ಬೆಂಗಳೂರು: ಕರ್ನಾಟಕ ಮಾಧ್ಯಮ ಅಕಾಡೆಮಿ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ರಾಜ್ಯದ ವಿಶ್ವವಿದ್ಯಾಲಯಗಳ ಪತ್ರಿಕೋದ್ಯಮ ವಿಭಾಗಗಳ, ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರೊಂದಿಗೆ ಮಾಧ್ಯಮ ಶಿಕ್ಷಣ ಮಂಥನ ಸಭೆ ಇಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕೇಂದ್ರ ಕಚೇರಿಯಲ್ಲಿ ನಡೆಯಿತು.
ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳ 30 ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಿದ್ದರು ಪ್ರಸ್ತುತ ಕಾಲಘಟ್ಟದಲ್ಲಿ ಮಾಧ್ಯಮ ಶಿಕ್ಷಣದ ಗುರಿ, ಅವಶ್ಯಕತೆಗಳು, ಅಗತ್ಯತೆ ಮತ್ತು ಕಾಲಮಾನಕ್ಕೆ ತಕ್ಕಂತೆ ನಾವೀನ್ಯತೆಗಳನ್ನು ರೂಢಿಸಿಕೊಂಡು ಶಿಕ್ಷಣ ನೀಡುವ ಕುರಿತಾಗಿ ಸಭೆಯಲ್ಲಿ ಚರ್ಚೆ ನಡೆಯಿತು.
ಮಾಧ್ಯಮರಂಗದ ಮುಂದಿರುವ ಸವಾಲುಗಳು ಹಾಗೂ ಪ್ರಸ್ತುತ ಡಿಜಿಟಲ್ ಯುಗದಲ್ಲಿ ಮಾಧ್ಯಮದ ವಿದ್ಯಾರ್ಥಿಗಳನ್ನು ವೃತ್ತಿಪರವಾಗಿ ಹೇಗೆ ಸಿದ್ದಗೊಳಿಸಬೇಕು ಎಂಬುದರ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಯಿತು.
ಸಭೆಯಲ್ಲಿ ವ್ಯಕ್ತವಾದ ಸಲಹೆಗಳನ್ನು ಸೂಕ್ತ ಶಿಫಾರಸ್ಸಿನೊಂದಿಗೆ ಸರ್ಕಾರಕ್ಕೆ ಕಳುಹಿಸ ಕೊಡಲಾಗುವುದು ಎಂದು ಇಲಾಖೆ ಆಯುಕ್ತರಾದ ಹೇಮಂತ್ ಎಂ.ನಿಂಬಾಳ್ಕರ್ ಅವರು ತಿಳಿಸಿದರು.
ಮಾಧ್ಯಮ ಶಿಕ್ಷಣ ಉತ್ತೇಜಿಸುವ ನಿಟ್ಟಿನಲ್ಲಿ ಯುವ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲು ಯುವ ಪ್ರಶಸ್ತಿ ನೀಡುವಂತೆ ಕ್ರಮ ಕೈಗೊಳ್ಳಲು ಸೂಚಿಸಿದರು.
ಕರ್ನಾಟಕ ಮಾಧ್ಯಮ ಅಕಾಡೆಮಿ , ಹಿರಿಯ ಪತ್ರಕರ್ತರನ್ನು ಅಕಾಡೆಮಿಯ ಶೈಕ್ಷಣಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಅನುವಾಗುವಂತೆ ಮತ್ತು ಮಾಧ್ಯಮ ಸಂಕಿರಣಗಳನ್ನು ಹೆಚ್ಚು ಹೆಚ್ಚಾಗಿ ಏರ್ಪಡಿಸುವ ಮುಖೇನ ಕಿರಿಯರಿಗೆ ಹಿರಿಯರ ಮಾರ್ಗದರ್ಶನವನ್ನು ನೀಡುವ ಕುರಿತು ಮಾತನಾಡಿದರು .ಸರ್ಕಾರದ ಡಿಜಿಟಲ್ ಪಾಲಿಸಿ ಬಗ್ಗೆಯೂ ತಿಳಿಸಿದರು.
ಮಾಧ್ಯಮ ಶಿಕ್ಷಣ ಹಾಗೂ ಸಂಶೋಧನಾಸಕ್ತ ಪ್ರತಿನಿಧಿಗಳಿಂದ ವ್ಯಕ್ತವಾದ ಅಭಿಪ್ರಾಯಗಳನ್ನು ಮಾಧ್ಯಮ ಅಕಾಡೆಮಿ ಚಟುವಟಿಕೆಗಳ ಮೂಲಕ ಮಂದುವರೆಸಬೇಕೆಂಬ ಅಭಿಪ್ರಾಯ ವ್ಯಕ್ತ ಪಡಿಸಿದರು.
ಸಭೆಯಲ್ಲಿ ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷರಾದ ಆಯೇಶಾ ಖಾನಂ, ವಾರ್ತಾ ಇಲಾಖೆ ಜಂಟಿ ನಿರ್ದೇಶಕರಾದ ಮಂಜುನಾಥ ಡೊಳ್ಳಿನ, ಸಿ ಆರ್ ನವೀನ್, ಅಕಾಡೆಮಿ ಕಾರ್ಯದರ್ಶಿ ಸಿ. ರೂಪಾ ಹಾಗೂ ರಾಜ್ಯದ ವಿವಿಧ ವಿಶ್ವ ವಿದ್ಯಾಲಯಗಳ ಪತ್ರಿಕೋದ್ಯಮ ವಿಭಾಗಗಳ ಮುಖ್ಯಸ್ಥರು ಭಾಗವಹಿಸಿ ದ್ದರು.