ಕಲಬುರಗಿ: ಬಹು ಕೋಟಿ ರಫೆಲ್ ಯುದ್ಧ ವಿಮಾನ ಖರೀದಿಯಲ್ಲಿ ಸಾಕಷ್ಟು ಭ್ರಷ್ಟಾಚಾರ ಎಸಗಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ವಿರುದ್ದ ಆರೋಪ ಮಾಡಿದ್ದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಕ್ಷಮೆ ಯಾಚಿಸಬೇಕು ಎಂದು ಬಿಜೆಪಿ ಜಿಲ್ಲಾ ಹಾಗೂ ನಗರದ ಘಟಕದ ವತಿಯಿಂದ ಇಂದು ಪ್ರತಿಭಟನೆ ನಡೆಸಲಾಯಿತು.
ಈ ವಿಷಯಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ತೀರ್ಪು ನೀಡಿದ್ದು, ಯಾವುದೇ ಭ್ರಷ್ಟಾಚಾರ ಹಾಗೂ ಹಗರಣ ನಡೆದಿಲ್ಲ ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳು ತೀರ್ಪು ನೀಡಿದ್ದಾರೆ. ಹೀಗಾಗಿ ಸುಖಾ ಸುಮ್ಮನೆ ಆರೋಪ ಮಾಡಿದ ರಾಹುಲ್ ಗಾಂಧಿ ಅವರು ಕೂಡಲೇ ಕ್ಷಮೆ ಯಾಚಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ನಗರದ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು. ಕಲಬುರಗಿ ಗ್ರಾಮೀಣ ಮತಕ್ಷೇತ್ರದ ಶಾಸಕ ಬಸವರಾಜ ಮತ್ತಿಮೂಡ ಮಾತನಾಡಿ, ರಾಹುಲ್ ಗಾಂಧಿ ಅವರ ಆತುರದ ಕ್ರಮ ಖಂಡಿಸಿದರು. ಮೇಲಾಗಿ ಕ್ಷಮೆ ಕೇಳುವಂತೆ ಒತ್ತಾಯಿಸಿದರು.
ಜಿಲ್ಲಾಧ್ಯಕ್ಷ ದೊಡ್ಡಪ್ಪಗೌಡ ಪಾಟೀಲ ನರಿಬೋಳ, ಯುವ ಮುಖಂಡ ಚಂದು ಪಾಟೀಲ, ಮುಖಂಡರಾದ ಶರಣಪ್ಪ ತಳವಾರ ಸೇರಿದಂತೆ ಅನೇಕರು ಇದ್ದರು.