ಎಸ್‍ಯುಸಿಐ ಅಭ್ಯರ್ಥಿ ಪರ ಕರಪತ್ರ ಪ್ರಚಾರ

0
27

ಜನವಿರೋಧಿ ಕಾಂಗ್ರೆಸ್-ಬಿಜೆಪಿ ಪಕ್ಷಗಳನ್ನು ಸೋಲಿಸಿ ಕರೆ

ವಾಡಿ: ದೇಶದಲ್ಲಿ ಬಡತನ, ನಿರುದ್ಯೋಗ, ಬೆಲೆ ಏರಿಕೆ, ಅಸಮಾನತೆ, ಭ್ರಷ್ಟಾಚಾರ ಜೀವಂತವಾಗಿರಲು ಕೇಂದ್ರದಲ್ಲಿ ಅಧಿಕಾರ ನಡೆಸಿದ ಕಾಂಗ್ರೆಸ್ ಬಿಜೆಪಿ ಪಕ್ಷಗಳೇ ಕಾರಣವಾಗಿವೆ. ಬಂಡವಾಳಶಾಹಿ ಶೋಷಕ ವರ್ಗದ ಹಿತಕಾಯುವ ಈ ಎರಡೂ ಜನವಿರೋಧಿ ಪಕ್ಷಗಳನ್ನು ಸೋಲಿಸಿ ಅಧಿಕಾರದಿಂದ ದೂರ ಇಡಬೇಕು ಎಂದು ಆಲ್ ಇಂಡಿಯಾ ಡೆಮಾಕ್ರೇಟಿಕ್ ಯೂತ್ ಆರ್ಗನೈಸೇಷನ್ (ಎಐಡಿವೈಒ) ನಗರ ಸಮಿತಿ ಅಧ್ಯಕ್ಷ ಮಲ್ಲಿನಾಥ ಹುಂಡೇಕಲ್ ಹೇಳಿದರು.

ಶುಕ್ರವಾರ ವಾಡಿ ಪಟ್ಟಣದಲ್ಲಿ ಕಲಬುರಗಿ ಲೋಕಸಭೆ ಚುನಾವಣೆಯ ಎಸ್‍ಯುಸಿಐ (ಕಮ್ಯುನಿಸ್ಟ್) ಪಕ್ಷದ ಅಭ್ಯರ್ಥಿ ಕಾಮ್ರೇಡ್ ಎಸ್.ಎಂ.ಶರ್ಮಾ ಪರ ಮನೆ ಮನೆಗೆ ಕರಪತ್ರಗಳನ್ನು ವಿತರಿಸುವ ಮೂಲಕ ಮತಯಾಚಿಸಿ ಅವರು ಮಾತನಾಡಿದರು. ಬಡವರು, ರೈತರು, ಮಹಿಳೆಯರ ಪರವಾಗಿದ್ದೇವೆ ಎಂದು ಹೇಳಿಕೊಂಡು ಅಧಿಕಾರಕ್ಕೇರಿದ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು, ದೇಶವನ್ನು ಕಾಡುತ್ತಿರುವ ಗಂಭೀರ ಸಮಸ್ಯೆಗಳಿಗೆ ಯಾವುದೇ ರೀತಿಯ ಪರಿಹಾರ ಕಂಡುಕೊಳ್ಳಲಿಲ್ಲ. ಚುನಾವಣೆಗಳು ಬಂದಾಗ ಸುಳ್ಳು ಭರವಸೆಗಳನ್ನು ಕೊಟ್ಟು ಮತದಾರರಿಗೆ ಮೋಸ ಮಾಡುವುದೇ ಈ ಪಕ್ಷಗಳ ಕಾಯಕವಾಗಿದೆ. ಗೆದ್ದ ಬಳಿಕ ಬಡವರನ್ನು ತುಳಿಯುವ ಕಾನೂನುಗಳನ್ನೆ ಜಾರಿಗೆ ತಂದಿರುವುದು ಇವರ ಸಾಧನೆಯಾಗಿದೆ. ಹಣ ಮತ್ತು ಹೆಂಡವನ್ನು ಹಂಚಿ ಅಧಿಕಾರಕ್ಕೇರುವ ಈ ಭ್ರಷ್ಟ ಪಕ್ಷಗಳು, ಸರ್ಕಾರದ ಖಜಾನೆಯನ್ನು ಲೂಟಿ ಮಾಡುವುದರಲ್ಲೇ ಕಾಲ ಕಳೆಯುತ್ತಾರೆ. ಹಿಂದು-ಮುಸ್ಲಿಂ ಕೋಮು ಸಂಘರ್ಷ ಸೃಷ್ಠಿಸಿ ಜನರ ಐಕ್ಯತೆ ಒಡೆಯುತ್ತಾರೆ. ಇಂಥವರು ಜನಸೇವೆಗೆ ಯೋಗ್ಯರಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

