ಬಿಸಿ ಬಿಸಿ ಸುದ್ದಿ

ಕನ್ನಡದ ಮೌಲ್ವಿ ಸೈಯದ್ ಚಾಂದ್ ಸಾಬ ಪೂಲ್ ಛಡಿ

ಹಿಂದುಗಳನ್ನು ಕಂಡರೆ ಮುಸ್ಲಿಂರು, ಮುಸ್ಲಿಮರನ್ನು ಕಂಡರೆ ಹಿಂದುಗಳು ಪರಸ್ಪರ ದ್ವೇಷ, ಅಸೂಹೆ, ಸಿಡಿದು ಬೀಳುವ, ಉರಿದುಬೀಳುವ ಇಂದಿನ ದಿನಮಾನದಲ್ಲೂ ಅಲ್ಲಲ್ಲಿ ಕೆಲವೊಬ್ಬರು ಪ್ರೀತಿ, ಸಮತೆ, ಸೈರಣೆ, ಭಾವೈಕ್ಯ ಬಿತ್ತುವ ಜನರಿದ್ದಾರೆ ಎಂದರೆ ಬಹುಶಃ ನಾವ್ಯಾರೂ ನಂಬುವಂತಿಲ್ಲ.‌

ಆದರೆ ಇಂತಹ ಜನರು ಈಗಲೂ ನಮ್ಮ ಮಧ್ಯೆದಲ್ಲಿಯೇ ಬಾಳಿ ಬದುಕುವ ಮೂಲಕ ಸಮಾಜದ ಸ್ವಾಸ್ಥ್ಯ ಹಾಳುಗೆಡುವುದಕ್ಕೆ ಆಸ್ಪದ ಕೊಡುತ್ತಿಲ್ಲ ಎಂಬುದಕ್ಕೆ ನನಗೆ ಹೈಸ್ಕೂಲಿನಲ್ಲಿ ಕನ್ನಡ ಕಲಿಸಿದ ಸೈಯದ್ ಚಾಂದ್ ಸಾಬ ಅವರು ಸಾಕ್ಷಿಯಾಗಿದ್ದಾರೆ.

 

ಯಾದಗಿರಿ ಜಿಲ್ಲೆಯ ಶಹಾಪುರ ನಗರದ ನಿವಾಸಿ ಸೈಯದ್ ಚಾಂದ್ ಸಾಬ ಇನಾಮದಾರ ಪೂಲ ಛಡಿ ಅವರನ್ನು ನೋಡಿದ ಯಾರೂ ಸಹ ಇವರನ್ನು ಮುಸ್ಲಿಂರು ಎಂದು ಹೇಳಲಿಕ್ಕೆ ಆಗುವುದಿಲ್ಲ. ಅವರು ಮಾತನಾಡಿದರಂತೂ ಇವರು ಖಂಡಿತ ಮುಸ್ಲಿಂರು ಆಗಿರಲಿಕ್ಕಿಲ್ಲ ಎಂದೆನಿಸದೆ ಇರದು.

ಮುಗಿದ ಕೈ ಬಾಗಿದ ತಲೆಯಾಗಿರುವ ಇವರು ಸದುವಿನಯದ ತುಂಬಿದ ಕೊಡದಂತೆ ಇದ್ದಾರೆ.

“ನುಡಿದರೆ ಮುತ್ತಿನ ಹಾರದಂತಿರಬೇಕು
ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು
ನುಡಿದರೆ ಸ್ಪಟಿಕದ ಸಲಾಕೆಯಂತಿರಬೇಕು
ನುಡಿದರೆ ಲಿಂಗ ಮೆಚ್ಚಿ ಹೌದೌದು ಎನುವಂತಿರಬೇಕು
ಕೂಡಲಸಂಗಮದೇವ”

ಎನ್ನುವ ವಚನ ಭಾಷೆಗೆ ತಕ್ಕಂತೆ ಇದ್ದಾರೆ.

20ನೇ ಜನವರಿ 1947ರಂದು ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲ್ಲೂಕಿನ ವಡಗೇರಿ ಗ್ರಾಮದಲ್ಲಿ ಜನಿಸಿದ ಇವರು, ಬಾಲ್ಯದಲ್ಲೇ ಪುರಾಣ, ಬಯಲಾಟ, ಪ್ರವಚನ ಕಾರ್ಯಕ್ರಮಗಳಿಗೆ ಎಲ್ಲಿಲ್ಲದ ಆಸಕ್ತಿ ತೋರಿ ಅವುಗಳಲ್ಲಿ ಭಾಗವಹಿಸುತ್ತಿದ್ದರು. ಹೈದರಾಬಾದ್ ಕರ್ನಾಟಕ (ಕಲ್ಯಾಣ ಕರ್ನಾಟಕ) ವಿಮೋಚನಾ ಹೋರಾಟವನ್ನು ಮನಸಾರೆ ಮೆಚ್ಚಿಕೊಳ್ಳುವ, ರಜಾಕಾರರ ದರ್ಪ, ದೌಲತ್ತನ್ನು ಖಂಡಿಸುವ ಇವರು, ಹಿಂದು-ಮುಸ್ಲಿಂರ ಭಾವೈಕ್ಯ ನಿಧಿಯಂತಿದ್ದಾರೆ.

ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಹೊನ್ನಳ್ಳಿಯ ವೀರಘಂಟಿ ಮಠದಲ್ಲಿ ಇದ್ದುಕೊಂಡು ತಮ್ಮ ಪ್ರಾಥಮಿಕ ವಿದ್ಯಾಭ್ಯಾಸ ಮುಗಿಸಿದ್ದಾರೆ. ಅಲ್ಲಿ ತಾವು ಕಲಿತ ವಿದ್ಯಾಭ್ಯಾಸ ಮತ್ತು ಅನ್ನದ ಋಣವನ್ನು ಇಂದಿಗೂ ಸ್ಮರಿಸುತ್ತಾರೆ. ಎಂ.ಎ, ಬಿ.ಇಡಿವರೆಗೆ ಅಭ್ಯಾಸ ಮಾಡಿರುವ ಇವರು, ಪ್ರೌಢಶಾಲಾ ಶಿಕ್ಷಕರಾಗಿ, ಪದವಿಪೂರ್ವ ಕಾಲೇಜು ಉಪನ್ಯಾಸಕರಾಗಿ ಸೇವೆ ಸಲ್ಲಿಸಿ ಇದೀಗ ವಿಶ್ರಾಂತ ಜೀವನ ನಡೆಸುತ್ತಿದ್ದಾರೆ. ವಿಶ್ರಾಂತ ಜೀವನದಲ್ಲೂ ಮತ್ತೆ ಪಾಠ ಮುಂದುವರಿಸಿರುವುದು ಇವರಲ್ಲಿರುವ ಕ್ರಿಯಾಶೀಲತೆಯನ್ನು ಎತ್ತಿ ತೋರಿಸುತ್ತದೆ.

ಬಸವಣ್ಣನವರ ಕಾಯಕಭೂಮಿಯಾದ ಬಸವಕಲ್ಯಾಣದಲ್ಲಿ ಸೇವೆ ಸಲ್ಲಿಸುವ ಮೂಲಕ ಆ ನಾಡಿನ ವಚನಗಂಧವನ್ನು ತಮ್ಮ ಮೈ, ಮನಗಳಿಗೆ ಸಿಂಪಡಿಸಿಕೊಂಡಿರುವ ಇವರು, ಬಹಳ ನಿರರ್ಗಳವಾಗಿ ವಚನ ವಿಶ್ಲೇಷಣೆ ಮಾಡುತ್ತ, ಅಚ್ಚ ಕನ್ಮಡದಲ್ಲಿ ಮಾತನಾಡಿ ಎಲ್ಲರನ್ನು ನಾಚುವಂತೆ ಮಾಡುತ್ತಾರೆ.

ಇವರ ವೇಷ, ಭೂಷಣ, ಮಾತಾಡುವುದನ್ನು ನೋಡಿದರೆ ಇವರು ಮುಸ್ಲಿಂ ಬಾಂಧವರು ಎಂದು ಗುರುತಿಸುವುದು ಆಗುವುದೇ ಇಲ್ಲ. ಅಣ್ಣ ಬಸವಣ್ಣನವರ

‘ಇವನಾರವ, ಇವನಾರವ ಎಂದೆನಿಸದಿರಯ್ಯ
ಇವ ನಮ್ಮವ ಇವ ನಮ್ಮವ
ಎಂದೆನಿಸಯ್ಯ
ಕೂಡಲ ಸಂಗಮ‌ದೇವ
ಇವ ನಮ್ಮ‌ಮನೆಯ ಮಗ
ಎಂದೆನಿಸಯ್ಯ”

ಎನ್ನುವ ವಚನದಂತೆ ಹಿಂದು ಮುಸ್ಲಿಂರು ಒಬ್ಬರಿಗೊಬ್ಬರು ಸಹೋದರರಂತೆ ಬಾಳಬೇಕು ಎಂದು ಸಾರಿ ಹೇಳುತ್ತಾರೆ. ತಮ್ಮ ಪ್ರಾಮಾಣಿಕ ಸೇವೆಯಿಂದಾಗಿ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ, ಶಿಕ್ಷಕ ಬಂಧು, ಶಿಕ್ಷಕ ರತ್ನ ಪ್ರಶಸ್ತಿಗೆ ಭಾಜನರಾದ ಸೈಯದ್ ಚಾಂದ್ ಸಾಬ ಪೂಲ್ ಛಡಿ ಅವರು ಇಂದಿಗೂ ಕನ್ನಡದ ಕಂಪು ಬೀರುತ್ತಲೇ ಇರುವುದು ನಮ್ಮೆಲ್ಲರ ಸುದೈವವೆಂದು ಹೇಳಲೇಬೇಕಾಗುತ್ತದೆ.

