ಕಲಬುರಗಿ: ಮತದಾನ ಪ್ರಕ್ರಿಯೆ ಪೂರ್ಣಗೊಂಡಿರುವ ಬೆನ್ನಲ್ಲೇ ಆಯಾ ಪಕ್ಷದ ಅಬ್ಯರ್ಥಿಗಳು, ಮುಖಂಡರು ಹಾಗೂ ಕಾರ್ಯಕರ್ತರ ಜೊತೆ ಸಾಮಾನ್ಯ ಜನರು ಸಹ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ.
ಉತ್ತರ ಹಾಗೂ ಮಧ್ಯ ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ನಿನ್ನೆ ತಾನೆ ಮತದಾನ ಪ್ರಕ್ರಿಯೆ ಮುಗಿದಿದ್ದು, ಶೇ.67.28 ರಷ್ಟು ಮಂದಿ ತಮ್ಮ ಹಕ್ಕು ಚಲಾಯಿಸಿದ್ದಾರೆ.
ಮೇ. 23 ರಂದು ಮತ ಎಣಿಕೆ ಹಾಗೂ ಫಲಿತಾಂಶ ಇರುವುದರಿಂದ ಎಲ್ಲ ಮತಗಟ್ಟೆಗಳಲ್ಲಿ ನಡೆದ ಮತಪತ್ರಗಳನ್ನು ಆಯಾ ಕ್ಷೇತ್ರದ ಜಿಲ್ಲಾ ಕೇಂದ್ರದ ಸ್ಟ್ರಾಂಗ್ ರೂಂನಲ್ಲಿ ಭದ್ರವಾಗಿರಿಸಲಾಗಿದೆ.
ಚಲಾವಣೆಗೊಂಡ ಮತಪತ್ರಗಳ ಎಣಿಕೆ ಮಾಡಿದಾಗ ಮಾತ್ರ ಯಾರ್ಯಾರ ಹಣೆ ಬರಹ ಏನೇನಿದೆ ಎಂಬುದು ತಿಳಿದು ಬರುತ್ತದೆ. ಆದರೆ ಮಳೆ ನಿಂತರೂ ಮಳೆ ಹನಿ ನಿಲ್ಲುವುದಿಲ್ಲ ಎನ್ನುವಂತೆ ಇದೀಗ ಎಲ್ಲೆಡೆ ಸೋಲು-ಗೆಲುವಿನ ಲೆಕ್ಕಾಚಾರ ನಡೆದಿದೆ.
2014ರ ಲೋಕಸಭಾ ಚುನಾವಣೆಗೆ ಹೋಲಿಸಿದರೆ ಈ ಬಾರಿ ಶೇ. 1 ರಷ್ಟು ಮತದಾನ ಹೆಚ್ಚಾಗಿದೆ. ಶಿವಮೊಗ್ಗ ಕ್ಷೇತ್ರದ ಲ್ಲಿ ಅತೀ ಹೆಚ್ಚು ಶೇ. 76ರಷ್ಟು ಮತದಾನವಾಗಿದ್ದು, ಕಲಬುರಗಿ ಹಾಗೂ ರಾಯಚೂರು ಕ್ಷೇತ್ರದಲ್ಲಿ ಪ್ರತಿಶತ 60 ರಷ್ಟು ಕನಿಷ್ಟ ಮತದಾನ ವಾಗಿದೆ.
ಅಲ್ಲಲ್ಲಿ ಕೆಲವು ಸಣ್ಣ ಪುಟ್ಟ ಲೋಪದೋಷಗಳನ್ನು ಹೊರತುಪಡಿಸಿದರೆ ಉಳಿದಂತೆ ಶಾಂತಿಯುತ ಮತದಾನವಾಗಿದೆ. ಫಲಿತಾಂಶಕ್ಕಾಗಿ ಬರೋಬ್ಬರಿ ಒಂದು ತಿಂಗಳು ಕಾಯಬೇಕಾಗಿರುವುದರಿಂದ ಅವರು ಗೆಲ್ಲುತ್ತಾರೆ. ಇವರು ಸೋಲುತ್ತಾರೆ ಎಂಬ ರಾಜಕೀಯ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ.
