ಕಲಬುರಗಿ ಜಿಲ್ಲಾ 20ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ
ಕಲಬುರಗಿ; ಸುಣ್ಣದ ಕಲ್ಲು ಹೆಚ್ಚಿರುವ ಕಲಬುರಗಿಯಲ್ಲಿ ಸಿಮೆಂಟ್ ಕಾರ್ಖನೆಗಳು ಹೆಚ್ಚಿವೆ. ಇಲ್ಲಿನ ನೀರು, ಗಾಳಿ ಪಡೆಯುವ ಬಹುರಾಷ್ಟ್ರೀಯ ಈ ಕಂಪನಿಗಳು ನಾಡಿನ ಮಾತೃ ಭಾಷೆಯ ಕನ್ನಡ ಶಾಲೆಗಳನ್ನು ದತ್ತು ಪಡೆದು ಅದರ ಸವಾರ್ಂಗೀಣ ಅಭಿವೃದ್ದಿಗೆ ಶ್ರಮಿಸಬೇಕು ಎಂದು ಸಮ್ಮೇಳನಾಧ್ಯಕ್ಷ ಮತ್ತು ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಪತಿ ಡಾ.ಟಿ.ಎಂ.ಭಾಸ್ಕರ್ ಕರೆ ನೀಡಿದರು.
ಕಲಬುರಗಿ ನಗರದ ಡಾ.ಎಸ್.ಎಂ.ಪಂಡಿತ ರಂಗಮಂದಿರದ ಬಂಡಾಯ ಸಾಹಿತಿ ಡಾ.ಚೆನ್ನಣ್ಣ ವಾಲೀಕಾರ ವೇದಿಕೆಯಲ್ಲಿ ಇಂದಿನಿಂದ ಎರಡು ದಿನಗಳ ಕಾಲ ನಡೆಯಲಿರುವ ಕಲಬುರಗಿ ಜಿಲ್ಲಾ 20ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕಾರ್ಖಾನೆಯವರು ಸ್ವತ ಶಾಲೆ ದತ್ತು ಪಡೆಯಲು ಸಾಧ್ಯವಾಗದಿದ್ದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ವಹಿಸಲಿ. ಇದಕ್ಕೆಂದೆ ಕಾರ್ಪಸ್ ಫಂಡ್ ಮೀಸಲಿರಿಸಬೇಕು. ನಿರುದ್ಯೋಗ ನಿವಾರಣೆ ನಿಟ್ಟಿನಲ್ಲಿ ಸ್ಥಳೀಯರಿಗೆ ಹೆಚ್ಚಿನ ಉದ್ಯೋಗ ನೀಡುವ ಮೂಲಕ ಪ್ರದೇಶದ ಅಭಿವೃದ್ಧಿಗೂ ಕಂಪನಿಗಳು ಮುಂದಾಗಬೇಕೆಂಬುದು ನನ್ನ ಬಯಕ್ಕೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ತು ತನ್ನ ಸ್ವಂತ ಕಟ್ಟಡದಲ್ಲಿ ಕನ್ನಡ ಶಾಲೆ ತೆರೆಯುವ ಮೂಲಕ ಕನ್ನಡ ಉಳಿಸುವ ಕೆಲಸ ಮಾಡಬೇಕು. ಸಾಹಿತ್ಯ ಭವನಗಳು ಸದಾ ಕ್ರಿಯಾಶೀಲವಾಗಿ ಕನ್ನಡ ಕಟ್ಟುವ ಕೆಲಸದಲ್ಲಿ ನಿರತರಾಗಬೇಕೆಂದು ಆಶಯ ವ್ಯಕ್ತಪಡಿಸಿದ ಸಮ್ಮೇಳನಾಧ್ಯಕ್ಷರು, ಈ ಬಾಗಕ್ಕೆ ನೀಡಲಾದ 371ಜೆ ಪರಿಣಾಮಕಾರಿ ಅನುಷ್ಠಾನವಾಗಬೇಕು ಮತ್ತು ಇದರ ಲಾಭ ಜನ ಹೆಚ್ಚು ಪಡೆಯಬೇಕು ಎಂದರು.
