ಕಲಬುರಗಿ: ಬಸವತತ್ವ ಹೇಳುವುದಕ್ಕಲ್ಲ. ಬದುಕುವುದಕ್ಕೆ ಎನ್ನುವಂತೆ ಲಿಂಗಾಯತ ಧರ್ಮೀಯರು ಇತ್ತೀಚಿಗೆ ಮದುವೆ, ಮುಂಜಿವೆ ಹಾಗೂ ಇನ್ನಿತರ ಕೌಟುಂಬಿಕ ಕಾರ್ಯಕ್ರಮಗಳನ್ನು ಬಸವತತ್ವದ ಪ್ರಕಾರ ಮಾಡುತ್ತಿದ್ದಾರೆ.
ಇಲ್ಲಿನ ಓಂನಗರದ ಶರಣೆ ಈರಮ್ಮ ಶರಣ ಶರಣಬಸಪ್ಪ ಎಸ್. ಮಾಲಿ ಪಾಟೀಲ ಪರಿವಾರದವರು ತಮ್ಮ ಮಕ್ಕಳಾದ ಸಚ್ಚಿದಾನಂದ ಮತ್ತು ಯೋಗಾನಂದ ಅವರಿಗೆ ಶಾಲು ಹೊದಿಸುವ ಕಾರ್ಯಕ್ರಮವನ್ನು ಕೇವಲ ಕುಟುಂಬಕ್ಕೆ ಮಾತ್ರ ಸೀಮಿತಗೊಳಿಸದೆ ಅದನ್ನು ಸಾರ್ವತ್ರಿಕಗೊಳಿಸುವ ಮೂಲಕ ಸಮಾಜದಲ್ಲಿ ಬಸವ ಸಂಸ್ಕೃತಿ ಮೂಡಲು ನಾಂದಿ ಹಾಡಿದರು ಎಂದು ಹೇಳಬಹುದು.ತನ್ನಿಮಿತ್ತ ಅವರು ಶರಣ ಸಂಗಮ ಕಾರ್ಯಕ್ರಮ ಹಮ್ಮಿಕೊಂಡಿದ್ದರು.
ನೇತೃತ್ವ ವಹಿಸಿದ್ದ ಬೀದರ್ ಬಸವ ಸೇವಾ ಪ್ರತಿಷ್ಠಾನದ ಪೂಜ್ಯ ಶ್ರೀ ಡಾ. ಗಂಗಾಬಿಕಾ ಅಕ್ಕ ಮಾತನಾಡಿ, ವಚನಕಾರರಾದ ಶರಣರ ಪರಿಕಲ್ಪನೆಯಂತೆ, ಇಷ್ಟಲಿಂಗ ಪೂಜೆಯನ್ನು ಇಷ್ಟಲಿಂಗ ಧರಿಸಿದವನೇ ಮಾಡಬೇಕು. ಬೇರೆ ಮತ್ತೊಬ್ಬರಿಂದ ಮಾಡಿಸಲು ಬರುವುದಿಲ್ಲ. ಭವಚಕ್ರದಿಂದ ತಪ್ಪಿಸಿಕೊಳ್ಳಬಯಸಿ, ಆಧ್ಯಾತ್ಮಿಕ ಜೀವನ ನಡೆಸಬಯಸುವ ಭಕ್ತ, ಸದ್ಗುರುವಿನ ಬಳಿ ಬಂದು ದೀಕ್ಷಾ ಮೂಲಕ ಇಷ್ಟಲಿಂಗ ಪಡೆಯಬೇಕು. ಇಷ್ಟಲಿಂಗ ಎಂಬರ್ಥ ಒಳ್ಳೆಯ ಶಿವ, ಮಂಗಲ ಇತ್ಯಾದಿಗಳಿಂದ ಕೂಡಿದೆ ಎಂದು ನುಡಿದರು.
