ಕಲಬುರಗಿ: ಬಾರಿಯ ಕಲಬುರ್ಗಿ ಮೀಸಲು ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಒಂದೂವರೆ ಲಕ್ಷ ಅಧಿಕ ಮತಗಳಿಂದ ಗೆಲ್ಲಿಸುತ್ತೇವೆ ಎಂದು ಗ್ರಾಮೀಣ ಕ್ಷೇತ್ರದ ಶಾಸಕ ಬಸವರಾಜ್ ಮತ್ತಿಮೂಡ್ ಅವರು ಹೇಳಿದರು.
ನಗರದ ವರ್ತುಲ ರಸ್ತೆಯಲ್ಲಿನ ವಿಸ್ತಾರ್ ಹೊಟೇಲ್‍ನಲ್ಲಿ ಶುಕ್ರವಾರ ಬಿಜೆಪಿ ಅಭ್ಯರ್ಥಿ ಡಾ. ಉಮೇಶ್ ಜಾಧವ್ ಅವರ ಪರ ಪ್ರಚಾರಕ್ಕಾಗಿ ಗ್ರಾಮೀಣ ಕ್ಷೇತ್ರದ ಪ್ರಮುಖರ ಸಭೆಯಲ್ಲಿ ಮಾತನಾಡಿದ ಅವರು, ಕಳೆದ ಬಾರಿ ಬಿಜೆಪಿ ಅಭ್ಯರ್ಥಿ ಡಾ. ಉಮೇಶ್ ಜಾಧವ್ ಅವರು ಒಂದು ಲಕ್ಷ ಮತಗಳ ಅಂತದಿಂದ ಗೆದ್ದಿದ್ದರು. ಈ ಬಾರಿ ಆ ಮತಗಳ ಅಂತರ ಒಂದೂವರೆ ಲಕ್ಷ ದಾಟಲಿದ್ದು, ಮತ್ತೆ ಡಾ, ಉಮೇಶ್ ಜಾಧವ್ ಅವರು ಸಂಸತ್ತಿಗೆ ಪುನರಾಯ್ಕೆಯಾಗುವರು ಎಂದು ಭರವಸೆ ನೀಡಿದರು.
ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ. ಯಾವುದೇ ಅಭಿವೃದ್ಧಿ ಕಾರ್ಯಗಳು ಆಗುತ್ತಿಲ್ಲ. ಗ್ಯಾರಂಟಿ ಯೋಜನೆಗಳೂ ಸಹ ಸರಿಯಾಗಿ ತಲುಪುತ್ತಿಲ್ಲ. ಇನ್ನು ಬಿಜೆಪಿ ಕ್ಷೇತ್ರಗಳಿಗೆ ತಾರತಮ್ಯ ನೀತಿ ಅನುಸರಿಸಲಾಗುತ್ತಿದೆ. ಪಕ್ಷದ ಕಾರ್ಯಕರ್ತರ ಮೇಲೆ ಹಲ್ಲೆ, ದೌರ್ಜನ್ಯ ಆಗುತ್ತಿದ್ದು, ಕಾರ್ಯಕರ್ತರ ಮೇಲೆ ಸುಳ್ಳು ಪ್ರಕರಣಗಳನ್ನು ದಾಖಲಿಸುತ್ತಿದ್ದಾರೆ ಎಂದು ಅವರು ಆರೋಪಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ 876 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದಾಗ್ಯೂ, ಸಚಿವರೊಬ್ಬರು ಐದು ಲಕ್ಷ ರೂ.ಗಳ ಪರಿಹಾರಕ್ಕಾಗಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂಬ ಬೇಜವಾಬ್ದಾರಿಯುತ ಹೇಳಿಕೆಯನ್ನು ನೀಡುತ್ತಿದ್ದಾರೆ ಎಂದು ಟೀಕಿಸಿದರು.
ಸಂಸದ ಡಾ. ಉಮೇಶ್ ಜಾಧವ್ ಅವರು ಕಳೆದ ಐದು ವರ್ಷಗಳ ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದು, ನರೇಂದ್ರ ಮೋದಿ ಅವರಿಗೆ ಮತ್ತೊಮ್ಮೆ ಪ್ರಧಾನಿಯನ್ನಾಗಿಸಲು ಮತದಾರರು ಬಿಜೆಪಿಗೆ ಮತ್ತೆ ಗೆಲ್ಲಿಸುವರು ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಸಭೆಯಲ್ಲಿ ಪಾಲ್ಗೊಳ್ಳಲು ಸಂಸದ ಡಾ. ಉಮೇಶ್ ಜಾಧವ್ ಅವರು ಆಗಮಿಸುತ್ತಿದ್ದಂತೆಯೇ ಮಹಿಳಾ ಕಾರ್ಯಕರ್ತೆಯೊಬ್ಬರು ನೀವು ಚುನಾವಣೆ ಬಂದಾಗ ಮಾತ್ರ ನಮಗೆ ಕರೆಯುತ್ತೀರಿ. ಉಳಿದ ಯಾವುದೇ ಸಂದರ್ಭದಲ್ಲಿಯೂ ನಮಗೆ ಕರೆಯುವುದಿಲ್ಲ ಎಂದು ತೀವ್ರ ತರಾಟೆಗೆ ತೆಗೆದುಕೊಂಡರು.
ಪಕ್ಷದಿಂದ ಹಲವಾರು ಜಯಂತಿಗಳು ಆಗುತ್ತಿದ್ದರೂ ಸಹ ನಮಗೆ ಕರೆಯುವುದಿಲ್ಲ. ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರು ನಗರಕ್ಕೆ ಬಂದಾಗ ನಮಗೆ ಪಾಸ್ ಸಹ ಸಿಗಲಿಲ್ಲ ಎಂದು ಮಹಿಳಾ ಕಾರ್ಯಕರ್ತೆ ಬಹಿರಂಗವಾಗಿಯೇ ಜಾಧವ್ ಅವರಿಗೆ ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ಈ ಸಂದರ್ಭದಲ್ಲಿ ಪತ್ರಕರ್ತರು ಸ್ಥಳದಲ್ಲಿದ್ದುದರಿಂದ ಡಾ. ಜಾಧವ್ ಅವರು ಏನೂ ಆಗಿಲ್ಲ ಎನ್ನುವಂತೆ ಕೈಮುಗಿದುಕೊಂಡು ವೇದಿಕೆಗೆ ತೆರಳಿದರು. ಆದಾಗ್ಯೂ, ಮಹಿಳಾ ಕಾರ್ಯಕರ್ತೆಯ ಅಸಮಾಧಾನ ಮುಂದುವರೆದಿತ್ತು.
ಈ ಸಂದರ್ಭದಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ಶಿವರಾಜ್ ಪಾಟೀಲ್ ರದ್ದೇವಾಡಗಿ, ರಾಜ್ಯ ವಿಧಾನ ಪರಿಷತ್ ಮಾಜಿ ಸದಸ್ಯ ಅಮರನಾಥ್ ಪಾಟೀಲ್, ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಶ್ರೀಮತಿ ಶಶಿಕಲಾ ಟೆಂಗಳಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಶ್ರೀಮತಿ ಶೋಭಾ ಬಾಣಿ, ಅಶೋಕ್ ಬಗಲಿ ಮುಂತಾದವರು ಉಪಸ್ಥಿತರಿದ್ದರು.