ಶಹಾಪುರ, ಸುರಪುರ, ಯಾದಗಿರಿ ಹಾಗೂ ಗುರುಮಠಕಲ್ ಕ್ಷೇತ್ರವನ್ನೊಳಗೊಂಡ ಯಾದಗಿರಿ ಜಿಲ್ಲೆಯ ಶೈಕ್ಷಣಿಕ ದುಸ್ಥಿತಿ ಇದು. ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಚೆಲ್ಲಾಟವಾಡುತ್ತಿರುವ ಇಲ್ಲಿನ ರಾಜಕಾರಣಿಗಳು, ಅಧಿಕಾರಿಗಳು ಎಚ್ಚೆತ್ತುಕೊಳ್ಳುವುದು ಯಾವಾಗ ?
-
– ಡಾ. ಶಿವರಂಜನ ಸತ್ಯಂಪೇಟೆ
ಯಾದಗಿರಿ: ಎಸ್.ಎಸ್.ಎಲ್.ಸಿ ಪರೀಕ್ಷಾ ಫಲಿತಾಂಶದಲ್ಲಿ ಹುಡುಗಿಯರದ್ದೇ ಮೇಲುಗೈ ಇರುವಂತೆ ರಾಜ್ಯದ ಯಾದಗಿರಿ ಜಿಲ್ಲೆ ಕೂಡ ಫಲಿತಾಂಶದಲ್ಲಿ ಕೊನೆ ಸ್ಥಾನ ಇದೆ.
ಪರೀಕ್ಷಾ ಫಲಿತಾಂಶ ಸುಧಾರಣೆಗೆ ಸರ್ಕಾರ ಹಾಗೂ ಕಲ್ಯಾಣ ಕರ್ನಾಟಕ ಪ್ರದೇಶಾಭಿದ್ಧಿ ಮಂಡಳಿ (ಕೆಕೆಆರ್ ಡಿಬಿ) ಏನೇ ಕ್ರಮ ಕೈಗೊಂಡಿದ್ದರೂ ಫಲಿತಾಂಶದಲ್ಲಿ ಸುಧಾರಣೆ ಕಾಣುವ ಯಾವುದೇ ಲಕ್ಷಣಗಳಿಲ್ಲ.
ಪ್ರಾಥಮಿಕ ಮತ್ತು ಪ್ರೌಢಶಾಲೆ ಸೇರಿ ಒಟ್ಟು 7174 ಮಂಜೂರಾತಿ ಶಿಕ್ಷಕ ಹುದ್ದೆಯಲ್ಲಿ 3620 ಶಿಕ್ಷಕರ ಹುದ್ದೆ ಖಾಲಿ ಇವೆ. ಅಂದರೆ ಶೇ. 50.1ರಷ್ಟು ಖಾಲಿ ಇವೆ.
ಜಿಲ್ಲೆಯಲ್ಲಿ 924 ಪ್ರಾಥಮಿಕ ಶಾಲೆ, 307 ಪ್ರೌಢಶಾಲೆ ಸೇರಿ 1671 ಶಾಲೆಗಳಿದ್ದು, ಈ ಶಾಲೆಗಳಲ್ಲಿ ಒಟ್ಟು 2,45,945 ಮಕ್ಕಳ ದಾಖಲಾತಿಯಿದೆ.
ಪ್ರಾಥಮಿಕ ಶಾಲಾ ವಿಭಾಗದಲ್ಲಿ 5626 ಮಂಜೂರಾತಿ ಶಿಕ್ಷಕ ಹುದ್ದೆಗಳಿದ್ದು, 2734 ಶಿಕ್ಷಕರು ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ.
2,892 ಶಿಕ್ಷಕ ಹುದ್ದೆಗಳು ಖಾಲಿ ಇವೆ. ಪ್ರೌಢಶಾಲಾ ವಿಭಾಗದಲ್ಲಿ 1,538 ಮಂಜೂರಾತಿ ಹುದ್ದೆಗಳಿದ್ದು, 878 ಶಿಕ್ಷಕರು ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. 728 ಶಿಕ್ಷಕ ಹುದ್ದೆಗಳು ಖಾಲಿ ಇವೆ.
