ಸಿದ್ದಲಿಂಗ ಸ್ವಾಮಿ ತಾಳಕ್ಕೆ ಕುಣಿಯುತ್ತಿರುವ ಕಲಬುರಗಿ ಬಿಜೆಪಿ ನಾಯಕರು: ಪ್ರಿಯಾಂಕ್ ಖರ್ಗೆ ಆರೋಪ

0
122

ಕಾನೂನು ಉಲ್ಲಂಘಿಸಿದರೆ ಮುಲಾಜಿಲ್ಲದೆ ಕ್ರಮ: ಸಚಿವ ಪ್ರಿಯಾಂಕ್

ಕಲಬುರಗಿ: ಯಾರೇ ಕಾನೂನು ಉಲ್ಲಂಘನೆ ಮಾಡುವ ಯತ್ನಕ್ಕೆ ಕೈ ಹಾಕಿದರೆ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು ಎಂದು ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ವ ಹಾಗೂ ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಎಚ್ಚರಿಕೆ ನೀಡಿದರು.

ಸೋಮವಾರ ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಕಾನೂನು ಉಲ್ಲಂಘನೆಗೆ ಯತ್ನಿಸುವ ತಮ್ಮ ಸಂಬಂಧಿಕರಾಗಲಿ, ಬೆಂಬಲಿಗರಾಗಲಿ, ಜಾತಿ ಬಾಂಧವರಾಗಿರಲಿ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು ಎಂದರು.

Contact Your\'s Advertisement; 9902492681

ಇನ್ಮುಂದೆ ಸುಮ್ಮನಿರಲ್ಲ; ಕಳೆದ 9 ತಿಂಗಳಿಂದ ಶ್ರೀರಾಮಸೇನೆಯ ಸಿದ್ದಲಿಂಗ ಸ್ವಾಮೀ ಬಾಯಿಗೆ ಬಂದಂತೆ ಮಾತನಾಡಿದ್ದನ್ನು ಗಮನಿಸುತ್ತಾ ಬಂದಿದ್ದೇನೆ. ಇನ್ನು ಮುಂದೆ ಯಾವುದನ್ನೂ ಸಹಿಸುವುದಿಲ್ಲ ಎಂದು ಖಡಕ್ ಎಚ್ಚರಿಕೆ ನೀಡಿದರು. ಆಂದೋಲಾ ಶ್ರೀ ಮೇಲೆ 39 ಪ್ರಕರಣಗಳಿವೆ. ಇಂತಹ ಮನುಷ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು  ಡಾಕು ಎನ್ನುವುದಾದರೆ ನೀನು ಯಾರು? ಎಂದು ಖಾರವಾಗಿ ಪ್ರಶ್ನಿಸಿದರು. ಆಂದೋಲಾ ಸ್ವಾಮೀಜಿ ಅವರನ್ನು ಥರ್ಡ್ ರೇಟ್ ಎಂದು ಟೀಕಿಸಿದ ಅವರು, ಅವರನ್ನು ಪ್ರವಚನ ಸೇರಿದಂತೆ ಶುಭ ಕಾರ್ಯಕ್ಕೆ ಯಾರೂ ಕರೆಯುವುದಿಲ್ಲ. ಆದರೆ ಎಲ್ಲಿಯಾದರೂ ಗಲಭೆ ಮಾಡಿಸುವುದಿದ್ದರೆ ಮಾತ್ರ ಅವರನ್ನು ಆಹ್ವಾನಿಸಲಾಗುತ್ತದೆ ಎಂದರು. ಚಿತ್ತಾಪುರ ಛೋಟಾ ಪಾಕಿಸ್ತಾನ್ ಮಾಡುತ್ತಿದ್ದಾರೆ ಎಂದು ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಸಿದ್ದಲಿಂಗ ಸ್ವಾಮೀಜಿ ದೂರು ನೀಡಿದ್ದರು. ನಾನು ಸಾಕ್ಷಿ-ಪುರಾವೆ ನೀಡುವಂತೆ ಕೇಳಿದ್ದೆ. ಇದುವರೆಗೆ ಪುರಾವೆ ನೀಡಿಲ್ಲ. ಹಾಗಾಗಿ ಇನ್ನು ಮುಂದೆ ಸುಮ್ಮನೆ ಕೂರುವುದಿಲ್ಲ ಎಂದು ಎಚ್ಚರಿಕೆ ನೀಡಿದರು. ಕಾನೂನು ಉಲ್ಲಂಘನೆಗೆ ಯತ್ನಿಸಿದರೆ ಮುಲಾಜಿಲ್ಲದೆ ಕ್ರಮ ಜರುಗಿಸಲಾಗುವುದು ಎಂದು ಮತ್ತೊಮ್ಮೆ ಎಚ್ಚರಿಕೆ ನೀಡಿದರು.

