ಕೆ.ಆರ್.ಡಿ.ಎಲ್ ಕಾಮಗಾರಿಯಲ್ಲಿ ಅವ್ಯವಹಾರ; ಛಲವಾದಿ ನಾರಾಯಣಸ್ವಾಮಿ ಆರೋಪ

0
43

ಬೆಂಗಳೂರು: ಕೆ.ಆರ್.ಡಿ.ಎಲ್ ಕಾಮಗಾರಿಯಲ್ಲಿ ಭಾರಿ ಅವ್ಯವಹಾರ ಆಗಿದ್ದು, ತೆಲಂಗಾಣ ಚುನಾವಣೆಗೆ ಆ ಹಣವನ್ನು ಬಳಸಿಕೊಂಡ ಆರೋಪವಿದೆ. ಇದನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಆಗ್ರಹಿಸಿದರು.

ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಿಯಾಂಕ್ ಖರ್ಗೆ ಮತ್ತು ಅಜಯ್ ಸಿಂಗ್ ಇದನ್ನು ಮಾಡುತ್ತಿದ್ದು, ನನಗೆ ಬಂದ ಮಾಹಿತಿ ಪ್ರಕಾರ ಇವರಿಬ್ಬರು ಸೇರಿ ಬಿಡುಗಡೆಯಾದ ಹಣದಲ್ಲಿ ಶೇ 40 ಕಮಿಷನ್ ತೆಗೆದುಕೊಂಡಿದ್ದಾರೆ. ತೆಲಂಗಾಣ ಚುನಾವಣೆಗೆ ಸುಮಾರು 500 ಕೋಟಿ ಕೊಟ್ಟ ಆಪಾದನೆ ಕೇಳಿಬಂದಿದೆ ಎಂದು ಆರೋಪಿಸಿದರು. ಅಲ್ಲಿರುವ ಎಸ್‍ಇಪಿ, ಟಿಎಸ್‍ಪಿ ಹಣ ಕೂಡ ಇದೇರೀತಿ ನುಂಗಲಾಗಿದೆ. ರಸ್ತೆ, ಅಭಿವೃದ್ಧಿ ಆಗದೆ ಇದ್ದರೂ ಹಣ ಖರ್ಚಾಗಿದೆ ಎಂದು ಟೀಕಿಸಿದರು.

Contact Your\'s Advertisement; 9902492681

ಒತ್ತಡ ಹಾಕಿ ಕೆಲಸ ಆಗಿದೆ ಎಂದು ತಿಳಿಸಿ ಹಣ ಪಡೆದಿದ್ದಾರೆ. ಕೆ.ಆರ್.ಡಿ.ಎಲ್‍ಗೆ ಕೇಳಿದರೆ ಅವರ ಬಳಿ ಹಣ ಇಲ್ಲ; ಎಂಎಲ್‍ಎಗಳು ಕ್ರಿಯಾ ಯೋಜನೆ ಇಲ್ಲದೆ ಬಿಲ್ ಮಾಡಿಕೊಂಡು ಹೋದುದಾಗಿ ತಿಳಿಸುತ್ತಾರೆ ಎಂದು ದೂರಿದರು. ಹಗರಣದ ಪಕ್ಕಾ ತನಿಖೆ ಆಗಬೇಕು. ಕ್ಲೀನ್ ಚಿಟ್ ಕೊಡುವ ಎಸ್‍ಐಟಿ, ಸಿಒಡಿ ಬೇಡ ಎಂದರು.

ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದಲ್ಲಿ 187 ಕೋಟಿ ರೂ. ಯಾವ ರೀತಿ ಅವ್ಯವಹಾರ ಆಗಿದೆಯೋ, ಚುನಾವಣೆಗೆ ಬಳಕೆ ಆದ ಮಾದರಿಯಲ್ಲಿ ಕೆಕೆಆರ್‍ಡಿಬಿ ಅಧ್ಯಕ್ಷ ಮಾನ್ಯ ಅಜಯ್ ಸಿಂಗ್ ಮತ್ತು ಪ್ರಿಯಾಂಕ್ ಖರ್ಗೆಯವರು ಸೇರಿ ಕಲ್ಯಾಣ ಕರ್ನಾಟಕ ಅಭಿವೃದ್ಧಿಗಾಗಿ ಇಟ್ಟಿದ್ದ ಸುಮಾರು 5 ಸಾವಿರ ಕೋಟಿ ರೂಪಾಯಿಯಲ್ಲಿ ಅವ್ಯವಹಾರ ನಡೆದಿದೆ. ಈಗಾಗಲೇ 3 ಸಾವಿರ ಕೋಟಿ ಬಿಡುಗಡೆ ಆಗಿದೆ ಎಂದು ಆರೋಪಿಸಿದರು.

