ಸುರಪುರ: ಯಾದಗಿರಿ ನಗರ ಠಾಣೆಯಲ್ಲಿ ಪಿಎಸ್‍ಐ ಆಗಿದ್ದ ಪರಶುರಾಮ ಚಲುವಾದಿ ಅವರಿಗೆ ಹಣಕ್ಕಾಗಿ ಶಾಸಕ ಚೆನ್ನಾರಡ್ಡಿ ಪಾಡೀಲ್ ತುನ್ನೂರ ಅವರು ಪೀಡಿಸಿದ್ದರಿಂದ ಪಿಎಸ್‍ಐ ನೊಂದು ಹೃದಯಾಘಾತಕ್ಕೆ ಒಳಗಾಗಿ ಸಾವನ್ನಪ್ಪಿದ್ದಾರೆ ಆದ್ದರಿಂದ ಕೂಡಲೇ ಚೆನ್ನಾರಡ್ಡಿ ಪಾಟೀಲ್ ಅವರನ್ನು ಶಾಸಕ ಸ್ಥಾನ ದಿಂದ ಉಚ್ಛಾಟಿಸುವಂತೆ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಡಿ.ಜಿ ಸಾಗರ ಬಣದ ಮುಖಂಡರು ಆಗ್ರಹಿಸಿದರು.
ನಗರದ ತಹಸಿಲ್ದಾರ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಅನೇಕ ಮುಖಂಡರು ಮಾತನಾಡಿ,ನಗರ ಠಾಣೆಯಲ್ಲಿ ದಕ್ಷ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದ ಪಿಎಸ್‍ಐ ಪರಶುರಾಮ ಅವರು ಕರ್ತವ್ಯಕ್ಕೆ ಹಾಜರಾಗಿ ಏಳುವರೆ ತಿಂಗಳಾಗಿದೆ,ಆದರೆ ಅವರನ್ನು ಬೇರೆ ಕಡೆಗೆ ವರ್ಗಾವಣೆ ಮಾಡುವಂತೆ ಶಾಸಕರು ಅಧಿಕಾರಿಗಳಿಗೆ ತಿಳಿಸಿದ್ದರಿಂದ,ಪಿಎಸ್‍ಐ ಶಾಸಕರ ಕಚೇರಿಗೆ ಹೋಗಿ ವರ್ಗಾವಣೆ ಮಾಡಿಸದಂತೆ ವಿನಂತಿಸಿದರು ಶಾಸಕರು ಲೆಕ್ಕಿಸದೆ ಪಿಎಸ್‍ಐಗೆ ಅವಾಚ್ಯವಾಗಿ ಮಾತನಾಡಿ,ಜಾತಿ ನಿಂದನೆ ಮಾಡಿದ್ದಾರೆ.
30 ಲಕ್ಷ ಕೊಡುವಂತೆ ಪೀಡಿಸಿದ್ದಾರೆ,ಇದರಿಂದ ಹಣ ಕೊಡಲಾಗದ ಪಿಎಸ್‍ಐ ಅವರು ನೊಂದು ಮನೆಗೆ ಬಂದಾಗ ಶುಕ್ರವಾರ ರಾತ್ರಿ ಹೃದಯಾಘಾತವಾಗಿ ಸಾವನ್ನಪ್ಪಿದ್ದಾರೆ.ಆದ್ದರಿಂದ ಪಿಎಸ್‍ಐ ಪರಶುರಾಮ ಅವರ ಸಾವಿಗೆ ಕಾರಣವಾಗಿರುವ ಶಾಸಕ ಚೆನ್ನಾರಡ್ಡಿ ಪಾಟೀಲ್ ತುನ್ನೂರ ಅವರನ್ನು ಶಾಸಕ ಸ್ಥಾನ ದಿಂದ ಉಚ್ಛಾಟಿಸಿ,ಅವರ ಮೇಲೆ ಮತ್ತು ಅವರ ಪುತ್ರ ಪಂಪನಗೌಡ ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು,ಇಲ್ಲವಾದಲ್ಲಿ ನಮ್ಮ ಸಂಘಟನೆಯಿಂದ ರಾಜ್ಯಾದ್ಯಂತ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ನಂತರ ಗೃಹಸಚಿವರಿಗೆ ಬರೆದ ಮನವಿ ತಹಸಿಲ್ದಾರ್ ಕೆ.ವಿಜಯಕುಮಾರ ಮೂಲಕ ಸಲ್ಲಿಸಿದರು.ಈ ಸಂದರ್ಭದಲ್ಲಿ ಸಂಘದ ಜಿಲ್ಲಾ ಸಂ.ಸಂಚಾಲಕ ಶಿವಲಿಂಗ ಹಸನಾಪುರ,ತಾ.ಸಂಚಾಲಕ ತಿಪ್ಪಣ್ಣ ಶೆಳ್ಳಗಿ,ಚನ್ನಬಸಪ್ಪ ತಳವಾರ,ವೆಂಕಟೇಶ ದೇವಾಪುರ,ಶೇಖರ ಮಂಗಳೂರ,ಎಮ್.ಪಟೇಲ್,ರಾಜು ಬಡಿಗೇರ,ಹಣಮಂತ ರತ್ತಾಳ,ಖಾಜಾ ಅಜ್ಮೀರ್,ಹಣಮಂತ ದೇವಾಪುರ,ತಿಪ್ಪಣ್ಣ ಪಾಟೀಲ್,ಶಾಂತಪ್ಪ ದೊಡ್ಮನಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.