ಗಣೇಶ ಹಬ್ಬ: ಸೌಹಾರ್ದತೆಯಿಂದ ಆಚರಿಸಿ
ಶಹಾಬಾದ: ಗಣೇಶ ಹಬ್ಬದಲ್ಲಿ ಯಾವುದೇ ಅಹಿತಕರ ಘಟನೆ ಜರುಗದಂತೆ ಶಾಂತಿ ಸೌಹಾರ್ದತೆ ಕಾಪಾಡುವ ನಿಟ್ಟಿನಲ್ಲಿ ನಗರದ ಪೊಲೀಸ್ ಠಾಣೆಯಲ್ಲಿ ಬುಧವಾರ ಸಾಯಂಕಾಲ ಪೊಲೀಸ್ ಆರಕ್ಷಕ ನಿರೀಕ್ಷಕ ರಾಘವೇಂದ್ರ.ಎಸ್.ಹೆಚ್ ನೇತೃತ್ವದಲ್ಲಿ ಶಾಂತಿ ಸಭೆ ನಡೆಸಲಾಯಿತು.
ಈ ವೇಳೆ ಮಾತನಾಡಿದ ಪಿಐ ರಾಘವೇಂದ್ರ, ಹಬ್ಬಗಳ ಆಚರಣೆ ಸಮಾಜದ ಎಲ್ಲರಲ್ಲೂ ಸಾಮರಸ್ಯ ಮೂಡಿಸಬೇಕು.ಒಬ್ಬರಿಗೊಬ್ಬರಿಗೂ ಸಹಕಾರಯುತವಾಗಿ ನಡೆದುಕೊಂಡು ಆಚರಿಸಬೇಕು. ಎಂದರಲ್ಲದೇ, ಯಾವುದೇ ರೀತಿಯ ಅಹಿತಕರ ಘಟನೆಗಳಿಗೆ ಆಸ್ಪದ ಕೊಡದರೀತಿ ಹಬ್ಬದ ಆಚರಣೆ ಶಾಂತರೀತಿಯಲ್ಲಿ ನಡೆಸಿಕೊಂಡು ಹೋಗುವಂತೆ ತಿಳಿಸಿದರು.
ನಗರದಲ್ಲಿ ಗಣೇಶ ಹಬ್ಬದ ನಿಮಿತ್ತ ಅನಗತ್ಯವಾಗಿ ವಾಹನಗಳನ್ನು ನಿಲ್ಲಿಸಿ ಒತ್ತಾಯಪೂರ್ವಕವಾಗಿ ಯುವಕರು ಹಣ ವಸೂಲಿ ಮಾಡುತ್ತಿರುವ ಬಗ್ಗೆ ದೂರುಗಳು ಬರುತ್ತಿವೆ. ಆದ್ದರಿಂದ ಒಂದು ವೇಳೆ ವಸೂಲಿ ಮಾಡುತ್ತಿರುವುದು, ವಾಹನಗಳನ್ನು ನಿಲ್ಲಿಸುವುದು ಕಂಡು ಬಂದರೆ ಅವರ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು.ಇದೊಂದು ಉತ್ತಮ ಸಂಸ್ಕøತಿಯಲ್ಲ. ಅಲ್ಲದೇ ಸಮಾಜದ ಮುಖಂಡರು, ಪಾಲಕರು ಈ ಬಗ್ಗೆ ಗಮನಹರಿಸಿ ತಿಳುವಳಿಕೆ ನೀಡಬೇಕು- ರಾಘವೇಂದ್ರ ಪಿಐ
