ಬೆಂಗಳೂರು; ಸ್ವಾತಂತ್ರ್ಯ ದಿನೋತ್ಸವದ ಅಂಗವಾಗಿ ನವದೆಹಲಿಯ ಕೆಂಪುಕೋಟೆಯಲ್ಲಿ ನಡೆಯಲಿರುವ ರಾಷ್ಟ್ರ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಕರ್ನಾಟಕದ ಗ್ರಾಮ ಪಂಚಾಯತಿಗಳ ಆರು ಮಂದಿ ಮಹಿಳಾ ಅಧ್ಯಕ್ಷರು ವಿಶೇಷ ಆಹ್ವಾನಿತರಾಗಿ ಆಮಂತ್ರಣಗೊಂಡಿದ್ದು ಇವರನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವರಾದ ಪ್ರಿಯಾಂಕ್ ಖರ್ಗೆ ಅಭಿನಂದಿಸಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲ್ಲೂಕಿನ ಗೆದರೆ ಗ್ರಾಮ ಪಂಚಾಯತಿ ಅಧ್ಯಕ್ಷೆ ಕುಮಾರಿ ಲಕ್ಷ್ಮಿನರಸಮ್ಮ, ದಕ್ಷಿಣಕನ್ನಡ ಜಿಲ್ಲೆಯ ಬಂಟ್ವಾಳ ತಾಲ್ಲೂಕಿನ ಪೆರುವಾಯಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಶ್ರೀಮತಿ ನಫೀಜಾ, ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲ್ಲೂಕಿನ ಕಮತನೂರು ಗ್ರಾಮ ಪಂಚಾಯತಿ ಅಧ್ಯಕ್ಷೆ ಶ್ರೀಮತಿ ರಾಜೇಶ್ವರಿ ಗುತ್ತಿ, ಜಿಲ್ಲೆಯ ತಾಜ್ ಸುಲ್ತಾನಪುರ ಗ್ರಾಮ ಪಂಚಾಯತಿ ಉಪಾಧ್ಯಕ್ಷೆ ಜಯಶ್ರೀ, ಕೊಡಗು ಜಿಲ್ಲೆಯ ಪೆÇನ್ನಂಪೇಟೆ ತಾಲ್ಲೂಕಿನ ಕಾನೂರು ಗ್ರಾಮ ಪಂಚಾಯತಿ ಅಧ್ಯಕ್ಷೆ ದೇವಿ ಪಿ.ಟಿ ಮತ್ತು ಚಾಮರಾಜನಗರ ತಾಲ್ಲೂಕಿನ ಅಟ್ಟಗುಳಿಪುರ ಗ್ರಾಮ ಪಂಚಾಯತಿ ಅಧ್ಯಕ್ಷೆ ಶಿವಮ್ಮ ನಾಳೆ ದೆಹಲಿಯಲ್ಲಿ ನಡೆಯಲಿರುವ ಸ್ವಾತಂತ್ರ್ಯೋತ್ಸವದಲ್ಲಿ ಭಾಗವಹಿಸಲಿರುವ ವಿಶೇಷ ಆಹ್ವಾನಿತರಾಗಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಟಿ.ಕೆ. ರಮೇಶ್ ನೇತೃತ್ವದಲ್ಲಿ ಈ ತಂಡ ಸಮಾರಂಭದಲ್ಲಿ ಪಾಲ್ಗೊಳ್ಳಲಿದೆ.
ಈ ಆರೂ ಮಂದಿ ಉತ್ತಮ ಆಡಳಿತ, ಪರಿಸರ ಕಾಳಜಿ, ನೈರ್ಮಲ್ಯ, ಘನತ್ಯಾಜ್ಯ ನಿರ್ವಹಣೆ, ತೆರಿಗೆ ಸಂಗ್ರಹಣೆ, ನೀರು ಸರಬರಾಜು ಮುಂತಾದ ಸಾಮಾಜಿಕ ಜವಾಬ್ದಾರಿಗಳನ್ನು ಅತ್ಯಂತ ಬದ್ಧತಾಪೂರ್ವಕವಾಗಿ ನಿರ್ವಹಿಸಿ ಗೌರವಕ್ಕೆ ಪಾತ್ರರಾಗಿರುವುದು ಕರ್ನಾಟಕಕ್ಕೆ ಹೆಮ್ಮೆ ತಂದಿದೆ ಎಂದೂ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.