ಕಲಬುರಗಿ; ಕರ್ನಾಟಕದ ಸಾಂಸ್ಕೃತಿಕ ನಾಯಕ ವಿಶ್ವ ಗುರು ಬಸವಣ್ಣನವರ ಭಾವಚಿತ್ರ ಅನಾವರಣದ ಜಿಲ್ಲಾ ಮಟ್ಟದ ಸಮಾರಂಭವು ಫೆಬ್ರವರಿ 17 ರಂದು ಬೆಳಿಗ್ಗೆ 11 ಗಂಟೆಗೆ ಕಲಬುರಗಿ ನಗರದ ಡಾ.ಎಸ್.ಎಂ.ಪಂಡಿತ ರಂಗಮಂದಿರದಲ್ಲಿ ಆಯೋಜಿಸಲು ಶುಕ್ರವಾರ ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ ಅವರ ಅಧ್ಯಕ್ಷತೆಯಲ್ಲಿ ನಡೆದ ಪೂರ್ವಸಿದ್ಧತಾ ಸಭೆಯಲ್ಲಿ ನಿರ್ಧರಿಸಲಾಯಿತು.
ಹನ್ನೆರಡನೇ ಶತಮಾನದಲ್ಲಿ ಸಾಮಾಜಿಕ ಕ್ರಾಂತಿಗೆ ನಾಂದಿ ಹಾಡಿದ ಶ್ರೀ ಜಗಜ್ಯೋತಿ ಬಸವಣ್ಣನವರು ಪ್ರತಿಪಾದಿಸಿದ ಮೌಲ್ಯಗಳಾದ ಜಾತಿ ರಹಿತ ಸಮಾಜ, ಕಾಯಕದ ಮಹತ್ವ, ವರ್ಗ ರಹಿತ ಸಮಾಜ, ಜೀವನ ಮಾರ್ಗ ಸರ್ವ ಕಾಲಕ್ಕೂ ದಾರಿದೀಪವಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಇತ್ತೀಚೆಗೆ ಬಸವಣ್ಣನವರನ್ನು ರಾಜ್ಯದ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದಲ್ಲದೆ ಪ್ರತಿ ಸರ್ಕಾರಿ ಕಚೇರಿಯಲ್ಲಿ ಅವರ ಭಾವಚಿತ್ರ ಅಳವಡಿಸಲು ನಿರ್ದೇಶನ ನೀಡಿರುತ್ತಾರೆ ಎಂದು ಸಭೆಗೆ ಸರ್ವ ಸಮಾಜದ ಮುಖಂಡರಿಗೆ ತಿಳಿಸಿದರು.
ಡಾ.ಎಸ್.ಎಂ.ಪಂಡಿತ್ ರಂಗಮಂದಿರದಲ್ಲಿ ಭಾವಚಿತ್ರ ಅನಾವರಣ ಸಮಾರಂಭ ಅಂಗವಾಗಿ ವಚನ ಗಾಯನ ಮತ್ತು ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಯಲಿದ್ದು, ಜಿಲ್ಲೆಯ ಎಲ್ಲಾ ಸಮುದಾಯದ ಮುಖಂಡರು, ಸಂಘ-ಸಂಸ್ಥೆಗಳ ಪ್ರತಿನಿಧಿಗಳು, ಸಮಾಜ ಚಿಂತಕರು, ಲೇಖಕರು, ಸಾಹಿತಿಗಳು ಸಕ್ರಿಯವಾಗಿ ಬಾಗವಹಿಸಬೇಕು. ಕಲಬುರಗಿ ನಗರದಲ್ಲಿನ ಜಿಲ್ಲಾ ಮಟ್ಟದ ಕಚೇರಿಗಳಲ್ಲಿ ಭಾವಚಿತ್ರ ಅನಾವರಣ ನಂತರ ಕಚೇರಿ ಮುಖ್ಯಸ್ಥರು ರಂಗಮಂದಿರ ಕಾರ್ಯಕ್ರಮದಲ್ಲಿ ಹಾಜರಿರಬೇಕು ಎಂದು ಅಪರ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.
ಇನ್ನು ಶನಿವಾರ ಜಿಲ್ಲಾ, ತಾಲೂಕು, ಗ್ರಾಮ ಪಂಚಾಯತ ಹಂತದಲ್ಲಿನ ಎಲ್ಲಾ ಸರ್ಕಾರಿ ಕಚೇರಿ, ನಿಗಮ-ಮಂಡಳಿ, ಶಾಲಾ ಕಾಲೇಜುಗಳಲ್ಲಿ ಸಹ ಭಾವಚಿತ್ರ ಅನವರಣ ಕಾರ್ಯಕ್ರಮ ಆಯೋಜಿಸಬೇಕೆಂದ ಅವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಂತರ್ಜಾಲದಲ್ಲಿ ಲಭ್ಯವಿರುವ ವಿಶ್ವಗುರು ಬಸವಣ್ಣ ಸಾಂಸ್ಕೃತಿಕ ನಾಯಕ ಅಡಿ ಬರಹದ ಭಾವಚಿತ್ರ ಮಾತ್ರ ಬಳಸಬೇಕೆಂದರು.
ಬಸವಣ್ಣನವರ ಭಾವಚಿತ್ರ ಅನಾವರಣ ಸಮಾರಂಭ ಹಿನ್ನೆಲೆಯಲ್ಲಿ ರಂಗಮಂದಿರ ಸುತ್ತಮುತ್ತ ಸ್ವಚ್ಛತೆ, ವೇದಿಕೆ ಅಲಂಕಾರ, ಭಾವಚಿತ್ರ ಪೂಜೆ, ಪೊಲೀಸ್ ಬಂದೋಬಸ್ತ್ ಸೇರಿದಂತೆ ಎಲ್ಲಾ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ದತ್ತಪ್ಪ ಸಾಗನೂರ,ಕಲಬುರಗಿ ತಹಶೀಲ್ದಾರ ಮಧುರಾಜ ಸೇರಿದಂತೆ ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು, ಸಮಾಜದ ಮುಖಂಡರುಗಳು, ಸಾಹಿತಿಗಳು, ಪ್ರಗತಿಪರ ಚಿಂತಕರು, ಸಾರ್ವಜನಿಕರು ಭಾಗವಹಿಸಿದ್ದರು.