ಜಿಲ್ಲೆಯ ಎಲ್ಲ ಸರ್ಕಾರಿ ಪ್ರೌಢಶಾಲೆಗಳಲ್ಲಿ ಇಂಗ್ಲಿಷ್- 106 ಶಿಕ್ಷಕರ ಹುದ್ದೆಗಳು ಖಾಲಿಯಿದ್ದು, 83 ಅತಿಥಿ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ. 23 ಶಾಲೆಗಳಲ್ಲಿ ಇಂಗ್ಲಿಷ್ ಶಿಕ್ಷಕರೇ ಇಲ್ಲ. 103 ಶಾಲೆಗಳಲ್ಲಿ ಗಣಿತ ಶಿಕ್ಷಕ ಹುದ್ದೆಗಳು ಖಾಲಿಯಿದ್ದು, 84 ಅತಿಥಿ ಶಿಕ್ಷಕರು ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. 49 ಶಾಲೆಗಳಲ್ಲಿ ಗಣಿತ ಶಿಕ್ಷಕರೇ ಇಲ್ಲ. 83 ಶಾಲೆಗಳಲ್ಲಿ ವಿಜ್ಞಾನ ಶಿಕ್ಷಕ ಹುದ್ದೆಗಳು ಖಾಲಿಯಿದ್ದು, 67 ಅತಿಥಿ ಶಿಕ್ಷಕರು ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ.22 ಶಾಲೆಗಳಲ್ಲಿ ವಿಜ್ಞಾನ ಶಿಕ್ಷಕರೇ ಇಲ್ಲ.
ಕಾಯಂ ಶಿಕ್ಷಕ, ಶಿಕ್ಷಣಾಧಿಕಾರಿಗಳೇ ಇಲ್ಲ!: ಪರೀಕ್ಷಾ ಸುಧಾರಣೆಗೆ ಉಸ್ತುವಾರಿ ನೋಡಿಕೊಳ್ಳಬೇಕಾದ ಜಿಲ್ಲೆಯ ಯಾದಗಿರಿ, ಶಹಾಪುರ, ಸುರಪುರ ಮೂರು ತಾಲ್ಲೂಕುಗಳ ಕ್ಷೇತ್ರ ಶಿಕ್ಷಣಾಧಿಕಾರಿಗಳ ಹುದ್ದೆ ಖಾಲಿಯಿದ್ದು, ಮೂರು ಕಡೆ ಹೆಚ್ಚುವರಿ ಪ್ರಭಾರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಮೇಲಾಗಿ ಉಪನಿರ್ದೇಶಕರ ಕಚೇರಿಯಲ್ಲಿ ಪತ್ರಾಂಕಿತ ಸಹಾಯಕ, ಶಿಕ್ಷಣಾಧಿಕಾರಿ ಹಾಗೂ ವಿಷಯ ಪರಿವೀಕ್ಷಕ ಸೇರಿ ಮೂರೂ ಹುದ್ದೆಗಳು ಖಾಲಿ ಇವೆ. ಯಾದಗಿರಿ ತಾಲ್ಲೂಕಿನ ಬಾಡಿಯಾಲ್ ಗ್ರಾಮದ ಸರ್ಕಾರಿ ಪ್ರೌಢಶಾಲೆಗೆ ಒಬ್ಬರೂ ಕಾಯಂ ಶಿಕ್ಷಕರಿಲ್ಲ.ಇಬ್ಬರು ನಿಯೋಜಿತ ಶಿಕ್ಷಕರು ಮಾತ್ರ ಸೇವೆ ಸಲ್ಲಿಸುತ್ತಿದ್ದಾರೆ.
ಪರೀಕ್ಷಾ ಸುಧಾರಣೆಗೆ ಯಾವ ಕ್ರಮ?: ಯಾದಗಿರಿ ನೂತನ ಜಿಲ್ಲೆಯಾಗಿ 15 ವರ್ಷಗಳಾಗಿದ್ದರೂ ಎಸ್.ಎಸ್.ಎಲ್.ಸಿ. ಪರೀಕ್ಷಾ ಫಲಿತಾಂಶದಲ್ಲಿ ಇಂದಿಗೂ ಕೊನೆಯ ಸ್ಥಾನದಲ್ಲಿದೆ.ಶಾಲೆ, ಶಿಕ್ಷಕರು, ಅಗತ್ಯ ಸೌಲಭ್ಯ, ಗುಣಮಟ್ಟದ ಶಿಕ್ಷಣ ಇಲ್ಲದೆ ಜಿಲ್ಲೆಯ ಶೈಕ್ಷಣಿಕ ವಾತಾವರಣ ಈ ಹಂತಕ್ಕೆ ಬಂದು ತಲುಪಿದೆ. ಈ ಮಧ್ಯೆ ಶಾಲೆಗಳ ಸುಧಾರಣೆಗಾಗಿ ವಿವಿಧ ಸಂಘಟನೆಯವರು ಪ್ರತಿಭಟನೆ ನಡೆಸುತ್ತಾರೆ. ಇನ್ನೇನು ಕೇವಲ ಮೂರು ತಿಂಗಳಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷೆ ನಡೆಯಲಿದೆ.
ಪರಿಸ್ಥಿತಿ ಹೀಗಿರುವಾಗ ಯಾವ ದೃಷ್ಟಿಕೋನದಿಂದ ಫಲಿತಾಂಶ ಸುಧಾರಣೆಯಾಗಬಲ್ಲದು ನೀವೆ ಯೋಚಿಸಿ ?