‘ಶಿಕ್ಷಣ ವ್ಯಾಪಾರಕ್ಕೆ ಧರ್ಮ ದುರ್ಬಳಕೆ’ಎಂಬ ಪ್ರಜಾವಾಣಿಯ ವಾಚಕರವಾಣಿಯಲ್ಲಿ ಪ್ರಕಟವಾದ(ದಿ.22-04-2019) ಡಾ. ರಾಜಶೇಖರ ಹತಗುಂದಿ ಅವರ ಮಾತುಗಳು ಸತ್ಯಕ್ಕೆ ತೀರಾ ದೂರವಾದ ಮಾತುಗಳಾಗಿವೆ. ಬಸವ ಪ್ರಣೀತ ಲಿಂಗಾಯತ ಧರ್ಮದ ಚಳುವಳಿ ಅವರು ತಿಳಿದುಕೊಂಡಂತೆ ಕೇವಲ ಅಲ್ಪಸಂಖ್ಯಾತರ ಸ್ಥಾನಮಾನಕ್ಕಾಗಿ ನಡೆದ ಹೋರಾಟವಲ್ಲ. ಲಿಂಗಾಯತ ಧರ್ಮ 800 ವರ್ಷಗಳಿಂದ ಅಸ್ತಿತ್ವದಲ್ಲಿ. ಆದರೆ ಈ ಧರ್ಮಕ್ಕೆ ಸರಕಾರದ ಅಸ್ಮಿತೆ ಇಲ್ಲವಾಗಿದೆ. ಜಗತ್ತಿನಲ್ಲಿ ವಿಶ್ವ ಸಂಸ್ಥೆ ಹುಟ್ಟುವುದಕ್ಕಿಂತ ಪೂರ್ವದಲ್ಲಿ, ಮಾನವ ಹಕ್ಕುಗಳ ಆಯೋಗ ರಚನೆಗೂ ಮೊದಲು ೧೨ ನೇ ಶತಮಾನದಲ್ಲಿ ಸಕಲ ಜೀವಾತ್ಮರಿಗೆ ಲೇಸ ಬಯಸಿದ ಧರ್ಮ ಲಿಂಗಾಯತವಾಗಿದೆ. ಬಿಟ್ರನ್ ಸಂಸತ್ತು ರಚನೆಯಾಗುವುದಕ್ಕಿಂತ ಪೂರ್ವದಲ್ಲಿಯೆ ಬಸವಾದಿ ಶರಣರು ಅನುಭವ ಮಂಟಪ ಎಂಬ ಸಂಸತ್ತನ್ನು ರಚಿಸಿ, ಅಲ್ಲಿ ಹೆಣ್ಣು ಗಂಡು ಎಂಬ ತಾರತಮ್ಯವಿಲ್ಲದೆ, ಬಡವ ಬಲ್ಲಿದ ಎಂಬ ಭೇದ ಭಾವ ಇಲ್ಲದೆ ದುಡಿಯುವವರೆಲ್ಲರೂ ಸಮಾನರು ಎಂದು ಸಾರಿ ಹೇಳಿ, ಅದರಂತೆ ನಡೆದ ಚಳುವಳಿ ಲಿಂಗಾಯತ. ಇಂದಿಗೂ ಕೀಳಾಗಿ ನೋಡುವ ನಟುವರ ಜನಾಂಗದ ಅಲ್ಲಮಪ್ರಭುವನ್ನು ಅಂದಿನ ಅನುಭವ ಮಂಟಪದ ಅಧ್ಯಕ್ಷನನ್ನಾಗಿ ಆಯ್ಕೆ ಮಾಡಿ ಎನಗಿಂತ ಕಿರಿಯರಿಲ್ಲ ಶಿವಭಕ್ತರಿಗಿಂತ ಹಿರಿಯರಿಲ್ಲ ಎಂದು ಹಿರಿಮೆ ಮೆರೆದ ಬಸವಣ್ಣನವರು ನಮಗೆಲ್ಲ ಆದರ್ಶಪ್ರಾಯ.
