ಯಾದಗಿರಿ: ಅನಾರೋಗ್ಯದಿಂದ ಸೋಮವಾರ ನಿಧನರಾದ ಮಾಜಿ ಶಾಸಕ ಡಾ. ವೀರಬಸವಂತರಡ್ಡಿ ಮುದ್ನಾಳ ಅವರ ಅಂತ್ಯಕ್ರಿಯೆ ಸಕಲ ಪೋಲಿಸ್ ಗೌರವಗಳೊಂದಿಗೆ ಮಂಗಳವಾರ ಸ್ವಗ್ರಾಮದಲ್ಲಿ ನೆರವೇರಿತು.
ಮುದ್ನಾಳ ಗ್ರಾಮದ ಪ್ರಮುಖ ಬೀದಿಗಳಲ್ಲಿ ಹೊರಟ ಅಂತಿಮ ಯಾತ್ರೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಭಾಗಿಯಾಗಿ ತಮ್ಮ ನೆಚ್ಚಿನ ನಾಯಕರನ್ನು ಕಳೆದುಕೊಂಡು ಕಂಬಿನಿ ಮಿಡಿದರು.
ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ, ಜಿಲ್ಲಾಧಿಕಾರಿ ಸುಶೀಲಾ ಬಿ,ಎಸ್ಪಿ ಸಂಗೀತಾ, ಅಪರ ಜಿಲ್ಲಾಧಿಕಾರಿ ಶರಣಬಸಪ್ಪ ಕೊಟಪ್ಪಗೊಳ, ಉಪವಿಭಾಗಾಧಿಕಾರಿ ಹಂಪಣ್ಣ ಸಜ್ಜನ, ಯಾದಗಿರಿ ತಹಸೀಲ್ದಾರ್ ಅಂತಿಮ ದರ್ಶನ ಪಡೆದು, ಸರಕಾರಿ ಗೌರವಗಳನ್ನು ಸಲ್ಲಿಸಿದರು. ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಿ ಗೌರವ ಸಮರ್ಪಣೆ ಮಾಡಲಾಯಿತು.
ವೀರಶೈವ ವಿಧಿವಿಧಾನದಂತೆ ಅಂತ್ಯಕ್ರಿಯೆ
ಗ್ರಾಮದ ಮುಂಭಾಗದಲ್ಲಿರುವ ಸ್ವಂತ ಜಮೀನವರೆಗೆ ಅಪಾರ ಜನ ಸಮೂಹದೊಂದಿಗೆ ಅಂತಿಮ ಯಾತ್ರೆ ತಲುಪಿತು. ನಂತರ ವೀರಶೈವ ಲಿಂಗಾಯತ ಸಾಂಪ್ರದಾಯದ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಅಂತ್ಯಕ್ರಿಯೆ ಜರುಗಿತು.
ವಿವಿಧ ಮಠಾಧೀಶರು, ರಾಜಕೀಯ ಗಣ್ಯರು ಭಾಗಿ
ಅಬ್ಬೆತುಮಕೂರಿನ ವಿಶ್ವಾರಾಧ್ಯ ಸಿದ್ದ ಸಂಸ್ಥಾನ ಮಠದ ಪೀಠಾಧಿಪತಿ ಡಾ, ಗಂಗಾಧರ ಮಹಾಸ್ವಾಮಿಜಿ ಸೇರಿ ವಿವಿಧ ಮಠಗಳ ಮಠಾಧೀಶರು, ಶಾಸಕರಾದ ಚನ್ನಾರಡ್ಡಿ ಪಾಟೀಲ ತುನ್ನೂರ, ಶರಣಗೌಡ ಕಂದಕೂರ, ಮಾಜಿ ಶಾಸಕ ಎ. ಬಿ. ಮಾಲಕರಡ್ಡಿ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸೋಮಶೇಖರ ಗೋನಾಯಕ, ಶಂಕ್ರಣ್ಣ ವಣಿಕ್ಯಾಳ, ಡಾ. ಶರಣಬಸವ ಕಾಮರಡ್ಡಿ ಸೇರಿ ಹಲವರು ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿದ್ದರು.