ಈ ಸಂಬಂಧ ಅನೇಕ ದಾಖಲೆಗಳು ಲಭಿಸಿವೆ. ಈರಪ್ಪ ಯತನೂರ್ ಅವರು ಈಗಾಗಲೇ ಪತ್ರಿಕೆಗಳ ಗಮನ ಸೆಳೆದಿದ್ದು, ಮಾನ್ಯ ರಾಜ್ಯಪಾಲರನ್ನು ಭೇಟಿ ಮಾಡಲು ಉದ್ದೇಶಿಸಿದ್ದಾರೆ. ಸಂಪೂರ್ಣ ಕಳಪೆ ಕಾಮಗಾರಿ ನಡೆದಿದೆ. ರಸ್ತೆ ಮೇಲೆ ಟಾರ್ ಹಾಕಿದ್ದು ಚಪಾತಿಯಂತೆ ಬರುತ್ತಿದೆ ಎಂದು ಟೀಕಿಸಿದರು.

ಅವರು ಎಲ್ಲಿ ಬೇಕೋ ಅಲ್ಲಿ ತೋಟಗಳಿಗೆ ಸಿಮೆಂಟ್ ರಸ್ತೆಗಳನ್ನು ಮಾಡಿಸಿಕೊಂಡಿದ್ದಾರೆ. ಇನ್ನುಳಿದಿದ್ದು ರಸ್ತೆಯೇ ಮಾಡಿಲ್ಲ; ಸುಮ್ಮನೆ ಮಣ್ಣು ಚೆಲ್ಲಿದ್ದಾರೆ ಎಂದು ದೂರಿದರು. 5 ಸಾವಿರ ಕೋಟಿಯಲ್ಲಿ ಮಣ್ಣು ಚೆಲ್ಲು, ಬಿಲ್ ಮಾಡು ಎಂಬಂತಾಗಿದೆ ಎಂದು ವಿವರಿಸಿದರು.

ಕೆ.ಆರ್.ಡಿ.ಎಲ್‍ನಲ್ಲಿ ಶೇ 40 ಕಮಿಷನ್ ನಡೆಯುತ್ತಿದೆಯಂತೆ. ಒಂದು ಕೋಟಿಗೂ ಹೆಚ್ಚು ಮೌಲ್ಯದ ಕಾಮಗಾರಿಯನ್ನು ಟೆಂಡರ್ ಹಾಕಬೇಕಿತ್ತು. ಗುಲ್ಬರ್ಗ, ಯಾದಗಿರಿ, ಬೀದರ್- ಈ ಭಾಗದಲ್ಲಿ ಟೆಂಡರ್ ಮಾಡದೇ ಕೆ.ಆರ್.ಡಿ.ಎಲ್‍ಗೆ ಕಾಮಗಾರಿ ಕೊಟ್ಟು ತಮಗೆ ಬೇಕಾದವರಿಗೆ ವರ್ಗಾವಣೆ ಮಾಡಿದ್ದಾರೆ. ಕೆ.ಆರ್.ಡಿ.ಎಲ್‍ಗೆ ಟೆಂಡರ್‍ಗೆ ಅರ್ಜಿ ಹಾಕಲು ಬಿಡುತ್ತಿಲ್ಲ ಎಂಬ ದೂರುಗಳೂ ಇವೆ ಎಂದು ತಿಳಿಸಿದರು. ಶೇ 10 ಕೆಲಸ ಆದೊಡನೆ ಶೇ 90 ಹಣ ಬಿಡುಗಡೆ ಮಾಡಿಸುತ್ತಿದ್ದಾರೆ ಎಂದು ಕೆ.ಆರ್.ಡಿ.ಎಲ್ ಅಧಿಕಾರಿಯೊಬ್ಬರು ಹೇಳಿದ್ದಾಗಿ ತಿಳಿಸಿದರು.