ಗಣೇಶ ಕೇವಲ ಒಂದು ಸಮುದಾಯಕ್ಕೆ ಸೀಮಿತವಾದ ದೇವರಲ್ಲ. ಎಲ್ಲಾ ಭಕ್ತರ ಸಂಕಷ್ಟಗಳನ್ನು ಪರಿಹರಿಸುವ ಆರಾಧ್ಯ ದೈವ.ಆದ್ದರಿಂದ ಗಣೇಶೋತ್ಸವ ಸುಗಮವಾಗಿ ನಡೆಯಬೇಕೆಂಬುದು ಪೊಲೀಸ್ ಇಲಾಖೆಯ ಅಪೇಕ್ಷೆ. ಹಾಗಾಗಿ ಸಾರ್ವಜನಿಕರ ಹಿತ ಕಾಪಾಡುವ ದೃಷ್ಟಿಯಿಂದ ಇಲಾಖೆ ಈ ಬಾರಿ ಹಲವಾರು ಮಾರ್ಗಸೂಚಿಗಳನ್ನು ಅಳವಡಿಸಿದೆ. ಗಣೇಶ ಕೂಡಿಸುವ ಸ್ಥಳದಲ್ಲಿ ಪೆಂಡಾಲ ನಿರ್ಮಾಣಕ್ಕೂ ಮುನ್ನ ಅನುಮತಿ ಪಡೆಯಬೇಕು. ಅಲ್ಲದೇ ಸರಕಾರದ ಆದೇಶದಂತೆ ಡಿಜೆ ಧ್ವನಿವರ್ಧಕ ಯಾವುದೇ ಕಾರಣಕ್ಕೂ ಬಳಸುವಂತಿಲ್ಲ. ಬಳಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.
ನಗರ ಸಭೆಯ ಪೌರಾಯುಕ್ತೆ ಪಂಕಜ್ ರಾವೂರ ಮಾತನಾಡಿ, ಗಣೇಶ ವಿಗ್ರಹ ವಿಸರ್ಜನೆ ವೇಳೆ ಬಾವಿ, ನದಿ ಹಾಗೂ ನೀರಿರುವ ಸ್ಥಳಗಳಲ್ಲಿ ಈಜು ಬಾರದವರನ್ನು ಬಿಡದಂತೆ ಎಚ್ಚರ ವಹಿಸಬೇಕು. ಅಲ್ಲದೇ ಯಾವುದೇ ರೀತಿಯ ಸಮಸ್ಯೆ ಇದ್ದರೂ ಅದನ್ನು ತಕ್ಷಣ ಪೊಲೀಸ್ ಇಲಾಖೆಯ ಗಮನಕ್ಕೆ ತಂದು ನಗರದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಸಾರ್ವಜನಿಕರು ಸಹಕರಿಸಬೇಕೆಂದು ಹೇಳಿದರು.
ಪಿಎಸ್‍ಐ ಚಂದ್ರಕಾಂತ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ.ರಶೀದ್ ಜೆಸ್ಕಾಂ ಎಇಇ ಮಹ್ಮದ್ ಯುನೂಸ್, ಬಿಜೆಪಿ ಮುಖಂಡ ಅರುಣ ಪಟ್ಟಣಕರ್ ವೇದಿಕೆಯ ಮೇಲಿದ್ದರು.
ಚಂದ್ರಕಾಂತ ಗೊಬ್ಬೂರ, ಬಸವರಾಜ ಸಾತ್ಯಾಳ, ಕಾಶಿನಾಥ ಜೋಗಿ, ಕನಕಪ್ಪ ದಂಡಗುಲಕರ್, ಸೂರ್ಯಕಾಂತ ಕೋಬಾಳ, ರವಿ ರಾಠೋಡ, ಶಿವಕುಮಾರ ನಾಟೀಕಾರ, ಸುಭಾಷ ಜಾಪೂರ, ಕೃಷ್ಣಪ್ಪ ಕರಣಿಕ, ಅವಿನಾಶ ಕೊಂಡಯ್ಯ, ಮಹ್ಮದ ಇಮ್ರಾನ್, ಅಜರುದ್ದೀನ್, ಸದಾನಂದ ಕುಂಬಾರ. ಸೇರಿದಂತೆ ಅನೇಕರು ಹಾಜರಿದ್ದರು.