ಚಿತಾಪುರ: ಕಳೆದ 40 ವರ್ಷಗಳಿಂದ ಸಾಮಾನ್ಯ ಜನರ ಬೇಡಿಕೆಯಾದ ಚಿತಾಪುರ ರೈಲ್ವೆ ನಿಲ್ದಾಣದ ಪಾದಾಚಾರಿಗಳ ಮೇಲ್ ಸೇತುವೆಯನ್ನು ಲೋಕಾರ್ಪಣೆ ಮಾಡುವ ಅವಕಾಶ ಸಿಕ್ಕಿದ್ದು ಪುಣ್ಯದ ಕೆಲಸ .ಅಭಿವೃದ್ಧಿಯ ಕೆಲಸವನ್ನು ನೋಡಲಾಗದವರಿಂದ ಒಣ ಟೀಕೆ ಮತ್ತು ಅಸಹನೆ ವ್ಯಕ್ತವಾಗುತ್ತಿದೆ ಎಂದು ಲೋಕಸಭಾ ಸದಸ್ಯರಾದ ಡಾ. ಉಮೇಶ್ ಜಾಧವ್ ಹೇಳಿದರು.
ಚಿತ್ತಾಪುರ ರೈಲ್ವೆ ನಿಲ್ದಾಣದಲ್ಲಿ ಇಂದು ದಕ್ಷಿಣ ಮಧ್ಯ ರೈಲ್ವೆಯ ಸುಮಾರು ಎರಡು ಕೋಟಿ ರೂಪಾಯಿಗೂ ಅಧಿಕ ವೆಚ್ಚದಲ್ಲಿ ನಿರ್ಮಾಣ ಮಾಡಿದ ಪಾದಾಚಾರಿಗಳ ಮೇಲಸೇತುವೆಯನ್ನು ಉದ್ಘಾಟನೆ ಮಾಡಿ ಮಾತನಾಡುತ್ತಾ, ಚಿತ್ತಾಪುರ ರೈಲು ನಿಲ್ದಾಣದ ಇನ್ನೊಂದು ಭಾಗದ 8 ತಾಂಡಗಳ ಜನರಿಗೆ ಅವಶ್ಯಕತೆ ಯಾಗಿದ್ದ ಮೇಲಸೇತುವೆ ನಿರ್ಮಾಣ ಮಾಡಲು ಸ್ಥಾಪಿತ ಹಿತಾಸಕ್ತಿಗಳು ಅಡ್ಡಿಯಾಗಿದ್ದರು.
ಅನೇಕ ಜೀವ ಹಾನಿಗಳು ಆಗಿದ್ದರೂ ಮತ್ತು ಮುಗ್ಧ ಹೆಣ್ಣು ಮಗಳೊಬ್ಬಳು ರೈಲು ಹಳಿ ದಾಟುವಾಗ ಇಪ್ಪತ್ತ ರಷ್ಟು ಡಬ್ಬಿಗಳಿದ್ದ ಗೂಡ್ಸ್ ರೈಲು ಹಾದುಹೋಗಿ ಜೀವನ್ಮರಣದ ನಡುವೆ ಹೋರಾಡಿದ ಹೃದಯವಿದ್ರಾವಕ ಘಟನೆ ನೋಡಿ ಮನನೊಂದು ಸ್ಥಳೀಯರ ನೆರವಿನೊಂದಿಗೆ ಸಾಕಾರಗೊಂಡಿದೆ. ಸಿಕಂದರಾಬಾದ್ ರೈಲ್ವೆ ವಿಭಾಗದ ಅಧಿಕಾರಿಗಳ ಜೊತೆ ಚರ್ಚಿಸಿ ಇಂತಹ ಜನೋಪಯೋಗಿ ಯೋಜನೆ ಅನುಷ್ಠಾನ ಮಾಡಲು ಸಾಧ್ಯವಾಯಿತು.
