ಕಲಬುರಗಿ: ವಿದ್ಯಾರ್ಥಿಗಳು ವಿದ್ಯೆಯನ್ನು ಚೆನ್ನಾಗಿ ಕಲಿತರೆ ಜೀವನದಲ್ಲಿ ಉನ್ನತ ಸಾಧನೆಗೈಯಲು ಸಾಧ್ಯವಾಗುತ್ತದೆ ಎಂದು ಶರಣಬಸವೇಶ್ವರ ಸಂಸ್ಥಾನದ ಪೂಜ್ಯ ಮಾತೋಶ್ರೀ ದಾಕ್ಷಾಯಣಿ ಎಸ್. ಅಪ್ಪಾ ಅವರು ಅಭಿಪ್ರಾಯಪಟ್ಟರು.
ಅವರು ನಗರದ ಗೋದುತಾಯಿ ದೊಡ್ಡಪ್ಪ ಅಪ್ಪ ಕಲಾ ಮತ್ತು ವಾಣಿಜ್ಯ ಮಹಿಳಾ ಮಹಾವಿದ್ಯಾಲಯದಲ್ಲಿ ಗುರುವಾರ ಹಮ್ಮಿಕೊಂಡ 2018-19ರ ಶೈಕ್ಷಣಿಕ ವರ್ಷದ ಕಲಾವಾಣಿ ಸಮಾರೋಪ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡುತ್ತಾ, ಶರಣಬಸವೇಶ್ವರ ವಿದ್ಯಾವರ್ಧಕ ಸಂಘವು ಮಹಿಳೆಯರಿಗೆ ಹಲವಾರು ವರ್ಷಗಳಿಂದ ಜ್ಞಾನದಾಸೋಹ ಮಾಡುತ್ತಾ ಬಂದಿದೆ. ಹೈದ್ರಾಬಾದ ಕರ್ನಾಟಕ ಭಾಗದಲ್ಲಿ ಪೂಜ್ಯ ಅಪ್ಪಾಜೀಯವರು ಹೆಣ್ಣುಮಕ್ಕಳಿಗಾಗಿ ಅನೇಕ ಶಾಲಾ ಕಾಲೇಜುಗಳು ಆರಂಭಿಸಿದ್ದಾರೆ.
ಅದರಲ್ಲಿ ಮಹಿಳೆಯರಿಗಾಗಿಯೇ ಇಂಜಿನಿಯರಿಂಗ್ ಕಾಲೇಜು, ಎಂ.ಬಿ.ಎ. ವಿಜ್ಞಾನ, ಕಲಾ, ವಾಣಿಜ್ಯ ಮತ್ತು ಪತ್ರಿಕೋದ್ಯಮ ಕಾಲೇಜುಗಳನ್ನು ಆರಂಭಿಸಿ ವಿದ್ಯಾವಂತರನ್ನಾಗಿ ಮಾಡಿದ್ದಾರೆ. ಈ ಸಂಸ್ಥೆಯಲ್ಲಿ ಕಲಿತಿರುವ ಎಷ್ಟೋ ಮಹಿಳೆಯರು ಇಂದು ಉನ್ನತ ಸ್ಥಾನದಲ್ಲಿದ್ದಾರೆ. ವಿದ್ಯೆ ಒಂದು ಇದ್ದರೆ ಮಹಿಳೆಯರು ಸ್ವಾವಲಂಬಿಯಾಗಿ ಬದುಕುಬಹುದು ಮತ್ತು ಉನ್ನತ ಸಾಧನೆಗಳನ್ನು ಮಾಡಬಹುದು ಎಂದು ವಿದ್ಯಾರ್ಥಿನಿಯರಿಗೆ ಕಿವಿ ಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಕಲಬುರಗಿಯ ಫಸ್ಟ್ ಅಡಿಶನಲ್ ಸಿವಿಲ್ ನ್ಯಾಯಧೀಶರಾದ ಶ್ರೀಮತಿ ಸೂರ‍್ಯಪ್ರಭ ಹೆಚ್.