ಗುರುಮಠಕಲ್: ಕಲಬುರಗಿ ಲೋಕಸಭಾ ಕ್ಷೇತ್ರ ದ ಬಿಜೆಪಿ ಅಭ್ಯರ್ಥಿ ಡಾ. ಉಮೇಶ್ ಜಾಧವ್ ಗುರುಮಠಕಲ್ ವಿಧಾನಸಭಾ ಕ್ಷೇತ್ರದಲ್ಲಿ ಸುಡು ಬಿಸಿಲನ್ನು ಲೆಕ್ಕಿಸದೆ ಮನೆ ಮನೆಗೆ ಭೇಟಿ ನೀಡಿ ರಾಷ್ಟ್ರಕ್ಕಾಗಿ ಮೋದಿ ಸಂದೇಶದೊಂದಿಗೆ ಬಿರುಸಿನ ಪ್ರಚಾರ ಕೈಗೊಂಡಿದ್ದಾರೆ.
ಯುಗಾದಿ ಹಬ್ಬದ ಸಡಗರದಲ್ಲಿರುವ ಮತದಾರರು ಡಾ. ಉಮೇಶ್ ಜಾಧವ್ ಅವರನ್ನು ಹಣೆಗೆ ಕುಂಕುಮ ಹಚ್ಚಿ ಬೇವು- ಬೆಲ್ಲ ನೀಡಿ ಸ್ವಾಗತಿಸುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು.
ಗುರುಮಠಕಲ್ ಕ್ಷೇತ್ರ ವ್ಯಾಪ್ತಿಯ ಮನೆಗಳಿಗೆ ಭೇಟಿ ನೀಡಿ ಜನರ ಮಧ್ಯೆ ಕುಳಿತು ಈ ಬಾರಿ ಬಿಜೆಪಿಗೆ ಮತ ಹಾಕ ಬೇಕಾದ ಮಹತ್ವದ ಕುರಿತು ಅವರು ಚರ್ಚೆ ನಡೆಸಿದರು. ರಾಷ್ಟ್ರದ ಸಮೃದ್ಧಿ ಮತ್ತು ನಮ್ಮ ನಾಡಿನ ಸಮೃದ್ಧಿಗಾಗಿ ಮತದಾರರು ಬಿಜೆಪಿಗೆ ಅಮೂಲ್ಯವಾದ ಮತವನ್ನಿತ್ತು ದೇಶ ರಕ್ಷಣೆ ಮತ್ತು ಸನಾತನ ಹಿಂದೂ ಸಂಸ್ಕೃತಿಯನ್ನು ಉಳಿಸಲು ಮತ ಹಾಕಬೇಕೆಂದು ಮನವಿ ಮಾಡಿದರು.
ಆಬಾಲ ವೃದ್ಧರಾದಿಯಾಗಿ ಎಲ್ಲರೂ ಮನೆಗೆ ಬಂದ ಅಭ್ಯರ್ಥಿಯನ್ನು ಪ್ರೀತಿಯಿಂದ ಸ್ವಾಗತಿಸಿ ಹಾರ ಮತ್ತು ಶಾಲು ನೀಡಿ ಸತ್ಕರಿಸಿದರು. ಹಿರಿಯ ಮತದಾರರು ಅಭ್ಯರ್ಥಿಗೆ ತಲೆ ಮೇಲೆ ಕೈಯನ್ನಿಟ್ಟು ಆಶೀರ್ವಾದ ನೀಡುತ್ತಿದ್ದರು.
ಈ ಬಾರಿಯೂ ಗೆಲುವು ನಿಮ್ಮದೇ ಮೋದಿಗಾಗಿ ನಮ್ಮ ಮತ ಎಂದು ಬಹಿರಂಗವಾಗಿ ಹರಸುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು. ಗುರುಮಠಕಲ್ ನಲ್ಲಿ ಸುಮಾರು 43 ಡಿಗ್ರಿ ಸೆಲ್ಸಿಯಸ್ ತಾಪಮಾನವಿದ್ದರೂ ಮನೆ ಮನೆಗಳಿಗೆ ಭೇಟಿ ನೀಡಿದಾಗ ಜನರು ಪ್ರೀತಿಯಿಂದ ಪಾನೀಯ ಬೇವು ಬೆಲ್ಲ, ನೀರು ನೀಡಿದರು. ಜಾಧವ್ ಅವರನ್ನು ಕಾಲೋನಿಗಳಿಗೆ ಮೆರವಣಿಗೆಯಲ್ಲಿ ಕರೆದುಕೊಂಡು ಸ್ವಾಗತಿಸುತ್ತಿರುವುದರಿಂದ ಜಾಧವ್ ಫುಲ್ ಖುಷ್ ನಿಂದ ಜನರೊಂದಿಗೆ ಬೆರೆತು ಮೇ 7 ರಂದು ಪ್ರತಿ ಮತದಾರರು ಮತಗಟ್ಟೆಗೆ ತೆರಳಿ ಮತ ಚಲಾಯಿಸುವಂತೆ ಮನವಿ ಮಾಡಿದರು. ರಾಷ್ಟ್ರದ ರಕ್ಷಣೆ ಮತ್ತು ಸಮಗ್ರ ಅಭಿವೃದ್ಧಿಗೆ ಮೋದಿಗಾಗಿ ಮತ ನೀಡಬೇಕೆಂದು ಮನವಿ ಮಾಡಿದರು.