ಸಣ್ಣ ಮೊತ್ತದ ಯೋಜನೆಯಾದರೂ ನೂರಾರು ಜನರ ಬದುಕಿನ ಮಹತ್ವದ ಯೋಜನೆ ಆಗಿರುವುದರಿಂದ ಇದನ್ನು ಉದ್ಘಾಟಿಸಲು ಸಂತೋಷವಾಗಿದೆ.ಈ ಮೇಲಸೇತುವೆಗೆ, ಈ ಭಾಗದ ಸಾಮಾಜಿಕ ಸೇವಾ ಕಾರ್ಯಕರ್ತ ರಾಮದಾಸ್ ಚೌಹಾಣ್ ಮೇಲ್ ಸೇತುವೆ ಹೆಸರಿಡಲು ಪ್ರಯತ್ನಿಸಲಾಗುವುದು. ಇಂತಹ ಜನಪರ ಯೋಜನೆಗಳನ್ನು ಸಹಿಸಲಾಗದೆ ಕಾಂಗ್ರೆಸ್ಸಿಗರಿಗೆ ಸಹಿಸಲು ಆಗುತ್ತಿಲ್ಲ.ನರೇಂದ್ರ ಮೋದಿಯವರು ಕಲಬುರಗಿಗೆ ಬಂದರೆ ಕಾಂಗ್ರೆಸ್ಸಿಗರ ಬಿಪಿ ಹೆಚ್ಚಾಗಿ ಹೊಟ್ಟೆ ನೋವು ಪ್ರಾರಂಭವಾಗುತ್ತದೆ.
ಅಭಿವೃದ್ಧಿಯನ್ನು ಸಹಿಸದವರಿಂದ ಇಲ್ಲಸಲ್ಲದ ಟೀಕೆಗಳು ವ್ಯಕ್ತವಾಗುತ್ತಿದೆ. ಸಾಮಾನ್ಯ ಜನರ ಬದುಕಿಗೆ ಸ್ಪಂದಿಸದೆ ಓಟು ಮಾಡುವ ಏಜೆಂಟರ ಪರವಾಗಿ ವಕಾಲತ್ತು ವಹಿಸುವ ಕಾಂಗ್ರೆಸ್ ನಾಯಕರ ನಿಜ ಬಣ್ಣ ಈಗ ಬಯಲಾಗಿದೆ.
ಸ್ವಾತಂತ್ರ್ಯ ಗಳಿಸಿ 75 ವರ್ಷ ಸಂದರೂ, ಸ್ವತಃ ಇಲ್ಲಿನವರೇ ರೈಲ್ವೆ ಖಾತೆಯ ಸಚಿವರಾಗಿದ್ದರೂ ಕಲ್ಬುರ್ಗಿಯ ಜನತೆಗೆ ಬೆಂಗಳೂರಿಗೆ ಸಂಚರಿಸಲು ಒಂದು ರೈಲು ನೀಡದೆ ಮೋಸ ಮಾಡಿದ್ದರೂ ಇದೀಗ ಎರಡು ರೈಲುಗಳನ್ನು ಬೆಂಗಳೂರಿಗೆ ಪ್ರಾರಂಭಿಸಿ ಇತಿಹಾಸ ನಿರ್ಮಿಸಲಾಗಿದೆ. ಪ್ರಿಮಿಯರ್ ಎಕ್ಸ್ ಪ್ರೆಸ್ ವಂದೇ ಭಾರತ್ ಆರಂಭವಾಗಿರುವುದನ್ನು ಡಕೋಟಾ ಎಕ್ಸ್ ಪ್ರೆಸ್ ಎಂದು ಪ್ರಿಯಾಂಕ ಖರ್ಗೆ ಲೇವಡಿ ಮಾಡಿರುವುದು ಅಭಿವೃದ್ಧಿಯನ್ನು ಸಹಿಸಲಾಗದ ಕಾಂಗ್ರೆಸ್ಸಿನ ಮನಸ್ಥಿತಿ ಎಂದರು.
ಈ ಭಾಗದಲ್ಲಿ ಮಾಡಿದ ಅಭಿವೃದ್ಧಿಯ ಬಗ್ಗೆ ಜನರು ಈಗ ಮಾತನಾಡುತ್ತಿದ್ದಾರೆ. ಇದರಿಂದ ದಿಕ್ಕೆಟ್ಟ ಕಾಂಗ್ರೆಸ್ ನಾಯಕರು ನಗೆ ಪಾಟಲಿಗೆ ಈಡಾಗಿದ್ದಾರೆ. ಈ ಭಾಗದಿಂದ ವಲಸೆ ಹೋಗುವುದನ್ನು ತಪ್ಪಿಸಲು ಪ್ರಧಾನ ಮಂತ್ರಿಯವರು ಜವಳಿ ಪಾರ್ಕ್ ಕೊಡುಗೆ ನೀಡಿದ್ದಾರೆ.
