ಹಟ್ಟಿ: ಮೇ ದಿನ ಆರಂಭವಾಗಿರುವುದೇ ಬಂಡವಾಳಗಾರರು ಕಾರ್ಮಿಕರನ್ನು ಪ್ರಾಣಿಗಳಂತೆ ದುಡಿಸಿಕೊಳ್ಳುತ್ತಿರುವುದರ ವಿರುದ್ಧ ನಡೆದ ದೀರ್ಘ ಹೋರಾಟದ ಪ್ರತಿಫಲದಿಂದ. ಆದರೆ ಇಂದು ನಮ್ಮನ್ನಾಳುತ್ತಿರುವ ಬಂಡವಾಳಗಾರರ ಪಕ್ಷ ಮತ್ತೆ ಕಾರ್ಮಿಕ ವರ್ಗವನ್ನು ಗುಲಾಮರಾಗಿಸುವ 8 ಗಂಟೆ ಕೆಲಸದಿಂದ 12 ಗಂಟೆಗೆ ಹೆಚ್ಚಳದ ಕಾನೂನು ಮೇ ದಿನದ ಸಂದರ್ಭದಲ್ಲಿ ಜಾರಿ ಮಾಡಿಸುತ್ತಿರುವುದು ಕಾರ್ಮಿಕ ವರ್ಗ ಸಹಿಸಲು ಸಾಧ್ಯವಿಲ್ಲ ಎಂದು ಗ್ರಾಮ ಪಂಚಾಯ್ತಿ ಸದಸ್ಯ ಹಾಗೂ ಎಸ್ಎಫ್ಐ ಜಿಲ್ಲಾಧ್ಯಕ್ಷ ರಮೇಶ ವೀರಾಪೂರು ಆಕ್ರೋಶ ವ್ಯಕ್ತಪಡಿಸಿದರು.
ವೀರಾಪೂರು ಗ್ರಾಮದ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಗೋಕಟ್ಟೆ ಕಾಮಗಾರಿ ಸ್ಥಳದಲ್ಲಿ ಸಿಐಟಿಯು ಹಾಗೂ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರ ಸಂಘ ದ ನೇತೃತ್ವದಲ್ಲಿ ನಡೆದ 138ನೇ ವಿಶ್ವ ಕಾರ್ಮಿಕ ದಿನಾಚರಣೆ ಉದ್ದೇಶಿಸಿ ಅವರು ಮಾತನಾಡಿದರು.
ಕೇಂದ್ರ ಸರಕಾರವು ಕಾರ್ಮಿಕ ಸಂಘಟನೆಗಳ ಆಗ್ರಹಗಳಿಗೆ ಬೆಲೆ ನೀಡುತ್ತಿಲ್ಲ. ಪ್ರಜಾಪ್ರಭುತ್ವ ಮೌಲ್ಯಗಳನ್ನು ಗಾಳಿಗೆ ತೂರಿ ಪ್ಯಾಸಿಸ್ಟ್ ದಾರಿಯಲ್ಲಿ ಸಾಗುತ್ತಿದೆ. ಬಂಡವಾಳಗಾರರ ಮನವಿಗಳಿಗೆ ಸ್ಪಂದಿಸುತ್ತ ಶ್ರಮಿಕರ, ಜನಸಾಮಾನ್ಯರ ಸಾವಿರಾರು ಕೋಟಿ ಹಣಗಳನ್ನು ಧಾರೆ ಎರೆಯುತ್ತಿದೆ. ಲಾಕ್ ಡೌನ್ ಅವಧಿಯಲ್ಲಿ ಕಾರ್ಮಿಕರನ್ನು ಜನಸಾಮಾನ್ಯರನ್ನು ರಕ್ಷಿಸಲು ಯಾವುದೇ ಹೊಸ ಪ್ಯಾಕೇಜ್ ಗಳನ್ನು ಘೋಷಿಸದೇ ಅನ್ಯಾಯ ಮಾಡಿದೆ. ಆದರೆ ಇಂತಹ ಕಷ್ಟದ ಸಂದರ್ಭದಲ್ಲಿಯೂ ದೇಶದ ಕೆಲವು ಅವರ ಹಿಂಬಾಲಕ ಬಂಡವಾಳಗಾರರಿಗೆ ಸಾವಿರಾರು ಕೋಟಿ ಸಾಲ ಮನ್ನಾ ಮಾಡಿರುವುದು ಜನರಿಗೆ ಮಾಡಿದ ಮೋಸವಾಗಿದೆ. ಇಂತಹ ಬಂಡವಾಳ ಶಾಹಿ ಸರ್ಕಾರವನ್ನು ಮೇ 7 ರಂದು ನಡೆಯುವ ಲೋಕಸಭಾ ಚುನಾವಣೆಯಲ್ಲಿ ಕಾರ್ಮಿಕ ವರ್ಗ ಸೋಲಿಸಿ ಸಮಾಜವಾದಕ್ಕಾಗಿ ಹೋರಾಟ ತೀವ್ರಗೊಳಿಸಬೇಕು ಎಂದು ಹೇಳಿದರು.
ಸಿಐಟಿಯು ತಾಲೂಕು ಸಂಚಾಲಕ ಮಹ್ಮದ್ ಹನೀಫ್ ಮಾತನಾಡಿ, ಸರ್ಕಾರದ ಕಾರ್ಮಿಕ ವಿರೋಧಿ ನೀತಿಗಳನ್ನು ಖಂಡಿಸಿದರು. ಕಟ್ಟಡ ಕಾರ್ಮಿಕ ಸಂಘಟನೆಯ ತಾಲೂಕ ಕಾರ್ಯದರ್ಶಿ ನಿಂಗಪ್ಪ ಎಂ ಮಾತನಾಡಿದರು.
ಈ ಸಂದರ್ಭದಲ್ಲಿ ಸಿಐಟಿಯು ಮುಖಂಡರಾದ ಅಮರೇಶ್ ಗುರಿಕಾರ್, ಫಕ್ರುದ್ದೀನ್, ವೆಂಕಟೇಶ್ ಗೋರ್ಕಲ್, ಅಲ್ಲಾಭಕ್ಷ, ಲಿಂಗರಾಜ್ ದೇಸಾಯಿ, ನಾಗಮ್ಮ ಕಾಟಿಗಲ್, ನಿಂಗಮ್ಮ, ಬೆಟ್ಟಪ್ಪ, ಹಸೇನ್ ಸಾಬ್ ಸೇರಿದಂತೆ ಅನೇಕ ಕೂಲಿಕಾರರ ಕಾರ್ಮಿಕರು ಉಪಸ್ಥಿತರಿದ್ದರು.