿದ್ಯಾರ್ಥಿಗಳನ್ನು ಬಳಸಿಕೊಂಡು ಹಾಳುಮಾಡಿ ಚುನಾವಣೆ ಗೆಲ್ಲುವ ಗೆಲುವೇ ನನಗೆ ಬೇಡ ” ಎಂದು ಕಪಾಳಕ್ಕೆ ಹೊಡೆದು ಕಳಿಸಿದ್ದರು. ಅದೇ ನಿಮ್ಗಢೆ ಅಮೇರಿಕಾದಲ್ಲಿ ಕೃಷಿಯ ಕುರಿತಂತೆ ಪಿಎಚ್.ಡಿ ಪಡೆದು, ಇಂಡಿಯಾದಿಂದ ಹೋಗಿ ಅಮೇರಿಕಾದಲ್ಲಿ ಪಿಎಚ್.ಡಿ ಪಡೆದ ಭಾರತದ ಎರಡನೆಯ ವ್ಯಕ್ತಿ ಎಂದು ಪ್ರಸಿದ್ಧರಾದರು. ಇಂಥಾ ಅಂಬೇಡ್ಕರ್ ವಾದಿ ದಲಿತ ರಾಜಕಾರಣಿಗಳು ಎಷ್ಟಿದ್ದಾರೆ ಇಂಡಿಯಾದಲ್ಲಿ? ಕರ್ನಾಟಕದಲ್ಲಿ?

Contact Your\'s Advertisement; 9902492681

ಬಾಬಾಸಾಹೇಬರು ಕಾರ್ಮಿಕ ಮಂತ್ರಿಯಾಗಿದ್ದಾಗ ಅವರ ಕಾರ್ಯಕ್ರಮಗಳಿಂದ ಹಿಡಿದು ಎಲ್ಲಾ ಖರ್ಚಿಗೂ ಅವರು ತಿಂಗಳಿಗೆ ಖರ್ಚುಮಾಡುತ್ತಿದ್ದ ಹಣ ಕೇವಲ ೫೦೦ ರೂಪಾಯಿ. ಇಂಥಾ ಕಾರ್ಮಿಕ ಮಂತ್ರಿಗಳು ಮುಂದೆ ಬನ್ನಿ ನೋಡಣ. ಇಂಡಿಯಾದಲ್ಲಿ? ಕರ್ನಾಟಕದಲ್ಲಿ?.

ಎಂಥಾ ಸಂಕಷ್ಟದಲ್ಲೂ ಅವರು ದುಡಿಯುತ್ತಿದ್ದ ಆದಾಯದಲ್ಲಿ ಅರ್ಧದಷ್ಟು ಹಣ ಪುಸ್ತಕಕ್ಕೆ ವಿನಿಯೋಗಿಸಿ, ಕೊನೆ ಕೊನೆಗೆ ಅದಾಯವನ್ನೂ ಮೀರಿ ಸಾಲಮಾಡಿ ಶಾಲೆ, ಹಾಸ್ಟೆಲ್ ಪುಸ್ತಕ ಎಂದು ಬದುಕು ಕಳೆದರು. ಇಂಥಾ ಅಂಬೆಡ್ಕರ್ ವಾದಿ ಓದು ಮತ್ತು ಚಳುವಳಿಯನ್ನು ಮುನ್ನೆಡಿಸಿದ ಅಂಬೇಡ್ಕರ್ ವಾದಿಗಳು ಮುಂದೆ ಬಂದು ನಿಲ್ಲಿ. ಇಂಡಿಯಾದಲ್ಲಿ? ಕರ್ನಾಟಕದಲ್ಲಿ?

ಯಾರ ಬಳಿಯಾದರೂ ಒಂದು ರೂಪಾಯಿ ಸಾಲಮಾಡಿದರೂ ಅದನ್ನು ನೆನಪಿಟ್ಟುಕೊಂಡು ವಾಪಸ್ ಮಾಡುತ್ತಿದ್ದವರು ಬಾಬಾಸಾಹೇಬರು. ಊಟದ ಬಗ್ಗೆ ಪ್ರೀತಿಯೇ ಇಲ್ಲದೇ ಸಿಕ್ಕಿದ್ದನ್ನು ತಿಂದು ಓದಲು ಕೂರುತ್ತಿದ್ದರು. ಪಡೆದ ಸಾಲಗಳನ್ನು ಮರೆತು, ಅಂಬೇಡ್ಕರ್ ವಾದಿ ಎಂದು ಹೇಳುತ್ತಾ ದಿನಕ್ಕೆ ನಾಲ್ಕು ತರದ ಊಟದ ತಟ್ಟೆಗಳನ್ನು ಜಗತ್ತಿಗೆ ತೋರಿಸುವ ಜನರನ್ನು ನೋಡಿ ಕಣ್ಯುಂಬಿಕೊಳ್ಳುವ ಈ ಹೊತ್ತಿನಲ್ಲಿ…..

ಕೊಳೆತುಹೋದ ಹೆಣದ ಶವಪೆಟ್ಟಿಗೆಯ ಮೊಳೆಗಳನ್ನು ಬಿಚ್ಚಲು ಕಚ್ಚಾಡುತ್ತಿರುವವರನ್ನು ಕಂಡು, ಯಾವ ಭಾಗದಿಂದ ನಗಬೇಕು ಎಂದು ಕಕ್ಕಾಬಿಕ್ಕಿಯಾಗಿದ್ದೇನೆ ಸಿವಾ.

ಸಾಮಾಜಿಕ, ರಾಜಕೀಯ, ಆರ್ಥಿಕ , ಸಾಹಿತ್ಯಕ ಚಿಂತನೆಗಳನ್ನು ಆಯಾ ಕಾಲದ ಚಾರಿತ್ರಿಕ ಪಾತಳಿಯಲ್ಲಿಟ್ಟು ನೋಡಬೇಕೆಂದು ಹೇಳುವ ಈ ಚಿಂತಕರು … ಬೇಡ ಬಿಡಿ ಕಷ್ಟವಿದೆ ಬದುಕು.

-ಪಿ. ಆರಡಿಮಲ್ಲಯ್ಯ ಕಟ್ಟೇರ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here