ಇದರಿಂದ ಒಂದು ಲಕ್ಷ ನೇರ ಹಾಗೂ ಎರಡು ಲಕ್ಷ ಪರೋಕ್ಷ ಉದ್ಯೋಗ ಲಭಿಸಲಿದೆ. ಯಾವುದೇ ಡಿಪ್ಲೋಮಾ ಸರ್ಟಿಫಿಕೇಟ್ ಇಲ್ಲದಿದ್ದರೂ ಐದನೇ ಕ್ಲಾಸ್ ಓದಿದವರಿಗೂ ಉದ್ಯೋಗದ ಅವಕಾಶಗಳಿವೆ. ಕಾಂಗ್ರೆಸ್ ಅಭಿವೃದ್ಧಿಯನ್ನು ಮರೆತಿದ್ದು ಬಿಜೆಪಿ ಸರ್ಕಾರ ಮಾಡುವ ಯೋಜನೆಗಳನ್ನು ನೋಡಿ ಸಹಿಸದೆ ಒಣ ಟೀಕೆ ಮಾಡುತ್ತಿದೆ. ಚಿತ್ತಾಪುರದ ಶಾಸಕರು ಮತ್ತು ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆಯವರು ನಾಲವಾರ, ಲಾಡ್ಲಾಪುರ ಮುಂತಾದೆಡೆ ರಸ್ತೆ ಅಭಿವೃದ್ಧಿ ಪಡಿಸಲು ಸಾಧ್ಯವಾಗದೆ ಕೈಚೆಲ್ಲಿ ಕೂತಿದ್ದಾರೆ.
ನಮ್ಮ ಸರಕಾರ ಮಂಜೂರು ಮಾಡಿದ ನೂರು ಹಳ್ಳಿಗಳಿಗೆ ನೀರುಣಿಸುವ 180ಕೋಟಿ ರೂ.ಗಳ ಯೋಜನೆಯನ್ನು ಯಾರ ಗಮನಕ್ಕೂತರದೆ ತರಾತುರಿಯಲ್ಲಿ ವಾಡಿಯಲ್ಲಿ ಉದ್ಘಾಟನೆ ಮಾಡಿದ್ದು ಅವರ ರಾಜಕೀಯ ಕುತ್ಸಿಕ ಬುದ್ಧಿಗೆ ನಿದರ್ಶನವಾಗಿದೆ. ಕಾಂಗ್ರೆಸ್ ಸರಕಾರವು ಬಂಜಾರಾ ಸಮುದಾಯದವರಿಗೆ ಮಂತ್ರಿ ಸ್ಥಾನ ಹಾಗೂ ಸ್ಥಾನಗಳನ್ನು ನೀಡದೆ ವಂಚಿಸಿದೆ.
ಕಲಬುರಗಿಯ ಪ್ರಗತಿಗೆ ಮುಂದಿನ ದಿನಗಳಲ್ಲಿ ಅನೇಕ ಅಭಿವೃದ್ಧಿ ಯೋಜನೆಗಳಿಗೆ ರೂಪುರೇಷೆ ಸಿದ್ಧಪಡಿಸಲಾಗಿದೆ. ಯಾವುದೇ ಜಾತಿ ಮತ ಪಂಥಗಳೆಂಬ ಭೇದವಿಲ್ಲದೆ ಮೋದಿ ಯವರ ಅಭಿವೃದ್ಧಿ ಯೋಜನೆಗಳು ಜಾರಿಗೊಳ್ಳುತ್ತಿದೆ. ಕೇವಲ ನಾಲ್ಕು ಜಾತಿಗಳು ಮಾತ್ರ ಬಿಜೆಪಿ ಗೆ ಮುಖ್ಯವೆಂದು ಪ್ರಧಾನಿಯವರು ಹೇಳುತ್ತಿದ್ದಾರೆ. ಅವುಗಳೆಂದರೆ ಗರೀಬ್, ಯೂತ್, ಅನ್ನದಾತ, ನಾರಿ(GYAN).
