ಕಲಬುರಗಿ: ಮುಂಗಾರು ದುರ್ಬಲದಿಂದ ಕಲಬುರಗಿ ಜಿಲ್ಲೆಯಲ್ಲಿರುವ ಎಲ್ಲಾ ತಾಲೂಕುಗಳು ಒಳಗೊಂಡಂತೆ ರಾಜ್ಯದ 195 ತಾಲೂಕುಗಳು ಬರ ಪೀಡಿತ ಎಂದು ಸರಕಾರ ಘೋಷಿಸಿದ್ದು, ಕೂಡಲೆ ಎಕರೆಗೆ 25 ಸಾವಿರ ರೂಪಾಯಿ ಪರಿಹಾರ ನೀಡಬೇಕು ಎಂದು ಕನ್ನಡ ಭೂಮಿ ಜಾಗೃತಿ ಸಮಿತಿ ರಾಜ್ಯಾಧ್ಯಕ್ಷ ಲಿಂಗರಾಜ ಸಿರಗಾಪೂರ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಆಗ್ರಹಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು ರಾಜ್ಯದಲ್ಲಿರುವ 236 ತಾಲೂಕುಗಳಲ್ಲಿ 195 ಬರಪೀಡಿತ ತಾಲೂಕುಗಳು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘೋಷಿಸಿ ವಾರವೇ ಕಳೆದರೂ ಇನ್ನೂ ರೈತರಿಗೆ ಪರಿಹಾರದ ಹಣ ಬಂದಿಲ್ಲ.ಕಲಬುರಗಿ ಜಿಲ್ಲೆಯ ಎಲ್ಲಾ ತಾಲೂಕುಗಳು ಬರ ಪೀಡಿತ ಪ್ರದೇಶಗಳಾಗಿವೆ.ಮುಂಗಾರು ಬೆಳೆಗಳಾದ ಹೆಸರು,ಉದ್ದು, ಎಳ್ಳು ಸೇರಿದಂತೆ ಇತರೆ ಬೆಳೆಗಳು ಮಳೆಯ ಕೊರತೆಯಿಂದ ಬಹುತೇಕ ಕಡೆ ಬಿತ್ತನೆಯಾಗಿಲ್ಲ.ಹೀಗಾಗಿ ರೈತರು ಆರ್ಥಿಕವಾಗಿ ಸಂಕಷ್ಟ ಎದುರಿಸುತ್ತಿದ್ದಾರೆ.ಬೀಜ ಹಾಗೂ ರಸಗೊಬ್ಬರಗಳನ್ನು ಸಾಲ ಮಾಡಿ ಖರೀದಿಸಲಾಗಿದೆ.ಕೆಲವು ಕಡೆ ರೈತರು ಬಿತ್ತನೆ ಕಾರ್ಯಮಾಡಿ ಕೈ ಸುಟ್ಟುಕೊಂಡಿದ್ದಾರೆ.
ಕಲಬುರಗಿಯ ಪ್ರಮುಖ ಬೆಳೆ ತೊಗರಿಯು ಮಳೆಯ ಅಭಾವದಿಂದ ಸಕಾಲಕ್ಕೆ ಬಿತ್ತನೆಯಾಗದಿದ್ದರಿಂದ ಸಂಪೂರ್ಣ ನೆಲಕಚ್ಚಿವೆ.ಮಳೆ ಇಲ್ಲದೆ ಕಬ್ಬು,ಬಾಳೆ, ಇನ್ನಿತರ ವಾಣಿಜ್ಯ ಬೆಳೆಗಳು ಕೂಡ ನಷ್ಟವಾಗಿವೆ. ಇದರಿಂದ ರೈತರು ಮತ್ತಷ್ಟು ಗಾಬರಿಯಾಗಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಒಂದು ಕಡೆ ಬರದ ಛಾಯೆ ಆವರಿಸಿ ಆರ್ಥಿಕ ಸ್ಥಿತಿ ಎದುರಿಸುತ್ತಿರುವ ರೈತರಿಗೆ ಜಿಲ್ಲೆಯ ಸಹಕಾರಿ ಬ್ಯಾಂಕ್ ಸಾಲ ವಸೂಲಾತಿಗೆ ಇಳಿದಿದೆ.ಸಾಲ ಪಾವತಿಸುವಂತೆ ಅನ್ನದಾತನಿಗೆ ಪೀಡಿಸುತ್ತಿದ್ದರು ಸರಕಾರ ಮೌನ ವಹಿಸಿದೆ.ಸಾಲದ ಕಾಟದಿಂದ ಕಂಗಾಲಾಗಿ ರಾಜ್ಯದಲ್ಲಿ ಅನೇಕ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರೈತರ ಬಗ್ಗೆ ಎಳ್ಳಷ್ಟೂ ಕಾಳಜಿ ವಹಿಸುತ್ತಿಲ್ಲ.ವ್ಯಾಪಾರ,ವಾಣಿಜ್ಯ ಕ್ಷೇತ್ರಗಳಿಗೆ ನೀಡಿರುವ ಕೋಟ್ಯಂತರ ರೂಪಾಯಿ ಸಾಲ ಮನ್ನಾ ಮಾಡುವ ಸರಕಾರ ರೈತರ ಬೆಳೆ ಸಾಲ ಮನ್ನಾ ಮಾಡಲು ಮೀನ ಮೇಷ ಎಣಿಸುತ್ತಿದೆ ಎಂದು ಅವರು ದೂರಿದ್ದಾರೆ.
ಬರ ಪೀಡಿತ ತಾಲೂಕುಗಳು ಎಂದು ಗುರುತಿಸಿರುವ ಸರಕಾರ ಕೂಡಲೇ ಅಲ್ಲಿಯ ಎಲ್ಲಾ ರೈತರಿಗೂ ಎಕರೆಗೆ 25 ಸಾವಿರ ಪರಿಹಾರದ ಹಣ ನೀಡಬೇಕು.ಹಿಂಗಾರು ಬೆಳೆಗಳ ಬಿತ್ತನೆ ಕಾರ್ಯಕ್ಕೆ ಅನುಕೂಲವಾಗುತ್ತದೆ.ಬೆಳೆ ಸಾಲ ಬಡ್ಡಿ ಸಮೇತ ಮನ್ನಾ ಮಾಡಬೇಕೆಂದು ಅವರು ಒತ್ತಾಯಿಸಿದ್ದಾರೆ.