ಮೇ 5ರಂದು ಮೂವರು ಯುವಕರನ್ನು ನಗರದಲ್ಲಿ ಬೆತ್ತಲೆಗೊಳಿಸಿ ಥಳಿಸಿದ ಘಟನೆಯನ್ನು ವೈಯಕ್ತಿಕವಾಗಿ ಹಾಗೂ ಕಾಂಗ್ರೆಸ್ ಪಕ್ಷದ ವತಿಯಿಂದ ಖಂಡಿಸುವುದಾಗಿ ಹೇಳಿದ ಸಚಿವ ಪ್ರಿಯಾಂಕ್, ಈ ಘಟನೆ ಕುರಿತಂತೆ ಬಿಜೆಪಿ ನಾಯಕರು  ಸೇರಿದಂತೆ ಕೆಲವು ಸ್ವಯಂಘೋಷಿತ ಸಮಾಜ ಸೇವಕರು ಸರಕಾರವನ್ನು ಮುಜುಗರಕ್ಕೆ ಒಳಪಡಿಸಲು ಯತ್ನಿಸುತ್ತಿದ್ದಾರೆ. ನಾವು ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳುವವರಲ್ಲ. ಮೇಲಾಗಿ, ಮೈಗೆ ಎಣ್ಣೆ ಹಚ್ಚಿಕೊಂಡಿಲ್ಲ. ಕೆಲವು ಘಟನೆಗಳು ವೈಯಕ್ತಿಕ ಕಾರಣದ ಹಿನ್ನೆಲೆಯಲ್ಲಿ ನಡೆಯುತ್ತವೆ. ಎಲ್ಲವೂ ಗೃಹ ಇಲಾಖೆಯ ಗಮನದಲ್ಲಿ ಇರಬೇಕು ಎಂದೇನೂ ಇಲ್ಲ. ಬೆತ್ತಲೆಗೊಳಿಸಿ ಥಳಿಸಿದ ಪ್ರಕರಣ ಸ್ವತಃ ಪೊಲೀಸರ ಗಮನಕ್ಕೆ ಬಂದು ಪೊಲೀಸರೇ ಆರೋಪಿಗಳನ್ನು ಬಂಧಿಸಿದ್ದಾರೆ. ಇದು ಜಿಲ್ಲೆಯ ಆಡಳಿತ ವ್ಯವಸ್ಥೆಯ ಚುರುಕುತನ ತೋರಿಸುತ್ತದೆ ಎಂದು ನುಡಿದರು.

ಈ ಪ್ರಕರಣ ಕುರಿತಂತೆ ಬಿಜೆಪಿ ನಾಯಕರು ಹಾಗೂ ಶ್ರೀರಾಮ ಸೇನೆಯ ಹೆಸರಲ್ಲಿ ಸಂಘಟನೆ ಕಟ್ಟಿಕೊಂಡು ರಾಮನ ಹೆಸರಿಗೆ ಕಳಂಕ ತರುತ್ತಿರುವ ಸ್ವಯಂ ಘೋಷಿತ ಸಿದ್ದಲಿಂಗ್ ಸ್ವಾಮಿಯನ್ನು ಹಿಡಿದುಕೊಂಡು ರಾಜಕೀಯ ಮಾಡುತ್ತಿದ್ದಾರೆ ಎಂದು ಆಂದೋಲಾದ ಸಿದ್ಧಲಿಂಗ ಸ್ವಾಮೀಜಿ ವಿರುದ್ಧ ನೇರ ದಾಳಿ ನಡೆಸಿದರು.

ಮರ್ಯಾದಾ ಪುರುಷೋತ್ತಮನ ಹೆಸರಿನಲ್ಲಿ ಮರ್ಯಾದೆಗೆಟ್ಟ ಕೆಲಸ ಮಾಡುವುದು ಈ ಸೇನೆ ಕೆಲಸವಾಗಿದೆ. ಚುನಾವಣೆಗಳ ಸಂದರ್ಭದಲ್ಲಿ ಸಮಾಜದಲ್ಲಿ ಅಶಾಂತಿ ಮೂಡಿಸುವ, ಭಯ ಹುಟ್ಟಿಸುವ ಕೆಲಸವನ್ನು ಈ ಸಂಘಟನೆ ಮಾಡುತ್ತಿದೆ. ಅವರ ಸ್ಕ್ರಿಪ್ಟ್ ಗೆ ತಕ್ಕಂತೆ ಬಿಜೆಪಿ ನಾಯಕರು ಕೆಲಸ ಮಾಡುತ್ತಿದ್ದಾರೆ. ಬಿಜೆಪಿಯವರು ಐದು ವರ್ಷ ಅಧಿಕಾರದಲ್ಲಿದ್ದಾಗ ಕಾನೂನು ಸುವ್ಯವಸ್ಥೆ ಹಾಳಾಗಿ ಕೊನೆಗೆ ಬಿಜೆಪಿ ಎಬಿವಿಪಿ ಕಾರ್ಯಕರ್ತರು ಅಂದಿನ ಗೃಹ ಸಚಿವ ಅರಗ ಜ್ಞಾನೇಂದ್ರ ಅವರ ನಿವಾಸಕ್ಕೆ ಮುತ್ತಿಗೆ ಹಾಕಿದ್ದನ್ನು ಬಿಜೆಪಿ ಮುಖಂಡರು ಮರೆತಿದ್ದಾರೆ ಎಂದು ಲೇವಡಿ ಮಾಡಿದರು.