ಎಡ್ಗರ್ಡ ಥರಸ್ಟೀನ್ ಎಂಬ ಸಮಾಜ ವಿಜ್ಞಾನಿಯೊಬ್ಬ ಹೇಳುವಂತೆ ಲಿಂಗಾಯತ ಧರ್ಮವೆಂಬ ನಡುಗಡ್ಡೆಗೆ ಅದರ ಸುತ್ತ ಮುತ್ತ ಇರುವ ಹಿಂದು ಧರ್ಮದ ಅಲೆಗಳು ಅಪ್ಪಳಿಸಿ ಅಪ್ಪಳಿಸಿ ಲಿಂಗಾಯತ ಧರ್ಮವನ್ನು ಕೃಶಗೊಳಿಸಿವೆ ಎಂಬ ಮಾತು ಇಂದು ಅಕ್ಷರಶಃ ಸತ್ಯವಾಗಿದೆ. ಇದಕ್ಕೆಲ್ಲ ಮುಖ್ಯ ಕಾರಣ ಅಂದು ಹರಳಯ್ಯ ಮತ್ತು ಮಧುವರಸ ದಂಪತಿಗಳ ಮೇಲಾದ ಬರ್ಬರ ದೌರ್ಜನ್ಯ. ಸಾವಿರಾರು ಶರಣರ ಕಗ್ಗೊಲೆ, ವಚನ ಸಾಹಿತ್ಯ ಹೊತ್ತು ಕೊಂಡು ಹೊರಟ ಶರಣರ ಶಿರಚ್ಛೇದ. ಬಸವ ತತ್ವವನ್ನು ಬದುಕುವ ವ್ಯಕ್ತಿಗಳ ಮೇಲೆ ಮಾರಣಾಂತಿಕ ಹಲ್ಲೆಗಳು, ಬಹಿಷ್ಕಾರಗಳು. ಇದರೊಂದಿಗೆ ಪುರೋಹಿತಶಾಹಿ ಹಾಗೂ ಪಟ್ಟಭದ್ರ ಶಕ್ತಿಗಳು ಒಂದಾಗಿ ಲಿಂಗಾಯತ ಧರ್ಮದ ತತ್ವಗಳು ತಲೆ ಎತ್ತದಂತೆ ನೋಡಿಕೊಂಡದ್ದು.
ಹನ್ನೆರಡನೆಯ ಶತಮಾನದಲ್ಲಿ ವಚನಗಳು ರಚನೆಯಾದರೂ ಸಹ ಅವು ಕಾಗದದಲ್ಲಿ ಮುದ್ರಣವಾದುದು 1920 ರಲ್ಲಿ ಮಾತ್ರ. ಅಲ್ಲಿಯವರೆಗೆ ತಾಡೋಲೆ ಗ್ರಂಥಗಳಲ್ಲಿ ಅವಿತುಕೊಂಡು ಕುಳಿತುಕೊಂಡಿತ್ತು. ಸದಾ ಜಾಗರೂಕವಾಗಿರುವ ಕುತಂತ್ರಿಗಳು ಆ ತಾಡೋಲೆಗಳಲ್ಲಿಯೂ ಹಲವಾರು ವಚನಗಳನ್ನು ತಿದ್ದಿ ಸೇರಿಸಿದ ಹಲವಾರು ಉದಾಹರಣೆಗಳಿವೆ. ಲಿಂಗಾಯತ ಧರ್ಮದ ತತ್ವ, ತಳಹದಿ, ಅದರ ಜೀವ ಜೀವಾಳ ಏನು ? ಎಂಬುದು ಗೊತ್ತಿಲ್ಲದ ಲಿಂಗಾಯತ ಜನ ತಾವು ಯಾವ ಮಣ್ಣಿನಲ್ಲಿ ಹುಟ್ಟಿದವರು ? ತಮ್ಮ ವಿಶೇಷತೆ ಏನು ? ಎಂಬುದರಿಂದ ಬಹುದೂರ ನಡೆದು ಬಂದಿದ್ದಾರೆ.