ತೊಗರಿ ಬೆಳೆಗೆ ಗಂಗಾ ಕಲ್ಯಾಣ ನೀಡಿ: ಏಷ್ಯಾ ಖಂಡದಲ್ಲಿಯೆ ಕಲಬುರಗಿ ತೊಗರಿ ಗುಣಮಟ್ಟಕ್ಕೆ ಹೆಸರು ಮಾಡಿದೆ. ಇಲ್ಲಿ ರೈತರು ತೊಗರಿಯನ್ನೆ ಹೆಚ್ಚು ನಂಬಿದ್ದಾರೆ. ಹೀಗಾಗಿ ಸರ್ಕಾರವು ತೊಗರಿ ಬೆಳೆಯುವ ಎಲ್ಲಾ ರೈತರಿಗೆ ಗಂಗಾ ಕಲ್ಯಾಣ ಯೋಜನೆ ಜಾರಿಗೊಳಿಸಬೇಕು. ಆ ಮೂಲಕ ಇಲ್ಲಿನ ಅನ್ನದಾತನ ಬದುಕು ಹಸನಗೊಳಿಸಬೇಕೆಂದು ಒತ್ತಾಯ ಮಾಡಿದ ಅವರು, ಅನ್ನದಾತನ ಸಾವಿಗೆ ಕಡಿವಾಣ ಹಾಕಲು ಇನ್ನು ಅನೇಕ ಯೋಜನೆಗಳು ರೂಪಿಸಬೇಕು. ಇದಲ್ಲದೆ ಅಲ್ಲಲ್ಲಿ ನದಿಗಳಿಗೆ ಚೆಕ್ ಡ್ಯಾಂ ನಿರ್ಮಿಸುವ ಮೂಲಕ ಅಂತರ್ಜಲ ಹೆಚ್ಚಳಕ್ಕೆ ಸರ್ಕಾರ ಮುಂದಾಗಬೇಕು ಎಂದರು.
371ಜೆ ಬಗ್ಗೆ ಅಸಹನೆ ಬೇಡ: ಹಿರಿಯ ಸಾಹಿತಿ ಪೆÇ್ರ. ರಾಜಪ್ಪ ಧಳವಾಯಿ ಅವರು ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಸಂವಿಧಾನಬದ್ಧವಾಗಿ ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ದೊರೆತ 371(ಜೆ) ಮೀಸಲು ಬಗ್ಗೆ ಇತರೆ ಭಾಗದಲ್ಲಿ ಅಸಹನೆ ಇದೆ. ಇದು ಸರಿಯಲ್ಲ. ಹಿಂದುಳಿದ ಪ್ರದೇಶದ ಸರ್ವಾಂಗೀಣ ಅಭಿವೃದ್ಧಿಗೆ ಮೀಸಲು ಪೂರಕವಾಗಿದೆ. ತೆಲಾಂಗಾಣದಲ್ಲಿ ಇದೇ ರೀತಿಯ ಮೀಸಲಾತಿ ಹೋರಾಟ ರಕ್ತ ಚರಿತ್ರೆ ಇತಿಹಾಸ ಕಂಡಿದೆ. ಆದರೆ ಇಲ್ಲಿ ಶಾಂತಿಯುತವಾಗಿ 371(ಜೆ) ಕಾಯ್ದೆ ದೊರೆತಿದೆ. ಇದಕ್ಕೆ ಕಾರಣೀಕಕರ್ತರಾದ ಡಾ.ಮಲ್ಲಿಕಾರ್ಜುನ ಖರ್ಗೆ ಅವರನ್ನು ಈ ಸಂದರ್ಭದಲ್ಲಿ ಅಭಿನಂದಿಸುವೆ ಎಂದರು.
ಕಲಬುರಗಿ ಸೂಫಿ-ಸಂತರ ನಾಡು. ಹೀಗಾಗಿ ಇಲ್ಲಿ ಭಾವೈಕ್ಯತೆ, ಸಾಮರಸ್ಯ ಗಟ್ಟಿಯಾಗಿ ನೆಲೆಯೂರಿದೆ. ಸಾಹಿತ್ಯದ ತಿರುಳು ಸಹ ಸಾಮರಸ್ಯದ ಜೀವನವೇ ಆಗಿದೆ ಎಂದ ಅವರು ಆದರೆ ಇದೀಗ ಎಲ್ಲೆಡೆ ಅಸಹನೆ ಹೆಚ್ಚಿದೆ. ಜಾತಿ ತಿಳಿಯದ ಹೊರತು ಮಾತು ಮುಂದೆ ಸಾಗಲ್ಲ. ನಗರ ಪ್ರದೇಶದಲ್ಲಿ ಮನೆ ಬಾಡಿಗೆ ಇದೆ ವೆಜ್ ಓನ್ಲಿ, ನಾನ್ ವೆಜ್ ಓನ್ಲಿ ಎಂದು ಬೋರ್ಡ್ ಹಾಕಲಾಗುತ್ತಿದೆ. ಇದು ಅಸ್ಪೃಶ್ಯತೆಯ ಪರಮಾವಧಿಯಾಗಿದ್ದು, ಇದರಿಂದ ಜನ ಹೊರಬರಬೇಕಿದೆ ಎಂದು ಕರೆ ನೀಡಿದರು.
