ಶಹಾಬಾದ :ಬಡಾವಣೆಯ ಸುತ್ತ ಗಬ್ಬೆದ್ದು ನಾರುತ್ತಿರುವ ಚರಂಡಿ ನೀರು, ಮನೆಗಳಿಗೆ ನುಗ್ಗುವ ಹಾವು-ಹಂದಿಗಳು, ರಾತ್ರಿಯಾದರೆ ಸೊಳ್ಳೆಗಳ ಕಾಟ. ನಿತ್ಯ ಒಂದಿಲ್ಲೊಂದು ಆರೋಗ್ಯ ಸಮಸ್ಯೆಯಿಂದ ಬಳಲುವ ಸಾರ್ವಜನಿಕರು.
ಹೌದು ಇದು ತೋನಸನಹಳ್ಳಿ ಗ್ರಾಮ ಪಂಚಾಯಿತ ವ್ಯಾಪ್ತಿಯ ಗೋಳಾ (ಕೆ) ಗ್ರಾಮದ ಹಾಗೂ ನಗರ ಸಭೆ ವಾರ್ಡ್ 14ರ ಪಕ್ಕದಲ್ಲಿಯೇ ಹೊಂದಿಕೊಂಡಿರುವ ನಿಜಾಮ ಬಜಾರನ ಗ್ರಾಮಸ್ಥರ ಗೋಳಾಗಿದೆ.
ನಗರ ಸಭೆಯ ವ್ಯಾಪ್ತಿಯ ಕೆಲವು ಬಡಾವಣೆಗಳಿಂದ ಹಲವು ವರ್ಷಗಳಿಂದ ಚರಂಡಿ ನೀರು ನಿಜಾಮ ಬಜಾರ ಗ್ರಾಮದ ಮನೆಗಳ ಹಾಗೂ ಖಾಲಿ ನಿವೇಶನಗಳಿಗೆ ನುಗ್ಗಿ, ಸಾರ್ವಜನಿಕರ ನೆಮ್ಮದಿ ಕದಡಿದೆ.ನಗರಸಭೆಯವರು ನಿಜಾಮ ಬಜಾರನ ರೇಲ್ವೆ ಸೇತುವೆವರೆಗೆ ಚರಂಡಿ ನಿರ್ಮಾಣ ಮಾಡಿ ಬಿಟ್ಟಿದ್ದಾರೆ.ಮುಂದೆ ಚರಂಡಿ ನೀರು ಹರಿಯಲು ಯಾವುದೇ ವ್ಯವಸ್ಥೆ ಕಲ್ಪಿಸದ ಕಾರಣ ಚರಂಡಿ ನೀರು ನಿಜಾಮ ಬಜಾರನ ರೇಲ್ವೆ ಸೇತುವೆ ಬಳಿಯಿಂದ ನಿಜಾಮ ಬಜಾರ ಬಡಾವಣೆಯ ಸುತ್ತಲೂ ಆವರಿಸುತ್ತಿದೆ.
ನೀರು ಸಂಗ್ರಹಗೊಂಡು ಕೊಳಚೆ ಪ್ರದೇಶವಾಗಿ ಮಾರ್ಪಟ್ಟಿದೆ. ಕೊಳಚೆಯಾಗಿ ನಿಂತ ನೀರಿನಲ್ಲಿ ಹಂದಿ ಹಾಗೂ ಎಮ್ಮೆಗಳ ಚೆಲ್ಲಾಟ ಮತ್ತು ವಿಷ ಜಂತುಗಳು ಕಾಟ ಆಗುತ್ತಿದೆ. ಹೀಗಾಗಿ ಕಲುಷಿತ, ಭಯದ ವಾತಾವರಣ ನಿರ್ಮಾಣಗೊಂಡಿದ್ದು, ಇದು ಸೊಳ್ಳೆಗಳ ಉತ್ಪತ್ತಿಯ ತಾಣವಾಗಿದೆ. ಇದರಿಂದ ಈ ಪ್ರ ದೇಶದಲ್ಲಿ ಸೊಳ್ಳೆಗಳ ಕಾಟ ಹೆಚ್ಚಾಗಿದ್ದು, ಜನರಲ್ಲಿ ನಾನಾ ಸಾಂಕ್ರಾಮಿಕ ರೋಗದ ಭೀತಿ ಆವರಿಸಿದೆ. ಇದರಿಂದ ಡೆಂಗ್ಯೂ, ಮಲೇರಿಯಾದಂತಹ ಕಾಯಿಲೆಗಳಿಗೆ ತುತ್ತಾಗಬೇಕಿದೆ. ಈ ಬಗ್ಗೆ ಅನೇಕ ಬಾರಿ ಪಿಡಿಓ, ನಗರಸಭೆಯ ಹಾಗೂ ತಾಪಂ ಅಧಿಕಾರಿಗಳಿಗೆ ತಿಳಿಸಿದರೂ ಕ್ಯಾರೆ ಎನ್ನುತ್ತಿಲ್ಲ. ಚರಂಡಿ ವ್ಯವಸ್ಥೆ ಮಾಡಿ ಸ್ವಚ್ಛತೆ ಕಾಪಾಡ ಬೇಕಾದ ಅಧಿಕಾರಿಗಳು ಗಾಢನಿದ್ರೆಗೆ ಜಾರಿದ್ದಾರೆ ಎಂದು ಸಾರ್ವಜನಿಕರ ದೂರಾಗಿದೆ.