ಆಯಾ ಪಕ್ಷದವರು ತಮ್ಮ ತಮ್ಮ ಆತ್ಮವಿಶ್ವಾಸ ಮತ್ತು ಮೂಗಿನ ನೇರಕ್ಕೆ ವಿಚಾರ ಮಾಡಿ ಈ ಬಾರಿ ನಮ್ಮ ಪಕ್ಷ ಹಾಗೂ ಅಭ್ಯರ್ಥಿ ಗೆಲುವು ಸಾಧಿಸಲಿದ್ದಾರೆ ಎಂದು ಚರ್ಚೆ ಮಾಡುತ್ತಿದ್ದಾರೆ.
ಚುನಾವಣೆಗೆ ಸ್ಪರ್ಧಿಸಿದ್ದ ಅಭ್ಯರ್ಥಿಗಳ ಮನೆಗೆ ಆಯಾ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರು ತೆರಳಿ ತಮ್ಮಲ್ಲಿ ನಡೆದ ಮತದಾನದ ಪ್ರಮಾಣ ಹಾಗೂ ಪ್ರಕ್ರಿಯೆ ಬಗ್ಗೆ ವರದಿ ಒಪ್ಪಿಸುತ್ತಿದ್ದಾರೆ.
ಈ ಬಾರಿ ಗೆಲವು ಯಾರಿಗೆ ಎಂದು ಆಯಾ ಪಕ್ಷಗಳ ಮುಖಂಡರಿಗೆ ಕೇಳಿದರೆ ಸಾಕು, ಅಲ್ಲಿ ಇಷ್ಟಾಗಿದೆ. ಇಲ್ಲಿ ಇಷ್ಟಾಗಿದೆ. ಇಂತಲ್ಲಿ ನಮ್ಮ ಅಭ್ಯರ್ಥಿಗೆ ಹೆಚ್ಚಿನ ಮತಗಳು ಬಂದಿವೆ. ಹೀಗಾಗಿ ಇವರೇ ಗೆಲ್ಲುತ್ತಾರೆ. ಅವರಿಗೆ ಸೋಲು ಖಚಿತ ಎಂದು ಹೇಳುತ್ತಿದ್ದಾರೆ.
ಇನ್ನು ಕೆಲವರು ಅವರು ಗೆಲ್ಲುತ್ತಾರೆ, ಇವರು ಸೋಲಲಿದ್ದಾರೆ ಎಂದು ಬೆಟ್ಟಿಂಗ್ ದಂಧೆಯಲ್ಲಿ ಮುಳುಗಿದ್ದಾರೆ. ಈ ಕರಾಳ ದಂಧೆ ತಡೆಯಲೆಂದೇ ಡಿಜಿಪಿ ನೀಲಮಣಿರಾಜು ಅವರು ಮಹತ್ವದ ಆದೇಶ ಹೊರಡಿಸಿ, ಚುನಾವಣಾ ಬೆಟ್ಟಿಂಗ್ ನಲ್ಲಿ ತೊಡಗುವವರ ವಿರುದ್ಧ ಗೂಂಡಾ ಅಥವಾ ಕೋಕಾ ಅಸ್ತ್ರ ಪ್ರಯೋಗಿಸುವಂತೆ ಸೂಚಿಸಿದ್ದಾರೆ.
ಅದೇನೆ ಇರಲಿ ಫಲಿತಾಂಶಕ್ಕಾಗಿ ಇನ್ನೂ ಒಂದು ತಿಂಗಳು ಕಾಯಬೇಕಾಗಿರುವುದರಿಂದ ಇದೀಗ ಎಲ್ಲೆಡೆ ಚುನಾವಣಾ ರಾಜಕೀಯ ಲೆಕ್ಕಾಚಾರ ನಡೆದಿದೆ. ಫಲಿತಾಂಶದ ನಂತರ ಈ ಕುತೂಹಲಕ್ಕೆ ಅಂತಿಮ ತೆರೆ ಬೀಳಲಿದೆ.