ಕಲಬುರಗಿ ಸಾಹಿತ್ಯದ ಗಣಿ: ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಶ್ರೀ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಮುಖ್ಯಸ್ಥೆ ಮಾತೋಶ್ರೀ ಡಾ. ದಾಕ್ಷಾಯಣಿ ಎಸ್.ಅಪ್ಪಾ ಅವರು ಮಾತನಾಡಿ ಕನ್ನಡಕ್ಕೆ ಮೊಟ್ಟ ಮೊದಲ ಉಪಲಬ್ದ ಗ್ರಂಥ “ಕವಿರಾಜ ಮಾರ್ಗ” ನೀಡಿದ ಪುಣ್ಯ ಭೂಮಿ ಕಲಬುರಗಿಯ ಮಳಖೇಡ್ ಆಗಿದೆ. ಹಿಂದೂ ನ್ಯಾಯಶಾಸ್ತ್ರದ “ಮಿತಾಕ್ಷರ ” ಕೃತಿ ರಚಿಸಿದವರು ಮರತೂರಿನ ವಿಜ್ಞಾನೇಶ್ವರರು. ಕಾಯಕ, ದಾಸೋಹ, ಸಾಮರಸ್ಯ ಬೆಸೆದ ಈ ನೆಲ ವಚನ ಸಾಹಿತ್ಯ, ದಾಸ ಸಾಹಿತ್ಯ ಕೊಡುಗೆ ಅನನ್ಯ. ಒಂದರ್ತದಲ್ಲಿ ಕಲಬುರಗಿ ಸಾಹಿತ್ಯದ ಗಣಿಯಾಗಿದೆ ಎಂದರು.
ಜಾತ್ರೆ, ಧಾರ್ಮಿಕ ಕಾರ್ಯಕ್ರಮಗಳು ಮಾನವನಲ್ಲಿ ಧಾರ್ಮಿಕ ಸಂಸ್ಕಾರ ಹುಟ್ಟು ಹಾಕಿದರೆ, ನುಡಿ ಜಾತ್ರೆ ಮಾತೃ ಭಾಷೆ, ನಾಡಿನ ಸಾಹಿತ್ಯದ ಸಂಸ್ಕಾರ ತಿಳಿಸುತ್ತದೆ ಎಂದ ಅವರು ವಿಜಯಕುಮಾರ ತೇಗಲತಿಪ್ಪ ಅವರ ಸಾರಥ್ಯದಲ್ಲಿ ಕಲಬುರಗಿಯನ್ನು ಸಾಂಸ್ಕøತಿಕ ಜಿಲ್ಲೆ ಮಾಡಲು ಹೊರಟಿದ್ದು ಸಂತಸದ ವಿಚಾರ ಎಂದರು.
ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಡಾ.ಕಲ್ಯಾಣರಾವ ಜಿ. ಪಾಟೀಲ, ಸಾರ್ವಜನಿಕ ಗ್ರಂಥಾಲಯ ಇಲಾಖೆಯ ನಿರ್ದೇಶಕ ಡಾ. ಸತೀಷಕುಮಾರ ಹೊಸಮನಿ ಅವರು ಸಹ ಮಾತನಾಡಿದರು.
ಇದಕ್ಕು ಮುನ್ನ ರಾಷ್ಟ್ರಧ್ವಜ ಮತ್ತು ನಾಡ ಧ್ವಜವನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವಿಜಯಕುಮಾರ ಪಾಟಿಲ ತೇಗಲತಿಪ್ಪಿ ಮತ್ತು ಪರಿಷತ್ ಧ್ವಜವನ್ನು ಕಲಬುರಗಿ ತಾಲೂಕ ಕ.ಸಾ.ಪ ಅಧ್ಯಕ್ಷ ಗುರುಬಸಪ್ಪ ಸಜ್ಜನಶೆಟ್ಟಿ ಅವರು ಧ್ವಜಾರೋಹಣ ಮಾಡಿದರು.