ಇಂತಹ ಕನ್ನಡದ ಮೇಷ್ಟ್ರು ನಮಗೆ ಕಲಿಸುತ್ತಿದ್ದಾಗ, ನಾವು ಗೆಳೆಯರೆಲ್ಲರೂ ಕ್ರಿಕೆಟ್, ಫುಟ್‌ಬಾಲ್‌ ಇಲ್ಲವೇ ಬೇಸ್ ಬಾಲ್ ಆಡುತ್ತಿದ್ದೇವು. ನಾವು ಕ್ಲಾಸಿಗೆ ಹಾಜರಾಗದಿರುವುದನ್ನು ಗಮನಿಸುತ್ತಿದ್ದ ಅವರು, ನೇರವಾಗಿ ಕ್ರೀಡಾಂಗಣಕ್ಕೆ ಬಂದು ಕ್ಲಾಸಿಗೆ ಕರೆದೊಯ್ಯುತ್ತಿದ್ದರು. ಇದೀಗ heart operation ಆಗಿ ಅವರ ಮುಖ ಸ್ವಲ್ಪ ಬಾಡಿದಂತೆ ಕಂಡು ಬರುತ್ತದೆ ನಿಜ, ಆದರೆ ಅವರಲ್ಲಿನ ಉತ್ಸಾಹಕ್ಕೆಮಾತ್ರ ಬರವಿಲ್ಲ.

ನಮ್ಮ ರಾಷ್ಟ್ರೀಯ ಹಬ್ಬ ಹರಿದಿನಗಳಾದ ಪಂದ್ರಾ ಆಗಸ್ಟ್, ಛಬ್ಬಿಸ್ ಜನವರಿ, ನವೆಂಬರ್ ಒಂದರ ರಾಜ್ಯೋತ್ಸವ ದಿನದಂದು ನನಗೆ ಫೋನ್ ಮಾಡಿ ಆರೋಗ್ಯ ಸಮಾಚಾರ ಕೇಳುವುದಲ್ಲದೆ ಮನೆಯವರೆಲ್ಲರ, ಗೆಳೆಯರ ಸಮಾಚಾರ ಕೇಳಿ, “ಶಿವು ಈಗ ಕಾಲ ಮಾನ ಬಾಳ ಸುಮಾರ ಆಗ್ಯಾವ. ನೀವು ಅವ್ಯಾವು ತಂಟೆ, ತಕರಾರುಗಳಲ್ಲಿ ಹೋಗಬ್ಯಾಡ್ರಪ್ಪೋ, ಹಂಗೆ ನಿಮ್ಮ ತಮ್ಮ ನಜೀರ್ ಗೂ (ಸರ್ ಅವರ ಕೊನೆಯ ಮಗ) ಒಂದಿಷ್ಟು ಬುದ್ಧಿ ಹೇಳ್ರಪ್ಪೋ” ಎಂದು ಪ್ರೀತಿಯಿಂದ ಮಾತನಾಡಿಸುತ್ತಾರೆ.

(20-10-2019ರಂದು ಚಾಂದ್ ಸಾಬ ಅವರ “ಸಮನ್ವಯ ಚೇತನ” ಅಭಿನಂದನ ಗ್ರಂಥ ಬಿಡುಗಡೆ ಸಮಾರಂಭ ಶಹಾಪುರದ ಚರಬಸವೇಶ್ವರ ಕಾಲೇಜು ಆವರಣದಲ್ಲಿದೆ)

emedialine

Recent Posts

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

39 mins ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

7 hours ago

ಸಿದ್ದ ಶ್ರೀ ಕಾರ್ಖಾನೆ ಪ್ರಾರಂಭವಾಗುವರೆಗೂ ಹೋರಾಟ: ವೀರಣ್ಣ ಗಂಗಾಣಿ

ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…

7 hours ago

ದಕ್ಷಿಣ ಭಾರತ ಅಂತರ ವಿಶ್ವವಿದ್ಯಾಲಯ ಮಹಿಳೆಯರ ಕಬಡ್ಡಿ ಕ್ರೀಡಾಕೂಟಕ್ಕೆ ಆಯ್ಕೆ

ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…

8 hours ago

ಪ್ರಿಯಾಂಕ್ ಖರ್ಗೆ ಜನ್ಮದಿನ; ರಕ್ತದಾನ ಶಿಬಿರಕ್ಕೆ ಶಾಸಕ ಪಾಟೀಲ ಚಾಲನೆ

ಕಲಬುರಗಿ: ನಗರದ ವಾರ್ಡ ನಂ.51.ರ  ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…

19 hours ago

ಬಡವರಿಗೆ ಹಣ್ಣು-ಹಂಪಲು ವಿತರಣೆ

ಕಲಬುರಗಿ: ಕರ್ನಾಟಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಚಿವ ಪ್ರಿಯಾಂಕ್ ಖರ್ಗೆ ಅವರ ಜನ್ಮದಿನದ ಪ್ರಯುಕ್ತ  ಜೈ ಕನ್ನಡಿಗರ…

19 hours ago