ಶೇ 40 ವಸೂಲಿ ಮಾಡಿದ್ದು ನಿಜ ಎಂದು ಪತ್ರಿಕೆಗಳಲ್ಲಿ ಬಂದಿದೆ. ಈಗ ಹೆಚ್ಚುವರಿಯಾಗಿ ಶೇ 20- 20 ರಷ್ಟು ಕೊಡುವಂತೆ ಒತ್ತಡ ಹಾಕುತ್ತಿರುವ ಮಾಹಿತಿ ಲಭಿಸಿದೆ. ಕೆಲಸ ಮಾಡಿದವರಿಗೆ ಹಣ ಬಿಡುಗಡೆ ಆಗಿಲ್ಲ ಎನ್ನುತ್ತಿದ್ದಾರೆ. ದುಡ್ಡು ಕೊಟ್ಟವರಿಗೆ ಮಾತ್ರ ಹಣ ಬಿಡುಗಡೆ; ಇಲ್ಲದಿದ್ದರೆ ಇಲ್ಲ ಎಂಬಂತಾಗಿದೆ. 5 ಸಾವಿರ ಕೋಟಿ ಹಣ ಎಲ್ಲಿ ಖರ್ಚಾಗಿದೆ? ಕಲ್ಯಾಣ ಕರ್ನಾಟಕಕ್ಕೆ 5 ಸಾವಿರ ಕೋಟಿ, 6 ಸಾವಿರ ಕೋಟಿ, ಮೊನ್ನೆ ಕ್ಯಾಬಿನೆಟ್ ಮೀಟಿಂಗ್‍ನಲ್ಲಿ ಇನ್ನಷ್ಟು ಹಣ ಬಿಡುಗಡೆ ಎಂದಿದ್ದಾರೆ. ಒಟ್ಟು 17 ಸಾವಿರ ಕೋಟಿ ಎಂದು ಮುಖ್ಯಮಂತ್ರಿಗಳೇ ಹೇಳಿದ್ದಾರೆ. ಇಷ್ಟು ಹಣ ಬಿಡುಗಡೆ ಮಾಡಿದ ಮೇಲೆ ಆ ಭಾಗ ಯಾಕೆ ಉದ್ಧಾರ ಆಗುವುದಿಲ್ಲ ಎಂದು ಪ್ರಶ್ನಿಸಿದರು.

ಯಾಕೆ ಅಲ್ಲಿ ಅಭಿವೃದ್ಧಿ ಆಗುತ್ತಿಲ್ಲ? ಹಣ ಬಂದದ್ದು ಎಲ್ಲಿಗೆ ಹೋಗುತ್ತಿದೆ? ಮಣ್ಣು ಚೆಲ್ಲು; ಬಿಲ್ ಕೇಳು ಎಂಬುದೇ ನಡೆದಿದೆ. ಯಾದಗಿರಿಯಿಂದ ಶಹಾಪುರದ ವರೆಗೆ ರಸ್ತೆಗಳನ್ನು ನೋಡಿದರೆ ಗರ್ಭಿಣಿಯು ಆಸ್ಪತ್ರೆಗೆ ಹೋಗುವ ಅವಶ್ಯಕತೆ ಇಲ್ಲ ಎಂದು ತಿಳಿಸಿದರು. ಆ ರಸ್ತೆಯಲ್ಲಿ ಒಂದು ಸಾರಿ ಕರೆದುಕೊಂಡು ಹೋದರೆ ಸಾಕು ಎಂದರು.

ನಾನು ನೋಡಲ್ ಜಿಲ್ಲೆಯಾಗಿ ಅದನ್ನು ತೆಗೆದುಕೊಂಡಿದ್ದೇನೆ. ವಡಗೇರ ಎಂಬ ತಾಲ್ಲೂಕಿದೆ. ಅದನ್ನು ತಾಲ್ಲೂಕು ಮಾಡಿ 10 ವರ್ಷವಾಗಿದೆ. ಇವತ್ತಿನವರೆಗೆ ಅಲ್ಲಿ ರಸ್ತೆ ರಿಪೇರಿ ಮಾಡಿಲ್ಲ; ತಾಲ್ಲೂಕು ಕಚೇರಿ, ಬಿಡಿಒ ಕಚೇರಿ ಇಲ್ಲ; ಯಾವುದೂ ಇಲ್ಲ ಎಂದು ವಿವರಿಸಿದರು.

ವಾಲ್ಮೀಕಿ ನಿಗಮದ ಮಾದರಿಯಲ್ಲೇ ಇಲ್ಲೂ ಅವ್ಯವಹಾರದ ಹಣವನ್ನು ತೆಲಂಗಾಣಕ್ಕೆ ವರ್ಗಾಯಿಸಿದ್ದಾರೆ ಎಂಬ ಆರೋಪ ಇದೆ ಎಂದು ತಿಳಿಸಿದರು. ಬಿಜೆಪಿ ರಾಜ್ಯ ಕಾರ್ಯದರ್ಶಿ ಸಿ.ಮುನಿರಾಜು, ರಾಜ್ಯ ವಕ್ತಾರ ಅಶೋಕ್ ಗೌಡ ಮತ್ತು ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಎಸ್. ಹರೀಶ್ ಅವರು ಮಾಧ್ಯಮ ಗೋಷ್ಠಿಯಲ್ಲಿ ಹಾಜರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here