ರಾಜ್ಯದ ತುಂಬೆಲ್ಲ ಮೂರು ಸಾವಿರಕ್ಕೂ ಹೆಚ್ಚು ಮಠಗಳಿದ್ದರೂ ಶರಣರ ಆಶಯಗಳನ್ನು ಸಂಪೂರ್ಣ ಪ್ರತಿನಿಧಿಸುವಲ್ಲಿ ಸೋತು ಹೋಗಿವೆ. ಅಕ್ಕರ ಮತ್ತು ಅನ್ನ ದಾಸೋಹವನ್ನು ಕೆಲವು ಮಠಗಳು ಮುಂದುವರೆಸುವ ಮೂಲಕ ಶರಣರ ಸಿದ್ಧಾಂತಗಳನ್ನು ಎತ್ತಿ ಹಿಡಿಯುವ ಕೆಲಸ ಮಾಡಿವೆ. ಆದರೆ ಅವು ಸಹ ಶರಣರ ಸಂಪೂರ್ಣ ಕ್ರಾಂತಿಯನ್ನು ಜನ ಸಾಮಾನ್ಯನಿಗೆ ತಲುಪಿಸುವಲ್ಲಿ ವಿಫಲಗೊಂಡಿವೆ. ಜಾತಿ ರಹಿತ ಸಮಾಜ ಸೃಷ್ಠಿಯ ಕನಸು ಕಂಡಿದ್ದ ಶರಣರ ಚಿಂತನೆಗಳಿಗೆ ವಿರುದ್ಧವಾಗಿ ಬಹುತೇಕ ಮಠಗಳು ಜಾತಿಯ ಆಡಂಬೋಲವಾಗಿವೆ.
ಬಸವಾದಿ ಶರಣರು ಕಂಡ ಮೌಢ್ಯ ಮುಕ್ತ, ಶೋಷಣಾ ರಹಿತ, ಸರ್ವರೂ ಸಮಾನರು, ದೇವರುಗಳಿಗಿಂತ ಕಾಯಕ ಶ್ರೇಷ್ಠ ಎಂಬ ಚಿಂತನೆಗಳನ್ನು ಮತ್ತೆ ಮುನ್ನೆಲೆಗೆ ತರುವ ಉದ್ದೆÃಶದಿಂದ ಲಿಂಗಾಯತ ಧರ್ಮದ ಚಳುವಳಿ ಮತ್ತೆ ಆರಂಭವಾಗಿದೆಯೆ ಹೊರತು ಅಲ್ಪಸಂಖ್ಯಾತ ಸ್ಥಾನ ಮಾನಕ್ಕಾಗಿ ಅಲ್ಲ. ಪ್ರಜಾಪ್ರಭುತ್ವದ ಇಂದಿನ ದಿನಮಾನಗಳಲ್ಲಿ ಹೊಸದಾದ ಯಾವ ಧರ್ಮಕ್ಕೂ ಮಾನ್ಯತೆ ಕೊಡುವ ಹಕ್ಕು ಚುನಾಯಿತ ಸರಕಾರಕ್ಕೆ ಇಲ್ಲ ಎಂಬುದು ಗೊತ್ತಿದೆ. ಆದ್ದರಿಂದ ಹೋರಾಟದ ಪ್ರಮುಖರು ಹಿಂದೆ ಸಿಖ್ ಧರ್ಮ, ಜೈನ ಹಾಗೂ ಬೌದ್ಧ ಧರ್ಮಕ್ಕೆ ಮಾನ್ಯತೆ ನೀಡುವ ಸಂದರ್ಭದಲ್ಲಿ ಅನುಸರಿಸಿದ ಉಪಕ್ರಮಗಳನ್ನು ಇಲ್ಲಿ ಅನುಸರಿಸಲಾಗುತ್ತಿದೆ. ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳಿಗೆ ಸರಕಾರದಿಂದ ಅನುದಾನ ಪಡೆಯಲು ಮಾತ್ರ ಈ ಹೋರಾಟ ಎಂಬ ಹೇಳಿಕೆ ಅಪರಿಪೂರ್ಣ ಮಾತಾಗುತ್ತದೆ. ಬಸವಣ್ಣನವರ ಹೆಸರನ್ನು ದುರ್ಬಳಕೆ ಮಾಡಿಕೊಂಡವರು ಸೆರಗಿನಲ್ಲಿ ಕೆಂಡವನ್ನು ಕಟ್ಟಿಕೊಂಡಂತೆ ಎಂಬ ಪ್ರಜ್ಞೆಯನ್ನು ಇಟ್ಟುಕೊಂಡು ಜಾಗತಿಕ ಲಿಂಗಾಯತ ಮಹಾಸಭೆ ಕಾರ್ಯ ನಿರ್ವಹಿಸುತ್ತಿದೆ.
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…