ಡಿ. ಮುಖ್ಯ ಅತಿಥಿಗಳಾಗಿ ಮಾತನಾಡುತ್ತಾ, ವಿದ್ಯಾರ್ಥಿಗಳು ಬಹಳ ಪರಿಶ್ರಮವಹಿಸಿದರೆ ಮಾತ್ರ ಜೀವನದಲ್ಲಿ ಉನ್ನತ ಸಾಧನೆಗೈಯಲು ಸಾಧ್ಯವಾಗುತ್ತದೆ. ಯಶಸ್ಸು ಹೊಂದಬೇಕಾದರೆ ಯಾವುದೇ ಸರಳ ಮಾರ್ಗವಿಲ್ಲ, ಕಷ್ಟಪಡುವುದೇ ಒಂದೇ ಮಾರ್ಗ, ಅದಕ್ಕಾಗಿ ವಿದ್ಯಾರ್ಥಿಗಳು ಶ್ರಮವಹಿಸಿದರೆ ಮಾತ್ರ ಸಾಧನೆಯ ಹಾದಿ ಸುಲಭವಾಗುತ್ತದೆ. ಶಿಸ್ತು, ಶ್ರದ್ಧೆ, ಕಠಿಣಶ್ರಮ ಇವು ಮೂರು ನಿಮ್ಮನ್ನು ಉನ್ನತ ಸ್ಥಾನಕ್ಕೆ ಕೊಂಡೊಯ್ಯುತ್ತವೆ. ತಪ್ಪಾದಾಗ ನಿರುತ್ಸಾಹಗೊಳ್ಳದೆ ಅದನ್ನು ತಿದ್ದಿಕೊಂಡು ಮುನ್ನಡೆದು ಯಶಸ್ವಿಗೊಳ್ಳಬೇಕು.
ಜೀವನದಲ್ಲಿ ಉತ್ತಮ ಅವಕಾಶಗಳು ಬಂದಾಗ ಅವುಗಳನ್ನು ತಿರಸ್ಕರಿಸದೆ ಸದುಪಯೋಗಪಡಿಸಿಕೊಳ್ಳಬೇಕು. ಮಹಿಳೆಯರಿಗೆ ಎಲ್ಲಾ ರಂಗಗಳಲ್ಲಿಯೂ ಬಹಳಷ್ಟು ಅವಕಾಶಗಳಿವೆ ಅವುಗಳನ್ನು ಪಡೆದುಕೊಳ್ಳಬೇಕು. ಎಸ್.ಎಸ್.ಎಲ್.ಸಿ. ಮತ್ತು ಪಿಯುಸಿ ಯಲ್ಲಿ ಪ್ರತಿವರ್ಷ ಹೆಣ್ಣುಮಕ್ಕಳೇ ಉತ್ತಮ ಫಲಿತಾಂಶ ಹೊಂದುತ್ತಿದ್ದಾರೆ ಇದರಿಂದ ಮಹಿಳೆಯರು ಹೆಚ್ಚು ವಿದ್ಯಾವಂತರಾಗುತ್ತಿದ್ದಾರೆ.
ಕಾನೂನಿನಲ್ಲಿ ಮಹಿಳೆಯರಿಗೆ ಹೆಚ್ಚು ಅವಕಾಶಗಳಿವೆ. ಮಹಿಳೆಯರ ಮೇಲಾಗುತ್ತಿರುವ ದೌಜರ್ನ್ಯ ಹೋಗಲಾಡಿಸುವುದಕ್ಕೆ ವಿಶೇಷ ಕಾನೂನುಗಳಿವೆ. ಅದನ್ನು ತಿಳಿದುಕೊಳ್ಳುವುದು ಅವಶ್ಯಕವಾಗಿದೆ. ವಿದ್ಯಾರ್ಥಿನಿಯರು ಒಂದು ನಿರ್ದಿಷ್ಟ ಗುರಿ ಹೊಂದಿ ಸಾಧನೆ ಮಾಡಿ ನೀವು ಈ ಸಮಾಜಕ್ಕೆ ಏನು ಎಂಬುವದನ್ನು ತೋರಿಸಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಶರಣಬಸವ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವ ಡಾ.ಲಿಂಗರಾಜ ಶಾಸ್ತ್ರೀ ಅವರು ಮಾತನಾಡಿದರು. ಮಹಾವಿದ್ಯಾಲಯದ ಪ್ರ್ರಾಚಾರ್ಯೆ ಡಾ.