ಕಲಬುರಗಿ; ಸ್ನೇಹ ಸಂಗಮ ವಿವಿಧೋದ್ದೇಶ ಸೇವಾ ಸಂಘದ ವತಿಯಿಂದ “ನಮ್ಮ ನಡಿಗೆ, ಹಳ್ಳಿಯ ಕನ್ನಡ ಸರಕಾರಿ ಶಾಲೆಯ ಕಡೆಗೆ” ಎಂಬ ಸಂಕಲ್ಪದೊಂದಿಗೆ ಈ ವರ್ಷ ಗ್ರಾಮೀಣ ಭಾಗದ ಕನ್ನಡ ಸರಕಾರಿ ಶಾಲೆಯಲ್ಲಿ ಅಭ್ಯಾಸ ಮಾಡಿ ಹತ್ತನೇ ತರಗತಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ “ಸಾಧಕ ರತ್ನ” ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಸಂಘದ ಅಧ್ಯಕ್ಷರಾದ, ನ್ಯಾಯವಾದಿ ಹಣಮಂತರಾಯ ಎಸ್. ಅಟ್ಟೂರ ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.
ಶಾಲೆಯ ಮೂಲಭೂತ ಸಮಸ್ಯೆಗಳು ಪರಿಹರಿಸಬೇಕು, ಶಿಕ್ಷಣ ಗುಣ ಮಟ್ಟ ಸುಧಾರಿಸಬೇಕು ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಪರೀಕ್ಷೆ ಫಲಿತಾಂಶ ಹೆಚ್ಚಿಸಬೇಕು ಅಲ್ಲದೆ ಮುಖ್ಯವಾಗಿ ಗ್ರಾಮೀಣ ಭಾಗದ ಕನ್ನಡ ಸರಕಾರಿ ಶಾಲೆ ಉಳಿಯಬೇಕು ಎಂಬ ಉದ್ದೇಶದಿಂದ ಸರಣಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಸ್ನೇಹ ಸಂಗಮ ವಿವಿಧೋದ್ದೇಶ ಸೇವಾ ಸಂಘವು ಪ್ರತಿ ವರ್ಷ ಗ್ರಾಮೀಣ ಮಟ್ಟದಲ್ಲಿ ನೂರಾರು ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡುವ ಮೂಲಕ ಸ್ಪೂರ್ತಿ ನೀಡುವುದರೊಂದಿಗೆ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುವ ಕಾರ್ಯಕ್ರಮ ಮಾಡಲಾಗುತ್ತಿದೆ. ಗ್ರಾಮೀಣ ಭಾಗದ ಸರಕಾರಿ ಕನ್ನಡ ಪ್ರೌಢ ಶಾಲೆಯಲ್ಲಿರುವ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹರಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಸರಣಿ ಕಾರ್ಯಕ್ರಮದಲ್ಲಿ ಶಾಸಕರು, ಶಿಕ್ಷಣಾಧಿಕಾರಿಗಳು, ಪೊಲೀಸ್ ಅಧಿಕಾರಿಗಳು, ಪತ್ರಕರ್ತರು, ಕಲಾವಿದರು, ಪೂಜ್ಯರು, ಶಿಕ್ಷಣ ತಜ್ಞರು, ಗ್ರಾಮದ ಮುಖಂಡರು, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಎಸ್‌ಡಿಎಂಸಿ ಅಧ್ಯಕ್ಷರು, ಗ್ರಾಮ ಪಂಚಾಯತಿ ಅಧ್ಯಕ್ಷ, ಉಪಾಧ್ಯಕ್ಷರು, ಮುಖ್ಯ ಗುರುಗಳು, ಶಿಕ್ಷಕರು, ಪಾಲಕರು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸುವುದರೊಂದಿಗೆ ಸ್ಥಳದಲ್ಲಿಯೇ ಸಮಸ್ಯೆ ಪರಿಹರಿಸುವ ವಿನುತನವಾದ ಕಾರ್ಯಕ್ರಮ ಸಂಘವು ಆಯೋಜಿಸಲಾಗಿದೆ.
ಸರಣಿ ಕಾರ್ಯಕ್ರಮದ ಚಾಲನೆ 12 ರಂದು ಬುಧವಾರ ಕಲಬುರಗಿ ತಾಲೂಕಿನ ಹರಸೂರ ಗ್ರಾಮದ ಸರಕಾರಿ ಪ್ರೌಢಶಾಲೆಯ ಆವರಣದಲ್ಲಿ ಬೆಳಿಗ್ಗೆ 11 ಗಂಟೆಗೆ ಉದ್ಘಾಟನೆಯಾಗಲಿದೆ. ಬರುವ ದಿನಗಳಲ್ಲಿ ತಾಜ ಸುಲ್ತಾನಪುರ, ಕುಮಸಿ, ಕಡಣಿ, ಪಾಳಾ, ಶ್ರೀನಿವಾಸ ಸರಡಗಿ, ಬಸವಪಟ್ಟಣ, ತಾವರಗೇರಾ, ಹೆಬ್ಬಾಳ ಸೇರಿದಂತೆ ಹಲವಾರು ಗ್ರಾಮಗಳಲ್ಲಿ ಸರಣಿ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ “ಸಾಧಕ ರತ್ನ” ಪ್ರಶಸ್ತಿ ನೀಡಿ ಗೌರವಿಸುದರೊಂದಿಗೆ, ಸಮಸ್ಯೆಗಳಿಗೆ ಸ್ಪಂದನೆ ನೀಡಲಾಗುವುದು ಎಂದು ತಿಳಿಸಿದರು.