ವಾಡಿ: ಬೆಳೆಗಳಿಗೆ ಕೀಟನಾಶಕ ಸಿಂಪರಣೆ ಮಾಡುವ ವೇಳೆ ವಿಷ ಸ್ಪರ್ಶವಾಗಿ ಯುವ ರೈತನೋರ್ವ ಮೃತಪಟ್ಟ ಘಟನೆ ಸೋಮವಾರ ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ತರ್ಕಸ್ ಪೇಟೆ ಗ್ರಾಮದಲ್ಲಿ ನಡೆದಿದೆ.
ಅಂಬ್ರೇಶ ಮೇಲಪ್ಪನೋರ (26) ಮೃತ ರೈತ. ಗ್ರಾಮದಲ್ಲಿರುವ ತನ್ನ ಸ್ವಂತ 3 ಎರಕೆ ಜಮೀನಿನಲ್ಲಿ ಬೆಳೆಯಲಾದ ಹತ್ತಿ ಬೆಳೆಗೆ ಕ್ರಿಮಿನಾಶಕ ತೈಲ ಸಿಂಪರಣೆ ಮಾಡುತಿದ್ದರು ಎನ್ನಲಾಗಿದ್ದು, ವಿಷಕಾರಿ ತೈಲ ಉಸಿರಾಟದ ಮೂಲಕ ದೇಹ ಸೇರಿ ರೈತ ಅಸ್ವಸ್ಥಗೊಂಡಿದ್ದರು. ತಕ್ಷಣ ಅವರನ್ನು ಸಮೀಪದ ಕೊಲ್ಲೂರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ನಂತರ ಯಾದಗಿರಿ ಖಾಸಗಿ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆ ಕೊಡಿಸಿದ್ದಾರೆ. ಅರೊಗ್ಯದಲ್ಲಿ ಚೇತರಿಕೆ ಕಾಣದ ಕಾರಣ ಪುನಃಹ ರೈತನನ್ನು ಕಲಬುರಗಿ ಯುನೈಟೆಡ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಮುಂದು ವರೆಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಆಸ್ಪತ್ರೆಯಲ್ಲೇ ಪ್ರಾಣ ಬಿಟ್ಟಿದ್ದಾರೆ.
ಮೃತ ರೈತನಿಗೆ ವರ್ಷದ ಹಿಂದೆ ಮದುವೆಯಾಗಿದ್ದು, ಪತ್ನಿ ಐದು ತಿಂಗಳ ಗರ್ಭಿಣಿಯಸಗಿದ್ದಾರೆ. ಮಂಗಳವಾರ ಮನೆಯಲ್ಲಿ ಸೀಮಂತ ಕಾರ್ಯಕ್ರಮ ಆಯೋಜನೆಯಾಗಿತ್ತು. ಸಂಭ್ರಮಾಚರಣೆಯಲ್ಲಿರಬೇಕಾದ ರೈತನ ಮನೆಯಲ್ಲೀಗ ಶೋಕ ಮಡುಗಟ್ಟಿಗೆ. ರೈತನ ಸಾವಿಗೆ ಸರ್ಕಾರ ಪರಿಹಾರ ನೀಡುವ ಮೂಲಕ ನೆರವಿಗೆ ಬರಬೇಕು ಎಂದು ರೈತ ಮುಖಂಡ ನಂದಾರೆಡ್ಡಿ ನಾಗರೆಡ್ಡಿ ಮನವಿ ಮಾಡಿದ್ದಾರೆ.