ಕಲಬುರಗಿ: ಬಿಬಿಎಂಪಿಯ ಸಹಾಯಕ ಆಯುಕ್ತ ಬಸವರಾಜ ಮಗ್ಗಿ ಅವರ ಕಲಬುರಗಿ ನಗರದ ಮನೆಯಲ್ಲಿ ಸುಮಾರು ₹12.50 ಲಕ್ಷ ಮೌಲ್ಯದ ಕ್ಯಾಸಿನೊ ಕಾಯಿನ್‌ಗಳು ಪತ್ತೆಯಾದ ಬೆನ್ನಲೇ ಲೋಕಾಯುಕ್ತ ಪೊಲೀಸರಿಗೆ ಕ್ಯಾಸಿನೊ ಕಾಯಿನ್‌ಗಳ ಮತ್ತೊಂದು ಸೂಟ್ ಕೇಸ್ ಸಿಕ್ಕಿದೆ ಎಂದು ಮೂಲಗಳು ತಿಳಿಸಿವೆ.
ಗುರುವಾರ ಕಲಬುರಗಿಯ ಪಾಳ ಗ್ರಾಮದ ಮನೆ, ಕಲಬುರಗಿಯ ಮನೆ ಮತ್ತು ಬೆಂಗಳೂರು ಮನೆಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿ ದಾಖಲಾತಿ ಪರಿಶೀಲನೆ ನಡೆಸಿ ಬಸವರಾಜ ಅವರ ಮನೆಯಲ್ಲಿ ಲೋಕಾಯುಕ್ತ ಎಸ್.ಪಿ ಜಾನ್ ಆಂಟೋನಿ ಅವರ ನೇತೃತ್ವದ ಅಧಿಕಾರಿಗಳ ತಂಡ ಬೆಳಿಗ್ಗೆಯಿಂದ ಕಡತಗಳ ಪರಿಶೀಲನೆ, ಮನೆಯ ತಪಾಸಣೆ ಮಾಡುತ್ತಿದೆ.
ಸುಮಾರು ₹12.50 ಲಕ್ಷ ಮೌಲ್ಯದ ಕ್ಯಾಸಿನೊ ಕಾಯಿನ್‌ಗಳು ಪತ್ತೆಯಾಗಿದ್ದವು. ಈಗ ಸೂಟ್ ಕೇಸ್‌ನಲ್ಲಿ ₹50 ಸಾವಿರದಿಂದ ₹1 ಲಕ್ಷ ಮೌಲ್ಯದ ವರೆಗಿನ ಕ್ಯಾಸಿನೊ ಕಾಯಿನ್‌ಗಳು ಸಿಕ್ಕಿವೆ ಎಂದು ತಿಳಿದುಬಂದಿದೆ.
ಸೂಟ್ ಕೇಸ್‌ನಲ್ಲಿ ನೀಟಾಗಿ ಜೋಡಿಸಿ ಇಟ್ಟಿರುವ ಕ್ಯಾಸಿನೊ ಕಾಯಿನ್‌ಗಳ ಮೌಲ್ಯವನ್ನು ಲೆಕ್ಕಹಾಕಲಾಗುತ್ತಿದೆ. ದಾಖಲೆಗಳ ತಪಾಸಣೆಯ ವೇಳೆ ಎರಡು ಹುಲಿ ಉಗುರು ಸಹ ಸಿಕ್ಕಿವೆ. ಹುಲಿ ಉಗುರಿನ ಸತ್ಯಾಸತ್ಯತೆ ತಿಳಿಯಲು ಅರಣ್ಯ ಇಲಾಖೆ ಅಧಿಕಾರಿಗಳನ್ನು ಕರೆಯಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಡಿ.ಎಸ್.ಪಿ. ಮಂಜುನಾಥ್ ಇನ್ಸ್ಪೆಕ್ಟರ್ ಹನುಮಂತ್ ಸನ್ಮನಿ ಪೊಲೀಸ್ ಸಿಬ್ಬಂದಿಗಳು ದಾಳಿ ನಡೆಸಿದ್ದಾರೆ.