ಮೋದಿ ಆಡಳಿತದ ಹತ್ತು ವರ್ಷದಲ್ಲಿ ಕ್ರಾಂತಿಕಾರಿ ಸಾಧನೆ ಮಾಡಲಾಗಿದ್ದು ಮೂರನೇ ಬಾರಿಗೆ ಅವರನ್ನು ಪ್ರಧಾನಿ ಮಾಡಲು ಜನತೆ ಕೈಜೋಡಿಸಬೇಕಾಗಿದೆ.
ಕಲಬುರಗಿಯಲ್ಲಿ ಯಾವುದೇ ಲಾಬಿ ಮಾಡದೆ ಮತ್ತೆ ಜನಾಭಿಪ್ರಾಯದ ಮೇರೆಗೆ ಮೋದಿಯವರು ನನಗೆ ಟಿಕೆಟ್ ನೀಡಿರುವುದರಿಂದ ನಿಮ್ಮೆಲ್ಲರ ಆಶೀರ್ವಾದ ಇರಲಿ ಎಂದು ಕೋರುವೆ ಹಾಗೂ ಸಂಸದ ಸ್ಥಾನ ಜನರ ಸೇವೆ ಮಾಡುವ ಒಂದು ಅವಕಾಶವೆಂದು ಭಾವಿಸಿ, ಅಭಿವೃದ್ಧಿಯನ್ನು ಮಾಡಲು ಬದ್ಧನಾಗಿರುತ್ತೇನೆ ಎಂದು ಭರವಸೆ ನೀಡಿದರು.
ದಕ್ಷಿಣ ಮಧ್ಯ ರೈಲ್ವೆ ವಿಭಾಗದ ಸಿಕಂದರಾಬಾದ್ ವಲಯದ ಅಧಿಕಾರಿ R P ಸಿಂಗ್ ಅವರು ಸ್ವಾಗತ ಕೋರಿ 40 ವರ್ಷಗಳ ಬೇಡಿಕೆ ಸಹಕಾರ ಕೊಂಡಿದೆ ತಾಂಡೂರಿನಲ್ಲಿ ಈಗಾಗಲೇ ಲಿಫ್ಟ್ ಸೇವೆ ಕೂಡ ಪ್ರಾರಂಭವಾಗಿದ್ದು ಚಿತ್ತಾಪುರದಲ್ಲಿ ಅಗತ್ಯವಿರುವ ಲಿಫ್ಟ್ ಸೇವೆ ಸೇರಿದಂತೆ ಅಗತ್ಯ ಸೌಲಭ್ಯ ಆರಂಭವಾಗಲಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಚಿತ್ತಾಪುರದ ಮುಖಂಡರಾದ ಗೋಪಾಲ್ ರಾಥೋಡ್, ನ್ಯಾಯವಾದಿ ಚಂದ್ರಶೇಖರ, ಆವಂಟಿ, ಶರಣಪ್ಪ ತಳವಾರ ಮಾತನಾಡಿ ಅಭಿವೃದ್ಧಿ ಯೋಜನೆಯನ್ನು ಕೈಗೊಂಡ ಸಂಸದರಿಗೆ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷರಾದ ರವೀಂದ್ರ ಸಜ್ಜನ ಶೆಟ್ಟಿ, ನಾಗರಾಜ ಮಂಗಲಗಿ, ಶಂಕರಗೌಡ ಪಾಟೀಲ್, ಅಶ್ವಥ್ ರಾಥೋಡ್, ಶಿವರಾಯ ಚವಾಣ್ ಶಾಮ್ ಚವಾಣ್, ಮಲ್ಲಿಕಾರ್ಜುನ ಪೂಜಾರಿ ಹಾಗೂ ತಾಂಡವರು ವಲಯದ ರೈಲ್ವೆ ಅಧಿಕಾರಿಗಳು ಉಪಸ್ಥಿತರಿದ್ದರು.