ಈ ಬಾರಿಯ ಚುನಾವಣೆಯು ರಾಷ್ಟ್ರದ ಹಿತದೃಷ್ಟಿಯ ಚುನಾವಣೆಯಾಗಿದ್ದು ಎಲ್ಲರೂ ಮತ ಚಲಾಯಿಸಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು ಮೂರನೇ ಬಾರಿಗೆ ಪ್ರಧಾನಿ ಮಾಡಲು ಸಿದ್ಧರಾಗಬೇಕು ಎಂದು ಲೋಕಸಭಾ ಸದಸ್ಯರಾದ ಡಾ. ಉಮೇಶ್ ಜಾಧವ್ ನಂತರ ಸುದ್ದಿಗಾರರಿಗೆ ತಿಳಿಸಿದರು.
ಗುರುಮಠಕಲ್ ಮತಕ್ಷೇತ್ರದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವುದರಿಂದ ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರು ಉತ್ಸಾಹದಿಂದ ಗೆಲ್ಲಿಸಲು ಪ್ರಯತ್ನ ಪಡುತ್ತಿದ್ದಾರೆ. ಸ್ಥಳೀಯ ಶಾಸಕರಾದ ಶರಣ ಗೌಡ ಕಂದಕೂರ್ ಮತ್ತು ಜೆಡಿಎಸ್ ಪಕ್ಷದ ಮುಖಂಡರು ಕ್ಷೇತ್ರದಲ್ಲಿ ಪ್ರವಾಸ ಮಾಡಿ ಮತದಾರರನ್ನು ಭೇಟಿ ಮಾಡಿ ಈ ಬಾರಿ ರಾಷ್ಟ್ರಕ್ಕಾಗಿ ಮೋದಿ ಎಂಬ ಸಂದೇಶವನ್ನು ಮನೆ ಮನೆಗೆ ಮುಟ್ಟಿಸಲಿದ್ದಾರೆ. ಮತದಾರರ ಒಲವು ಬಿಜೆಪಿಯ ಕಡೆಗಿದ್ದು ಈ ಬಾರಿ ಕರ್ನಾಟಕದಲ್ಲಿ ಬಿಜೆಪಿ – ಜೆಡಿಎಸ್ ಮೈತ್ರಿ ಕೂಟವು ಎಲ್ಲ 28 ಸ್ಥಾನಗಳನ್ನು ಗೆದ್ದು ಅದ್ಭುತ ದಾಖಲೆ ಸೃಷ್ಟಿಸಲಿದೆ.
ಕಳೆದ 65 ವರ್ಷಗಳಿಂದ ಕಾಂಗ್ರೆಸ್ ಆಡಳಿತ ನಡೆಸಿದರೂ ಕಲ್ಯಾಣ ಕರ್ನಾಟಕ ಪ್ರದೇಶವನ್ನು ಅಭಿವೃದ್ಧಿ ಪಡಿಸಲು ಸಾಧ್ಯವಾಗದೆ ಹಿಂದುಳಿದಿರುವಿಕೆ ಪಟ್ಟವನ್ನು ತೊಲಗಿಸಲು ಅಸಮರ್ಥವಾಗಿದೆ. ಅಭಿವೃದ್ಧಿಗಾಗಿ ಬಳಸಬೇಕಾದ ಹಣವನ್ನು ಗ್ಯಾರಂಟಿ ಸ್ಕೀಮ್ ಗಳಿಗೆ ಹಾಕಿ ರಾಜ್ಯವು ಆರ್ಥಿಕ ದುಸ್ಥಿತಿ ಅನುಭವಿಸುತ್ತಿದೆ. ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗದೆ ಸರಕಾರ ಒದ್ದಾಡುತ್ತಿದೆ. ಅಭಿವೃದ್ಧಿಗೆ ಹಣ ನೀಡದ ಸರಕಾರದ ನಡೆಯಿಂದ ಎಲ್ಲ ಶಾಸಕರು ಅಸಮಾಧಾನಗೊಂಡಿದ್ದಾರೆ.
