ಕಲಬುರಗಿ: ಚಹಾ ವ್ಯಾಪಾರಿಯೊಬ್ಬ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ಬ್ರಹ್ಮಪೂರ್ ಪ್ರದೇಶದಲ್ಲಿ ವರದಿಯಾಗಿದ್ದು, ಮೀಟರ್ ಬಡ್ಡಿಯಿಂದ ಬೇಸತ್ತು ಅಸುನೀಗಿರುವ ಕುರಿತು ಶಂಕೆ ವ್ಯಕ್ತವಾಗಿದೆ.
ಮೃತನಿಗೆ ರಮೇಶ್ ಗಾಜರೆ ಎಂದು ಗುರುತಿಸಲಾಗಿದೆ. ರಮೇಶನು ರಸ್ತೆ ಪಕ್ಕದಲ್ಲಿ ಟೀ ಸ್ಟಾಲ್ ಇಟ್ಟುಕೊಂಡು ಜೀವನ ಸಾಗಿಸುತ್ತಿದ್ದ. ತನ್ನ ವಹಿವಾಟಿಗಾಗಿ ಖಾಸಗಿಯಾಗಿ ಸುಮಾರು ೩೦,೦೦೦ರೂ.ಗಳನ್ನು ಪಡೆದಿದ್ದ. ಅದನ್ನು ಮರಳಿಸಲು ಬಡ್ಡಿ, ಚಕ್ರಬಡ್ಡಿ ಸೇರಿ ಸುಮಾರು ಒಂದು ಲಕ್ಷ ರೂ.ಗಳನ್ನು ಕೊಡಬೇಕಾಗಿತ್ತು. ಇದರಿಂದ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಮೃತನ ತಾಯಿ ಶ್ರೀಮತಿ ಮಂಗಲಾಬಾಯಿ ಗಾಜರೆ ಅವರು ದೂರಿದ್ದಾರೆ.
ತನ್ನ ಪುತ್ರ ರಮೇಶ್ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಚೀಟಿ ಬರೆದಿಟ್ಟಿದ್ದಾನೆ. ಅದು ಎಲ್ಲಿದೆ ಎಂಬುದು ಗೊತ್ತಿಲ್ಲ. ಆದಾಗ್ಯೂ, ಆತ ತನಗೆ ಕಿರುಕುಳ ಕೊಡುತ್ತಿರುವ ಕುರಿತು ನನ್ನ ಹತ್ತಿರ ಪ್ರಸ್ತಾಪಿಸಿದ್ದ. ೩೦,೦೦೦ರೂ.ಗಳಿಗೆ ಒಂದು ಲಕ್ಷ ರೂ.ಗಳನ್ನು ಚಕ್ರಬಡ್ಡಿ ಸಮೇತ ತೀರಿಸಲು ಒತ್ತಾಯಿಸುತ್ತಿದ್ದರು ಎಂದು ಹೇಳಿದ್ದ. ಬಡ್ಡಿಯ ಹಾಗೆ ಸಾಲ ಕೊಟ್ಟವರ ಹೆಸರನ್ನು ಮಾತ್ರ ಹೇಳಿಲ್ಲ ಎಂದು ಅವರು ಹೇಳಿದರು.
ರಮೇಶನ ಸಂಬಂಧಿ ನರೇಶ್ ಸಹ ರಮೇಶ್ ಖಾಸಗಿ ಸಾಲಗಾರರ ಮೀಟರ್ ಬಡ್ಡಿಯಿಂದಾಗಿಯೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಆರೋಪಿಸಿದ್ದಾರೆ. ಈ ಕುರಿತು ಬ್ರಹ್ಮಪೂರ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.