ಇμÉ್ಟಲ್ಲ ಸಮಸ್ಯೆಗಳಿಂದ ಜನರು ಪರಿತಪಿಸುತ್ತಿದ್ದರೂ ಈವರೆಗೂ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಪ್ರತಿಸಲ ಬಂದಾಗಲೂ ನಮ್ಮ ಮನೆಗೆ ನೀರು ನುಗ್ಗುತ್ತದೆ ಎಂದು ಹೇಳಿದಾಗ ಅಧಿಕಾರಿಗಳು ಬರುತ್ತಾರೆ. ನಾಳೆಯೇ ಸರಿಪಡಿಸುತ್ತೇವೆ ಎಂದು ಹೇಳುತ್ತಾರೆ, ಆದರೆ ಮತ್ತೆ ಎಂದೂ ಇತ್ತ ತಲೆ ಹಾಕುವುದಿಲ್ಲ, ಇದರಿಂದ ಬೇಸತ್ತ ಗ್ರಾಪಂ ಸದಸ್ಯ ಮಹ್ಮದ್ ಫಯಾಜ್ ಸ್ವಂತ ಖರ್ಚಿನಲ್ಲಿ ಜೆಸಿಬಿಯಿಂದ ಜೆಕು, ಜಾಲಿ ಗಿಡಗಳನ್ನು ತೆರವುಗೊಳಿಸಿ ಸ್ವಚ್ಛಗೊಳಿಸಿದ್ದಾರೆ. ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಕೊಳಚೆ ನೀರು ಬೇರೊಂದು ಕಡೆಗೆ ಸಲೀಸಾಗಿ ಹರಿದು ಹೋಗಲು ಸೂಕ್ತ ಚರಂಡಿ ಮಾಡಿ ಸ್ವಚ್ಛತೆ ಕಾರ್ಯ ನಿಭಾಯಿಸಬೇಕು ಎಂದು ನಗರ ಸಭೆಯ ಪೌರಾಯುಕ್ತರಿಗೆ ಒತ್ತಾಯಿಸಿದ್ದಾರೆ.
ನೀರು ಸಂಗ್ರಹಗೊಂಡು ಗಬ್ಬೆದ್ದು ನಾರುತ್ತಿರುವುದರಿಂದ ಇಡೀ ಬಡಾವಣೆ ವಾತಾವರಣ ದುರ್ಗಂಧದಿಂದ ಕೂಡಿದೆ. ನೀರಿನ ಮಧ್ಯೆ ಸಾಕಷ್ಟು ಹುಲ್ಲು, ಜೇಕು ಬೆಳೆದು ಹಂದಿ ಹಾಗೂ ಹಾವುಗಳ ವಾಸಸ್ಥಳ ಮಾಡಿಕೊಟ್ಟಂತಿದೆ. ನಿತ್ಯ ಒಂದಿಲ್ಲೊಂದು ಮನೆಗಳಿಗೆ ನಿತ್ಯ ಹಾವುಗಳು ನೂಗುತ್ತಿವೆ. ಇದರಿಂದ ಇಲ್ಲಿನ ಜನರು ಚಿಂತಾಜನಕರಾಗಿದ್ದಾರೆ. ಚರಂಡಿ ನೀರು ಬಡಾವಣೆಯಲ್ಲಿ ಜಮಾವಣೆಗೊಂಡು ಮಲೆತು ಗಬ್ಬೆದ್ದು ನಾರುತ್ತಿದ್ದರೂ ಇಲ್ಲಿನ ಅಧಿಕಾರಿಗಳು ಮಾತ್ರ ತಮಗೆ ಸಂಬಂಧವಿಲ್ಲಂತೆ ನಡೆದುಕೊಳ್ಳುತ್ತಿದ್ದಾರೆ – ಮಹ್ಮದ ಫಯಾಜ್ ಗ್ರಾಪಂ ಸದಸ್ಯ .
ಗ್ರಾಪಂ ಸದಸ್ಯರೊಬ್ಬರೂ ನಿಜಾಮ ಬಜಾರ ಬಡವಾಣೆಯಲ್ಲಿ ನಗರಸಭೆಯ ವ್ಯಾಪ್ತಿಯ ಚರಂಡಿ ನೀರು ನಿಲ್ಲುತ್ತಿದೆ.ಇದರಿಂದ ಸಾಕಷ್ಟು ಸಮಸ್ಯೆ ತಲೆದೋರುತ್ತಿದೆ ಎಂದು ತಿಳಿಸಿದ್ದಾರೆ.ಚರಂಡಿಯನ್ನು ನಿರ್ಮಾಣ ಮುಂದುವರೆಸಿ ನೀರು ಅಲ್ಲಿಂದ ನೀರು ಮುಂದೆ ಸಾಗುವಂತೆ ಮಾಡಲಾಗುವುದು.ಅದಕ್ಕೆ ಅನುದಾನದ ಕೊರತೆಯಿದ್ದು, ಮುಂಬರುವ ಕೆಲವೇ ದಿನಗಳಲ್ಲಿ ಚರಂಡಿ ನಿರ್ಮಾನ ಮಾಡಿ ಸಮಸ್ಯೆ ಬಗೆಹರಿಸಲಾಗುವುದು. – ಪಂಕಜಾ ರಾವೂರ ಪೌರಾಯುಕ್ತರು ನಗರಸಭೆ ಶಹಾಬಾದ.