Contact Your\'s Advertisement; 9902492681

ಎಐಡಿಎಸ್‍ಒ ಅಧ್ಯಕ್ಷ ವೆಂಕಟೇಶ ದೇವದುರ್ಗ ಮಾತನಾಡಿ, ಹಣಬಲವಿಲ್ಲದೆ ಯಾವೂದೇ ಚುನಾವಣೆ ಎದುರಿಸುವಂತಿಲ್ಲ ಎಂಬಂತಹ ಪರಸ್ಥಿತಿ ಸೃಷ್ಠಿಯಾಗಿದೆ. ಈ ಮಧ್ಯೆ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳು ಮತದಾರರಿಗೆ ಹಣವನ್ನು ಹಂಚಿ ಗೆಲ್ಲುವ ದಾರಿ ಹುಡುಕುತ್ತವೆ. ಇಲ್ಲಸಲ್ಲದ ಆಮೀಷ್ಯಗಳನ್ನೊಡ್ಡಿ ಮತದಾರರನ್ನು ವಂಚಿಸುತ್ತಾರೆ. ಕೋಟಿ ಕೋಟಿ ಹಣ ಸುರಿಯಲು ಇವರಿಗೆ ಹಣ ಎಲ್ಲಿಂದ ಬರುತ್ತದೆ? ಎಂಬುದನ್ನು ಜನರು ಅರ್ಥಮಾಡಿಕೊಳ್ಳಬೇಕು. ನಾವು ಎಸ್‍ಯುಸಿಐ ಪಕ್ಷದ ಕಾರ್ಯಕರ್ತರು ಬೀದಿಗಳಲ್ಲಿ ದೇಣಿಗೆ ಪೆಟ್ಟಿಗೆ ಹಿಡಿದು ನಿಲ್ಲುವ ಮೂಲಕ ಪಕ್ಷದ ನಿಧಿ ಸಂಗ್ರಹಿಸುತ್ತೇವೆ. ಚುನಾವಣೆ ಕರ್ಚಿಗಾಗಿ ನೋಟು ಕೊಡುವ ಮೂಲಕ ಜನರು ಓಟು ಕೊಡಬೇಕು ಎಂದು ಮನವಿ ಮಾಡುತ್ತಿದ್ದೇವೆ. ಜನಪರ ಹೋರಾಟಗಳಿಂದ ಹೊರಹೊಮ್ಮಿದ ಜನಪರ ಪಕ್ಷ ಎಸ್‍ಯುಸಿಐ ಅಭ್ಯರ್ಥಿ ಎಸ್.ಎಂ.ಶರ್ಮಾ ಅವರ ಬ್ಯಾಟ್ ಗುರುತಿಗೆ ಮತ ನೀಡಬೇಕು ಎಂದು ಮನವಿ ಮಾಡಿದರು.

ಎಸ್‍ಯುಸಿಐ (ಸಿ) ಕಾರ್ಯದರ್ಶಿ ವೀರಭದ್ರಪ್ಪಾ ಆರ್.ಕೆ, ಮುಖಂಡರಾದ ಶರಣು ಹೇರೂರ, ರಾಜು ಒಡೆಯರಾಜ್, ಗೋವಿಂದ ಯಳವಾರ, ಸಿದ್ಧಾರ್ಥ ತಿಪ್ಪನೋರ ಸೇರಿದಂತೆ ಇತರರು ಪ್ರಚಾರದಲ್ಲಿ ಪಾಲ್ಗೊಂಡಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here