ನೀಲಾಂಬಿಕಾ ಶೇರಿಕಾರ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಈ ಸಂದರ್ಭದಲ್ಲಿ ಮಹಾವಿದ್ಯಾಲಯದ ಮುತ್ತೈದೆ, ಶೋಧ ಪುಸ್ತಕಗಳು ಹಾಗೂ ಕ್ರೀಡಾಲೋಕ, ಮಹಿಳಾವಾಣಿ, ನಾದಲೋಕ ಮತ್ತು ಕಲಾವಾಣಿ ಪತ್ರಿಕೆಗಳು ಬಿಡುಗಡೆಗೊಂಡವು. ವಿವಿಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿನಿಯರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಹಾಗೆಯೇ ಈ ವರ್ಷ ಪಿಎಚ್.ಡಿ ಪುರಸ್ಕೃತರಾದ ಡಾ.ಎನ್.ಎಸ್.ಹೂಗಾರ, ಡಾ.ಸಿದ್ದಲಿಂಗರೆಡ್ಡಿ ಮತ್ತು ಮಹಾವಿದ್ಯಾಲಯದಲ್ಲಿ ಇಪ್ಪತ್ತೈದು ವರ್ಷ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ದೈಹಿಕ ವಿಭಾಗದ ಮುಖ್ಯಸ್ಥೆ ಪ್ರೊ. ಜಾನಕಿ ಹೊಸೂರು ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಪ್ರೊ. ಶಾಂತಲಾ ನಿಷ್ಠಿ, ಪ್ರೊ. ಸಾವಿತ್ರಿ ಜಂಬಲದಿನ್ನಿ, ಡಾ. ಇಂದಿರಾ ಶೇಟಕಾರ, ಡಾ.ಸೀಮಾ ಪಾಟೀಲ, ಡಾ.ಪುಟ್ಟಮಣಿ ದೇವಿದಾಸ ಪ್ರೊ.ಜಾನಕಿ ಹೊಸುರ, ಡಾ.ಎನ್.ಎಸ್.ಹೂಗಾರ, ಪ್ರೊ.ರೇವಯ್ಯ ವಸ್ತ್ರದಮಠ, ಡಾ.ಸಿದ್ದಲಿಂಗರೆಡ್ಡಿ, ಈರಣ್ಣ ಸ್ವಾದಿ, ಸಿದ್ದು ಪಾಟೀಲ, ಕೃಪಾಸಾಗರ ಗೊಬ್ಬುರ, ಶ್ರೀಮತಿ ದೀಶಾ ಮೇಹತಾ, ಶ್ರೀಮತಿ ಅನಿತಾ ಗೊಬ್ಬುರ, ಶ್ರೀಮತಿ ಪದ್ಮಜ, ಶ್ರೀಮತಿ ಸಂಗೀತಾ, ಶ್ರೀಮತಿ ವಿದ್ಯಾ ರೇಶ್ಮಿ, ಶ್ರೀಮತಿ ಅನುಸುಯಾ ಬಡಿಗೇರ, ಶ್ರೀಮತಿ ಪ್ರಭಾವತಿ, ವಿನೋದ ಹಳಕಟ್ಟಿ, ಅಪ್ಪಾಸಾಬ ಬಿರಾದಾರ, ಅಶೋಕ ಮೂಲಗೆ, ಕು. ಸೌಮ್ಯಶ್ರೀ ಕೆ.ಎನ್, ಕು. ಮಹಾದೇವಿ ಟಿ.ಎನ್, ಕು.ಅಂಜನಾ ಜಾಧವ, ಕು.ಮೇಘನಾ ವಿ.ಬಂಗ್ಲೆ ಮತ್ತು ಅನೇಕ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು. ಕು.ಪ್ರಿಯಾಂಕಾ ಗಾಜರೆ ವಂದಿಸಿದರು, ಕು. ಸೌಮ್ಯಶ್ರೀ ಬಾಬ್ಜಿ ನಿರೂಪಿಸಿದರು. ಪ್ರೊ. ರೇವಯ್ಯ ವಸ್ತ್ರದಮಠ ಮತ್ತು ವಿದ್ಯಾರ್ಥಿನಿಯರು ಪ್ರಾರ್ಥಿಸಿದರು.