ಕಲಬುರಗಿಯ ಅಕ್ಕಮಹಾದೇವಿ ಆಶ್ರಮದ ಪೂಜ್ಯ ಪ್ರಭುಶ್ರೀ ಸಾನ್ನಿಧ್ಯ ವಹಿಸಿದ್ದರು. ಸೇಡಂನ ಜಿ.ಕೆ.ಪಾಟೀಲ ತೆಲ್ಕೂರ್ ಉದ್ಘಾಟನೆ ಮಾಡಿದರು. ಕಲಬುರಗಿ ಕಲಬುರಗಿ ಬಿಜೆಪಿ ನಗರ ಜಿಲ್ಲಾಧ್ಯಕ್ಷ ಚಂದು ಪಾಟೀಲ ಷಟಸ್ಥಲ ಧ್ವಜಾರೋಹಣವನ್ನು ನೆರವೇರಿಸಿದರು.
ಶರಣ ಸಾಹಿತಿ ಜಯಶ್ರಿ ಚಟ್ನಳ್ಳಿ ಇಷ್ಟಲಿಂಗ ಸಂಸ್ಕಾರದ ಮಹತ್ವ ಕುರಿತು ಅನುಭಾವ ನೀಡಿ, ಇಷ್ಟಲಿಂಗ ಜಾತಿಯ ಸಂಕೇತ ಅಲ್ಲ. ಜಾತಿಯ ಸಂಕೇತ. ಇಷ್ಟಲಿಂಗ ಜನಕ ಬಸವಣ್ಣನವರ ಕನಸು ನನಸು ಮಾಡಲು ಅವರು ನೀಡಿದ ಅರಿವಿನ ಕುರುಹು ನಮ್ಮನ್ನು ಮನುಷ್ಯತ್ವದೆಡೆಗೆ ಸಾಗುವ ಬದುಕುವ ವಿಧಾನ ಕಲಿಸಿಕೊಡುತ್ತದೆ ಎಂದರು.
ಮಕ್ಕಳಿಗೆ ನೀಡಿದ ಇಷ್ಟಲಿಂಗ ಧಾರಣೆ ಮಾಡುವುದರಿಂದ ಅವರ ಭವಿಷ್ಯ ಉಜ್ವಲಗೊಳ್ಳಲಿದೆ ಎಂದು ತಿಳಿಸಿದರು.
ಮುಖ್ಯ ಅತಿಥಿಯಾಗಿ ವಚನ ಮೂರ್ತಿ ಪೂಜ್ಯ ಶ್ರೀ ಗುಂಡಯ್ಯ ಸ್ವಾಮಿ ನವಣಿ (ಮುನ್ನಳ್ಳಿ ) ಆಗಮಿಸಿ ಆಶೀರ್ವಚನ ನೀಡಿದರು.
ವಿರೇಶ್ ಎಸ್ ಮಾಲಿಪಾಟೀಲ ಸ್ವಾಗತಿಸಿದರು. ಹಣಮಂತ ಗುಡ್ಡಾ ನಿರೂಪಿಸಿದರು. ಜಗದೀಶ ಡಿ. ಪಾಟೀಲ. ಶರಣು ಸಮರ್ಪಿಸಿದರು. ಶಿವಲಿಂಗ ಕೆಂಗನಾಳ ಹಾಗೂ ಸಂಗಡಿಗರು ವಚನ ಗಾಯನ ಮಾಡಿದರು.
ರವೀಂದ್ರ ಶಾಬಾದಿ, ಶರಣಬಸವ ಕಲ್ಲಾ, ರಾಜಕುಮಾರ ಕೋಟಿ, ಸಿದ್ಧರಾಮ ಯಳವಂತಿಗಿ, ಶಿವಶರಣಪ್ಪ ದೇಗಾಂವ, ರಾಜು ಚಾಗಿ, ಶಿವಶರಣಪ್ಪ ಕೋಳಾರ, ನಾಗರಾಜ ನಿಂಬರ್ಗಿ, ಅರುಣ ಮಹಾಶೆಟ್ಟಿ, ಡಾ.ಸಂಜಯ ಮಾಕಲ್, ಅಂಬಾರಾಯ ಬಿರಾದಾರ, ಧನರಾಜ ತಾಂಬೋಳೆ, ಡಾ. ಮಲ್ಲಿಕಾರ್ಜುನ ವಡ್ಡನಕೇರಿ, ವಿಶ್ವನಾಥ ಮಂಗಲಗಿ, ಶಶಿಕಾಂತ ಪಸಾರ, ಜಗನ್ನಾಥ ರಾಚಟ್ಟೆ ಇತರರು ಭಾಗವಹಿಸಿದ್ದರು.