ರಾಜ್ಯದಲ್ಲಿ ಕುಡಿಯುವ ನೀರಿಗೂ ತೊಂದರೆ ಉಂಟಾಗಿ ಹಾಹಾಕಾರವೆದ್ದರೂ ಉಸ್ತುವಾರಿ ಸಚಿವರುಗಳು ತಮ್ಮ ಮಾವ, ಮಗ, ಮಗಳು, ಸೊಸೆಯಂದಿರನ್ನು ಗೆಲ್ಲಿಸುವ ಚಿಂತೆಯಲ್ಲಿದ್ದಾರೆ. ಕಲ್ಬುರ್ಗಿ ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ತೀವ್ರ ತೊಂದರೆ ಉಂಟಾಗಿದ್ದು ಸ್ವತಹ ಉಸ್ತುವಾರಿ ಸಚಿವರ ಕ್ಷೇತ್ರ ಚಿತ್ತಾಪುರದಲ್ಲಿ ಸಾಲು ಸಾಲು ಕೊಡಗಳನ್ನು ಇಟ್ಟು ಮಹಿಳೆಯರು ನೀರಿಗಾಗಿ ಕಾಯುತ್ತಿರುವ ದೃಶ್ಯ ಪ್ರಿಯಾಂಕ ಖರ್ಗೆ ಅವರ ಕಣ್ಣಿಗೆ ಕಾಣುತ್ತಿಲ್ಲ.
ಜಿಲ್ಲೆಯಲ್ಲಿ ಪ್ರತಿದಿನ ಕೊಲೆ ಸುಲಿಗೆಗಳು ಹೆಚ್ಚಾಗುತ್ತಿದ್ದು ಇತ್ತೀಚೆಗಷ್ಟೇ ಇಬ್ಬರು ಕೂಲಿ ಕಾರ್ಮಿಕ ಮಹಿಳೆಯರನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಮನ ನೋಯಿಸುವಂಥದ್ದು ಆದರೂ ಉಸ್ತುವಾರಿ ಸಚಿವರು ಈ ಘಟನೆ ಬಗ್ಗೆ ಮೌನವಾಗಿದ್ದು ಕಲಬುರ್ಗಿ ಜಿಲ್ಲೆ ಕ್ರಿಮಿನಲ್ ಜಿಲ್ಲೆಯ ಗುತ್ತಿರುವುದರ ಬಗ್ಗೆ ಚಕಾರವೆತ್ತುತ್ತಿಲ್ಲ. ದಿನ ಬೆಳಗಾದರೆ ಪ್ರಧಾನಮಂತ್ರಿ ಮೋದಿ ಅವರನ್ನು ಹಾಗೂ ಬಿಜೆಪಿಯನ್ನು ಬೈದು ಹೀಯಾಳಿಸುತ್ತಿರುವುದನ್ನು ಬಿಟ್ಟು ಜನರ ಸಮಸ್ಯೆ ಕಡೆಗೆ ಸ್ವಲ್ಪ ಗಮನಹರಿಸುವುದು ಒಳ್ಳೆಯದು ಎಂದು ಜಾಧವ್ ಸಲಹೆ ನೀಡಿದರು.
ಒಂದು ಸುಳ್ಳನ್ನು ಹಲವು ಬಾರಿ ಹೇಳಿ ಸತ್ಯವಾಗಿಸಲು ಹೆಣಗಾಡುತ್ತಿರುವ ಪ್ರಿಯಾಂಕ ಖರ್ಗೆ ಅವರಿಗೆ ಜಿಲ್ಲೆಯ ವಾಸ್ತವ ಚಿತ್ರಣ ಇನ್ನು ಮನದಟ್ಟಾಗುತ್ತಿಲ್ಲ. ಕಾಂಗ್ರೆಸಿನ ಈ ದುರಾಡಳಿತದ ವಿರುದ್ಧ ಮತದಾರರು ಈ ಬಾರಿ ರಾಷ್ಟ್ರಕ್ಕಾಗಿ ಮೋದಿ ಎಂಬ ಸಂದೇಶದೊಂದಿಗೆ ಮೇ 7ರಂದು ಮತ ಚಲಾಯಿಸಲು ಪ್ರತಿಜ್ಞೆ ಕೈಗೊಂಡಿರುವುದಾಗಿ ಜಾಧವ್ ಹೇಳಿದರು.