ವಾಡಿ: ಬಿಸಿಯೂಟದ ಜತೆ ಸರ್ಕಾರ ಮಕ್ಕಳಿಗೆ ಮೊಟ್ಟೆ ಮತ್ತು ಬಾಳೆ ಹಣ್ಣು ನೀಡುತ್ತಿರುವುದು ಸ್ವಾಗತಾರ್ಹ. ಪೋಷಕಾಂಶವನ್ನು ಹೊಂದಿರುವ ಈ ಎರಡೂ ಪದಾರ್ಥಗಳು ದೇಹದ ಪೌಷ್ಠಿಕಾಂಶ ಹೆಚ್ಚಿಸುತ್ತವೆ. ಆದರೆ ಮೊಟ್ಟೆ ಕನಿಷ್ಠ, ಬಾಳೆ ಹಣ್ಣು ಶ್ರೇಷ್ಠ ಎಂಬ ಬೇಧ ಬಿತ್ತಬಾರದು ಎಂದು ಕಸಾಪ ಅಧ್ಯಕ್ಷ ಸಿದ್ಧಯ್ಯಶಾಸ್ತ್ರೀ ನಂದೂರಮಠ ಹೇಳಿದರು.
ಪಟ್ಟಣದ ಮಾತೋಶ್ರೀ ರಮಾಬಾಯಿ ಅಂಬೇಡ್ಕರ್ ಕನ್ಯಾ ಪ್ರೌಢ ಶಾಲೆಯಲ್ಲಿ ಏರ್ಪಡಿಸಲಾಗಿದ್ದ ವಾರದ ಪ್ರತಿದಿನವೂ ಮಕ್ಕಳಿಗೆ ಮೊಟ್ಟೆ ಮತ್ತು ಬಾಳೆ ಹಣ್ಣು ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಬಾಲ್ಯದ ಜೀವನವನ್ನು ಮಕ್ಕಳು ಬಹಳ ಆರೋಗ್ಯಕರವಾಗಿ ಕಳೆಯಬೇಕು. ಪೌಷ್ಠಿಕ ಆಹಾರದಿಂದ ವಿದ್ಯಾರ್ಥಿಗಳು ಬಳಲಬಾರದು ಎಂಬ ಸದುದ್ದೇಶ ಬಿಸಿಯೂಟ ಯೋಜನೆಯಲ್ಲಿದೆ. ಉತ್ತಮ ಆಹಾರ ಸೇವನೆಯಿಂದ ಮಾತ್ರ ದೇಹ ಚೈತನ್ಯ ಹೊಂದುತ್ತದೆ. ಮಾನಸಿಕ ಸದೃಢತೆ ಹೊಂದಿದಾಗ ಅಭ್ಯಾಸದಲ್ಲಿ ಆಸಕ್ತಿ ಹೊಂದಬಹುದಾಗಿದೆ. ಅಜೀಮ್ ಪ್ರೇಮಜಿ ಫೌಂಡೇಷನ್ ಹಾಗೂ ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ ಮಕ್ಕಳಿಗೆ ಪ್ರತಿದಿನವೂ ಪೌಷ್ಠಿಕ ಆಹಾರ ವಿತರಣೆಗೆ ಮುಂದಾಗಿರುವುದು ಉತ್ತಮ ಚಿಂತನೆ ಎಂದರು.
ಪತ್ರಕರ್ತ ಮಡಿವಾಳಪ್ಪ ಹೇರೂರ ಮಾತನಾಡಿ, ಈ ಭೂಮಿಯ ಮೇಲೆ ದುಃಖ, ಅಶಾಂತಿ, ಸಾವು, ನೋವು, ಅಸಮಾನತೆ ಏಕಿದೆ ಎಂದು ಅರಿಯಲು ಬುದ್ಧ ಧ್ಯಾನಕ್ಕೆ ಮೊರೆಹೋದ. ಧ್ಯಾನದಿಂದ ಜ್ಞಾನ ಬರಬಹುದು ಎಂದು ಬುದ್ಧನ ಆರಂಭಿಕ ನಂಬಿಕೆಯಾಗಿತ್ತು. ಆದರೆ ಆಹಾರ ಸೇವನೆಯಿಲ್ಲದ ಧ್ಯಾನದಿಂದ ಬುದ್ಧನ ದೇಹದ ಆರೋಗ್ಯ ಕ್ಷಿಣಿಸಿ ಮೆದುಳು ನಿಷ್ಕ್ರೀಯವಾಗುತ್ತ ಸಾಗಿತ್ತೇ ವಿನಹಃ ಮನದ ಪ್ರಶ್ನೆಗಳಿಗೆ ಉತ್ತರ ಪ್ರಾಪ್ತಿಯಾಗಲಿಲ್ಲ. ಹಾಲು ಸೇವಿಸಿದ ಬಳಿಕ ದೇಹ ಚೈತನ್ಯ ಪಡೆದಾಗ ಬುದ್ಧನಿಗೆ ಸತ್ಯದ ಅರಿವಾಯಿತು.
ದೇಹಕ್ಕೆ ಆಹಾರ ಎಷ್ಟು ಮುಖ್ಯವೆಂದು. ದೇಹದಲ್ಲಿ ಪೌಷ್ಠಿಕ ಆಹಾರದ ಅಗತ್ಯವನ್ನು ಮತ್ತು ಮೆದುಳಿನ ಕ್ರೀಯಾಶೀಲತೆಗೆ ಉತ್ತಮ ಆಹಾರ ಮುಖ್ಯ ಎಂಬುದನ್ನು ಬುದ್ಧ ಸಾರಿ ಹೇಳಿದ. ಇದು ಮಕ್ಕಳ ಬಿಸಿಯೂಟ ಯೋಜನೆಗೂ ಅನ್ವಯಿಸುತ್ತದೆ. ಆಹಾರ ಸ್ವೀಕರಿಸಿ ಆಟ ಮತ್ತು ಅಕ್ಷರ ಅಭ್ಯಾಸದಲ್ಲಿ ಸಾಧನೆ ಮಾಡಿರಿ ಎಂದರು.
ಮುಖ್ಯಶಿಕ್ಷಕ ಬಸವರಾಜ ಹೊಸಮನಿ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕರಾದ ವೀರಣ್ಣ, ಸುಧಾ, ಆಶಾಲತಾ, ಉದಯಶ್ರೀ, ಲೋಕಪ್ಪ ಹೊಸಮನಿ ಪಾಲ್ಗೊಂಡಿದ್ದರು. ವಿದ್ಯಾರ್ಥಿನಿ ದೀಪಾ ಪ್ರಾರ್ಥಿಸಿದಳು. ಶಿಕ್ಷಕ ಚಿದಾನಂದ ಮಠಪತಿ ನಿರೂಪಿಸಿ, ವಂದಿಸಿದರು.