ಜಿಲ್ಲೆಯಲ್ಲಿ ತಾಲಿಬಾನ್ ಆಡಳಿತ ಕೆಲಸ ಮಾಡುತ್ತಿದೆ ಎಂಬ ಸಂಸದ ಉಮೇಶ್ ಜಾಧವ್ ಹೇಳಿಕೆಗೆ ಖಾರವಾಗಿ ಪ್ರತಿಕ್ರಿಯಿಸಿದ ಅವರು, ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ ಡಿಸಿ ಹುದ್ದೆಯಿಂದ ಪ್ಯೂನ್ ಹುದ್ದೆಯವರೆಗೆ ಎಲ್ಲವನ್ನೂ ಮಾರಾಟಕ್ಕೆ ಇಡಲಾಗಿತ್ತು. ಕಲಬುರಗಿಯಲ್ಲಿ ಐಪಿಎಸ್ ಅಧಿಕಾರಿಗಳು ರೌಡಿಗಳ ಜೊತೆಯಿದ್ದದ್ದು ನಿಮಗೆ ಗೊತ್ತಿಲ್ಲವಾ? ಎಂದು ಸಂಸದ ಉಮೇಶ್ ಜಾಧವ್ ಅವರನ್ನು ಪ್ರಶ್ನಿಸಿದರು.

ಬಿಜೆಪಿ ಅವಧಿಯಲ್ಲಿ ಕಲಬುರಗಿ ಜಿಲ್ಕೆಯಾದ್ಯಂತ ನಡೆದ ಅಪರಾಧ ಪ್ರಕರಣಗಳ ಪಟ್ಟಿಯೊಂದಿಗೆ ಬಿಜೆಪಿ ನಾಯಕರು ರೌಡಿಗಳೊಂದಿಗೆ ತೆಗೆಸಿಕೊಂಡಿರುವ ಕೆಲವು ಫೋಟೊಗಳನ್ನು ಸಚಿವ ಪ್ರಿಯಾಂಕ್ ಇದೇವೇಳೆ ಪ್ರದರ್ಶಿಸಿದರು.

ಮತ್ತೊಂದೆಡೆ, ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಜಿಲ್ಲೆಯಲ್ಲಿ ಜನಸ್ನೇಹಿ ಪೊಲೀಸ್ ವ್ಯವಸ್ಥೆ ಜಾರಿಗೆ ತರಲು ಆ್ಯಪ್ ಸಿದ್ದಪಡಿಸಿದ್ದೇವೆ. ಜನರೊಂದಿಗೆ ಸಕಾರಾತ್ಮಕವಾಗಿ ವರ್ತಿಸುವಂತೆ ನಿರ್ದೇಶನ ನೀಡಿದ್ದೇವೆ. ಹೀಗಿರುವಾಗ ನಮ್ಮದು ತಾಲಿಬಾನ್ ಸರಕಾರ ಹೇಗೆ ಆಗಲು ಸಾಧ್ಯ ಎಂದು ಅಚ್ಚರಿ ವ್ಯಕ್ತಪಡಿಸಿದರು.

ಶಾಸಕ ಅಲ್ಲಮಪ್ರಭು ಪಾಟೀಲ್, ವಿಧಾನ ಪರಿಷತ್ ಸದಸ್ಯರಾದ ತಿಪ್ಪಣ್ಣಪ್ಪ ಕಮಕನೂರ್, ಚಂದ್ರಶೇಖರ ಪಾಟೀಲ್ ಹುಮನಾಬಾದ್, ಜಿಡಿಎ ಅಧ್ಯಕ್ಷ ಮಜರ್ ಆಲಂಖಾನ್, ಮಾಜಿ ಸಚಿವ ರೇವುನಾಯಕ ಬೆಳಮಗಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಗದೇವ ಗುತ್ತೇದಾರ್, ರಾಜಗೋಪಾಲರೆಡ್ಡಿ, ಶಿವಾನಂದ ಹೊನಗುಂಟಿ, ಭೀಮಣ್ಣ ಸಾಲಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here