ಸಂಕಥನ ಸೇರಿ ಐದು ಕೃತಿ ಬಿಡುಗಡೆ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಧರ್ಮಣ್ಣ ಧನ್ನಿ ಅವರ ಸಂಪಾದಕತ್ವದಲ್ಲಿ ಮೂಡಿಬಂದ “ಸಂಕಥನ”, ಲೇಖಕ ಸಿ.ಎಸ್.ಆನಂದ ಅವರ “ಮಾವು ಮಲ್ಲಿಗೆ(ದ್ವಿಪದಿಗಳ ಸಂಕಲನ)”, ಪ್ರಾಧ್ಯಾಪಕ ಡಾ. ಬಸವರಾಜ ಸಿ. ಅವರ ವಿರಚಿತ “ದಲಿತ ಸಾಹಿತ್ಯದಲ್ಲಿ ಮಹಿಳಾ ಅಸ್ಮಿತೆಗಳ ಸಂಘರ್ಷ”, ಚಿತ್ರಕಲಾವಿದ ಡಾ.ಬಸವರಾಜ ಎಸ್. ಕಲೆಗಾರ ಅವರ “ಜನಪದ ಕೌದಿಯ ಚಿತ್ತಾರ” ಹಾಗೂ ಸಹಾಯಕ ಪ್ರಾದ್ಯಾಪಕ ಡಿ. ಗಿರೇಗೌಡ ಅರಳಿಹಳ್ಳಿ ಅವರ “ಬಹುಧಾರೆ” ಕೃತಿಗಳನ್ನು ಇಂದಿಲ್ಲಿ ಲೋಕಾರ್ಪಣೆಗೊಳಿಸಲಾಯಿತು.
ವರ್ಣರಂಜಿತ ಮೆರವಣಿಗೆ: ಇದಕ್ಕು ಮುನ್ನ ಎರಡು ದಿನ ಸಮ್ಮೇಳನದ ವರ್ಣರಂಜಿತ ಸಮ್ಮೇಳನಾಧ್ಯಕ್ಷರ ಮೆರವಣಿಗೆಗೆ ನಗರದ ಕನ್ನಡ ಸಾಹಿತ್ಯ ಪರಿಷತ್ತಿನ ಆವರಣದಲ್ಲಿ ಕಲಬುರಗಿ ಮಹಾನಗರ ಪಾಲಿಕೆ ಮಹಾಪೌರರಾದ ವಿಶಾಲ ಎಸ್. ಧರ್ಗಿ ಅವರು ಚಾಲನೆ ನೀಡಿದರು. ಮೆರವಣಿಗೆ ಡಾ.ಎಸ್.ಎಂ.ಪಂಡಿತ್ ರಂಗಮಂದಿರ ವರೆಗೆ ಸಾಗಿತ್ತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ದತ್ತಪ್ಪ ಸಾಗನೂರ ಇದರ ನೇತೃತ್ವ ವಹಿಸಿದ್ದರು.
ಊಟಕ್ಕೆ ಪಲಾವ್, ಮಜ್ಜಿಗೆ: ಎರಡು ದಿನಗಳ ಸಾಹಿತ್ಯ ಸಮ್ಮೇಳನಕ್ಕೆ ಬರುವ ಕನ್ನಡ ಆಸಕ್ತರಿಗೆ ಉಣಬಡಿಸಲು ಪಲಾವ್, ಮಜ್ಜಿಗೆ, ಹುಗ್ಗಿ ವ್ಯವಸ್ಥೆ ಮಾಡಲಾಗಿದೆ.
ಕಾರ್ಯಕ್ರಮದಲ್ಲಿ ಕರ್ನಾಟಕ ಮಾಹಿತಿ ಆಯೋಗದ ಕಲಬುರಗಿ ಪೀಠದ ಆಯುಕ್ತ ರವಿಂದ್ರ ಡಾಕಪ್ಪ, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ್ಯ ರಾಜು ಲೇಂಗಟಿ, ಕನ್ನಡ ಸಾಹಿತ್ಯ ಪರಿಷತ್ತಿನ ಯಶವಂತರಾಯ ಅಷ್ಟಗಿ, ಶಿವರಾಜ ಅಂಡಗಿ, ಸಿದ್ಧಣ್ಣ ಬಾಳಿ ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಕನ್ನಡಾಭಿಮಾನಿಗಳು ನುಡಿ ತೇರಿನ ಜಾತ್ರೆಗೆ ಸಾಕ್ಷಿಯಾದರು.