ಹಲಕರಟಿ ಮಠದಲ್ಲಿ ಶ್ರಾವಣ ಇಷ್ಟಲಿಂಗ ಪೂಜೆ

0
153

ವಾಡಿ: ಸುಕ್ಷೇತ್ರ ಹಲಕರಟಿ ಕಟ್ಟಿಮನಿ ಹಿರೇಮಠದಲ್ಲಿ ಶ್ರಾವಣ ಮಾಸಾಚರಣೆ ಭಕ್ತಿಪೂರ್ವಕವಾಗಿ ಆಚರಿಸಲಾಗುತ್ತಿದ್ದು, ಪ್ರತಿದಿನವೂ ಮಠದ ಪೀಠಾಧಿಪತಿ ಪೂಜ್ಯ ಶ್ರೀಮುನೀಂದ್ರ ಶಿವಾಚಾರ್ಯ ಸ್ವಾಮೀಜಿ ಅವರಿಂದ ಇಷ್ಟಲಿಂಗ ಪೂಜೆ ಹಾಗೂ ಭಕ್ತರಿಂದ ಸ್ವಾಮೀಜಿ ಅವರ ಮಹಾಪಾದಪೂಜೆ ನಡೆಯುತ್ತಿದೆ.

ಧಾರ್ಮಿಕ ಕಾರ್ಯಕ್ರಮಗಳಿಗೆ ವಿಶೇಷ ಆಧ್ಯತೆ ನೀಡುವ ಮಠದಲ್ಲಿ ಗುರು ಪೂಜೆ ಸಾಗುತ್ತಿದೆ. ಅನ್ನದಾಸೋಹ ವಿಶೇಷವಾಗಿದ್ದು, ಗ್ರಾಮಸ್ಥರು ಸ್ವಾಮೀಜಿಯ ಪಾದಪೂಜೆಯಲ್ಲಿ ಪಾಲ್ಗೊಂಡು ಪ್ರಸಾದ ಸವಿಯುತ್ತಿದ್ದಾರೆ.
ಶನಿವಾರ ಸಂಜೆ ಇಷ್ಟಲಿಂಗ ಪೂಜೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀಮುನೀಂದ್ರ ಶಿವಾಚಾರ್ಯ ಸ್ವಾಮೀಜಿ, ಧಾರ್ಮಿಕ ಚಿಂತನೆಗಳನ್ನು ಜೀವಂತವಾಗಿಟ್ಟು ಬದುಕಿನ ಸಂಸ್ಕಾರ ಕಲಿಕೆಯ ತಾಣವಾಗಿರುವ ಮಠಮಾನ್ಯಗಳಿಂದ ಸಮಾಜದಲ್ಲಿ ಸೌಹಾರ್ಧತೆ ಉಳಿದುಕೊಂಡಿದೆ. ಭಕ್ತಿ, ಪೂಜೆ, ಪ್ರವಚನಗಳು ಜನರಲ್ಲಿ ಉತ್ತಮ ಭಾವನೆಗಳನ್ನು ಮೂಡಿಸಲು ಸಹಕಾರಿಯಾಗುತ್ತಿದೆ. ಗ್ರಾಮಗಳಲ್ಲಿ ಶಾಂತಿ ಸೌಹಾರ್ಧತೆ ಶಾಸ್ವತವಾಗಿ ನೆಲೆಸಬೇಕು ಎಂದರೆ ಧಾರ್ಮಿಕ ಚಿಂತನೆಗಳು ಮೈಗೂಡಬೇಕು. ದೇವರ ಮೇಲಿನ ಭಕ್ತಿ ಇಮ್ಮಡಿಯಾಗಬೇಕು. ಭಯ ಭಕ್ತಿ ಬದುಕಿನ ಭಾಗವಾಗಬೇಕು. ಪರಿಣಾಮ ಯುವಕರಲ್ಲಿ ನೀತಿ ನೈತಿಕತೆ ಮರುಸ್ಥಾಪಿಸಲು ಕಟ್ಟಿಮನಿ ಹಿರೇಮಠ ಶ್ರಮಿಸುತ್ತಿದೆ ಎಂದರು.

Contact Your\'s Advertisement; 9902492681

ಯುವಕರಲ್ಲಿ ಗುರಿ ಹಿರಿಯರ ಮೇಲಿನ ಗೌರವ ಕಡಿಮೆಯಾಗುತ್ತಿದೆ. ತಂದೆ ತಾಯಿಗಳ ಮಾತು ಮೀರಿ ಸಾಗುವ ಮೂಲಕ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ. ಹಲವು ದುಶ್ಚಟಗಳಿಗೆ ಬಲಿಯಾಗಿ ವ್ಯಕ್ತಿಗೌರವ ಕಡಿಮೆ ಮಾಡಿಕೊಳ್ಳುತ್ತಿದ್ದಾರೆ. ಧರ್ಮ, ಜಾತಿಗಳ ಹೆಸರಿನಲ್ಲಿ ಗುಂಪು ಕಟ್ಟಿಕೊಂಡು ಸಮಾಜದ ಅಶಾಂತಿಗೆ ಕಾರಣವಾಗುತ್ತಿದ್ದಾರೆ. ಶರಣರ ನಾಡು ಕಲಬುರಗಿಯಲ್ಲಿ ಯುವಜನರು ದಾರಿ ತಪ್ಪುತ್ತಿರುವುದನ್ನು ಕಾಣುತ್ತಿದ್ದೇವೆ. ಮಠಾದೀಶರು ಈ ಕುರಿತು ಗಂಭೀರ ಚಿಂತನೆ ಮಾಡುವ ಸಂದರ್ಭ ಬಂದಿದೆ. ಯುವಜನರನ್ನು ಸರಿ ದಾರಿಗೆ ತರಲು ಧರ್ಮಗುರುಗಳಾದ ನಮ್ಮ ಮೇಲೆ ಹೆಚ್ಚಿನ ಜವಾಬ್ದಾರಿ ನಿಂತಿದೆ ಎಂದು ವಿವರಿಸಿದರು.

ದೊಡ್ಡಯ್ಯಸ್ವಾಮಿ ಹಿರೇಮಠ, ಶರಣಯ್ಯಸ್ವಾಮಿ, ರಾಚಯ್ಯ ಶಾಸ್ತ್ರೀ, ಕಸಾಪ ಅಧ್ಯಕ್ಷ ಸಿದ್ದಯ್ಯಶಾಸ್ತ್ರೀ ನಂದೂರಮಠ, ರವಿ ಸಿಂಧಗಿ, ಮಹಾದೇವಯ್ಯ ಸ್ವಾಮಿ, ಶ್ರೀಶೈಲ ಪುರಾಣಿಕ, ಡಾ.ಸುರೇಶ ಕುಲಕರ್ಣಿ, ಮಲ್ಲಿಕಾರ್ಜುನ ಅಣಿಕೇರಿ ಸೇರಿದಂತೆ ಗ್ರಾಮಸ್ಥರು ಪಾಲ್ಗೊಂಡಿದ್ದರು. ಇದೇ ವೇಳೆ ಮಠದಲ್ಲಿ ತೇರಿನ ಪ್ರತಿಕೃತಿ ಎಳೆದು ಸಾಂಪ್ರದಾಯಿಕ ಭಕ್ತಿ ಸಮರ್ಪಿಸಲಾಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here