ಕಲಬುರಗಿ: ಶ್ರೀಮಾತಾ ಮಾಣಿಕೇಶ್ವರಿ, ಕೋಲಿ, ಕಬ್ಬಲಿಗ (ಗಂಗಾಮತ) ವಧು-ವರರ ರಾಜ್ಯ ಮಟ್ಟದ 8ನೇ ಸಮಾವೇಶ ಜ. 7ರಂದು ನಗರದ ವಿಶ್ವೇಶ್ವರ ಭವನದಲ್ಲಿ ಬೆಳಗ್ಗೆ 10.30ಕ್ಕೆ ನಡೆಯಲಿದೆ ಎಂದು ವಧು-ವರರ ಮಾಹಿತಿ ಕೇಂದ್ರದ ಜಿಲ್ಲಾಧ್ಯಕ್ಷ ಸೂರ್ಯಕಾಂತ ಬಿ. ಗುಡ್ಡಡಗಿ ತಿಳಿಸಿದರು.
ಈ ಸಮಾವೇಶವನ್ನು ಕಲಬುರಗಿ ಸಿದ್ಧಾರೂಢ ಮಠದ ಬ್ರಹ್ಮಚಾರಿ ಮಹೇರ್ಶವರಜೀ ಉದ್ಘಾಟಿಸಲಿದ್ದು, ವಧು-ವರರ ಮಾಹಿತಿ ಪುಸ್ತಕವನ್ನು ಗುಲ್‍ಸರಂನ ಮಲ್ಲಣ್ಣಪ್ಪ ಮುತ್ಯಾ ಬಿಡುಗಡೆ ಮಾಡಲಿದ್ದಾರೆ. ಮುಖ್ಯ ಭಾಷಣಕಾರರಾಗಿ ಡಾ. ಮಲ್ಲಿಕಾರ್ಜುನ ಮುಕ್ಕಾ ಆಗಮಿಸಲಿದ್ದಾರೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮುಖ್ಯ ಅತಿಥಿಯಾಗಿ ಪತ್ರಕರ್ತ ಸೂರ್ಯಕಾಂತ ಜಮಾದಾರ, ಶಿವರಾಯ ನಾವದಗಿ, ಮಾಣಿಕೇಶ್ವರಿ ಮಟ್ಟಿ, ಬಾಬು ಪಿ. ಆಮಾದಾರ, ಅಶೋಕ ಚಾಂದಕವಟೆ ಆಗಮಿಸಲಿದ್ದು, ಸೂರ್ಯಕಾಂತ ಗುಡ್ಡಡಗಿ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಹೇಳಿದರು.
ಇದೇವೇಳೆಯಲ್ಲಿ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿಯಲ್ಲಿ ಹೆಚ್ಚಿನ ಅಂಕ ಪಡೆದ ಪ್ರತಿಭಾವಂತ ಸಮಾಜದ ಮಕ್ಕಳಿಗೆ ಬಹುಮಾನ ನೀಡಿ ಸತ್ಕರಿಸಲಾಗುವುದು. ಈವರೆಗೆ 342 ವಧು, 134 ವರರರು ತಮ್ಮ ಹೆಸರನ್ನು ಬೋಂದಣಿ ಮಾಡಿಕೊಂಡಿದ್ದಾರೆ ಎಂದು ವಿವರಿಸಿದರು.
ಬಾಬು ತಡಕಲ್, ಸಾಯಬಣ್ಣ ವಡಗೇರಿ, ಭೀಮರಾವ ಐನಾಪುರ, ಬಸವರಾಜ ನಾಟಿಕಾರ ಇತರರಿದ್ದರು.