ಸುರಪುರ: ಹಲವಾರು ವರ್ಷಗಳಿಂದ ತಾಲೂಕಿನಲ್ಲಿ ನಾಡು ನುಡಿಯ ಸೇವೆ ಮಾಡಿಕೊಂಡು ಬರುವವರಿಗೆ ಗುರುತಿಸಿ ವರ್ಷದ ವ್ಯಕ್ತಿ ಎಂದು ಪ್ರಶಸ್ತಿ ನೀಡಿ ಗೌರವಿಸುವ ಕೆಲಸವನ್ನು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಮಾಡಿಕೊಂಡು ಬರುತ್ತಿರುವುದು ನಾಡಿಗೆ ಹೆಮ್ಮೆಯ ಸಂಗತಿಯಾಗಿದೆ ಎಂದು ಮಾಜಿ ಸಚಿವ ರಾಜಾ ಮದನಗೋಪಾಲ ನಾಯಕ ಮಾತನಾಡಿದರು.
ನಗರದ ಗರುಡಾದ್ರಿ ಕಲಾ ಮಂದಿರದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಹಮ್ಮಿಕೊಂಡಿದ್ದ ವರ್ಷದ ವ್ಯಕ್ತಿ ಪ್ರಶಸ್ತಿ ಪ್ರಧಾನ ಹಾಗು ರಾಜ್ಯ ಮತ್ತು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಿಗೆ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ನಂತರ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಚಿಂತಕ ಅಶೋಕ ಅಂಚಲಿ ಮಾತನಾಡಿ,ಇಂದು ಕನ್ನಡ ಭಾಷೆಯ ಅಭಿಮಾನ ಕಡಿಮೆಯಾಗುತ್ತಿದೆ.ಬರೀ ಗಾಡಿಗಳ ಮೇಲೆ ಗೋಡೆಗಳ ಮೇಲೆ ಕನ್ನಡ ಬರೆದರೆ ಸಾಲದು ಮೊದಲು ನಮ್ಮ ಮನಗಳಲ್ಲಿ ಕನ್ನಡ ಭಾಷಾಭಿಮಾನವನ್ನು ಮೂಡಿಸಿಕೊಂಡ ಭಾಷೆ ಬೆಳೆಸಲು ಸಾಧ್ಯವಾಗುತ್ತದೆ ಎಂದರು.
ಸನ್ಮಾನವನ್ನು ಸ್ವೀಕರಿಸಿದ ಜಾನಪದ ಅಕಾಡೆಮಿ ಸದಸ್ಯ ಅಮರಯ್ಯಸ್ವಾಮಿ ಜಾಲಿಬೆಂಚಿ ಮಾತನಾಡಿ,ನಮ್ಮ ಸುರಪುರ ನೆಲಕ್ಕೆ ಭವ್ಯವಾದ ಇತಿಹಾಸವಿದೆ.ಇದನ್ನು ನಾಡಿಗೆ ಪರಿಚಯಿಸುವ ಸಲುವಾಗಿ ಸುರಪುರ ಉತ್ಸವವನ್ನು ಆಚರಿಸುವಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ.ರವಿಯವರಿಗೆ ಮನವಿ ಮಾಡಿರುವುದಾಗಿ ತಿಳಿಸಿದರು.ಅಲ್ಲದೆ ನಮ್ಮ ಜಿಲ್ಲೆಯಲ್ಲಿ ಅನೇಕ ಜನ ಕಲಾವಿದರಿದ್ದರು ಕೆಲವರು ಮಾತ್ರ ಮಾಶಾಸನ ಪಡೆಯುತ್ತಿದ್ದು,ಎಲ್ಲಾ ನಿಜವಾದ ಕಲಾವಿದರಿಗೆ ಮಾಶಾಸನ ದೊರೆಯುವಂತೆ ಮಾಡುವುದಾಗಿ ಭರವಸೆ ನೀಡಿದರು.ನಂತರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಾಲೂಕು ಕಸಾಪ ಅಧ್ಯಕ್ಷ ಶ್ರೀನಿವಾಸ ಜಾಲವಾದಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಕನಕಗಿರಿಯ ಗಜಲ್ ಸಾಹಿತಿ ಅಲ್ಲಾಗಿರಿರಾಜ್‌ರ ಸಂದಲ್ ಗಜಲ್ ಕೃತಿಯನ್ನು ಬಿಡುಗಡೆಗೊಳಿಸಲಾಯಿತು.ನಂತರ ವರ್ಷದ ವ್ಯಕ್ತಿ ಪ್ರಶಸ್ತಿಗೆ ಭಾಜನಾರದ ಹಿರಿಯ ಸಾಹಿತಿ ಹಾಗು ತಾಲೂಕು ಕಸಾಪ ಮಾಜಿ ಅಧ್ಯಕ್ಷ ಶಾಂತಪ್ಪ ಬೂದಿಹಾಳರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು ಹಾಗು ರಾಜ್ಯ ಮಟ್ಟದ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದ ಚಂದ್ರಕಾಂತ ಕರದಳ್ಳಿ ಶಹಾಪುರ,ಮೋಹನ ಸೀತನೂರ ಕಲಬುರ್ಗಿ,ಗೌಡಾ ಪಡೆದ ಜಿಲ್ಲಾ ಕಸಾಪ ಅಧ್ಯಕ್ಷ ಸಿದ್ದಪ್ಪ ಹೊಟ್ಟಿ,ಜಿಲ್ಲಾ ರಾಜ್ಯೊತ್ಸವ ಪ್ರಶಸ್ತಿ ಪುರಸ್ಕೃತ ಪ್ರಕಾಶ ಚಂದ್ ಜೈನ್,ಜನಪದ ಸಾಹಿತಿ ಲಕ್ಷ್ಮಣ ಗುತ್ತೇದಾರ ಹಾಗು ಏಕವ್ಯಕ್ತಿ ಚಿತ್ರಕಲಾವಿದ ಜೆ.ಬಿ.ಕಟ್ಟಿಮನಿಯವರನ್ನು ಸನ್ಮಾನಿಸಲಾಯಿತು ಹಾಗು ಇವರ ಚಿತ್ರಕಲಾ ಪ್ರದರ್ಶನವನ್ನು ಉಸ್ಘಾಟಿಸಲಾಯಿತು.
ವೇದಿಕೆ ಮೇಲೆ ಆಸೀನರಾಗಿದ್ದ ನ್ಯಾಯವಾದಿ ಜೆ.ಅಗಸ್ಟಿನ್,ಚಂದ್ರಕಾಂತ ಕರದಳ್ಳಿ,ಸಿದ್ದಪ್ಪ ಹೊಟ್ಟಿ,ಮೋಹನ ಸೀತನೂರ,ಶಾಂತಪ್ಪ ಬುದಿಹಾಳ ಮಾತನಾಡಿದರು.ಬಸವರಾಜ ಜಮದ್ರಖಾನಿ,ಬಸವರಾಜಪ್ಪ ನಿಷ್ಟಿ ದೇಶಮುಖ,ಯಲ್ಲಪ್ಪ ಹುಲಕಲ್,ಜಯಲಲಿತ ಪಾಟೀಲ,ಹಸಿನಾಬಾನು ಇತರರು ಉಪಸ್ಥಿತರಿದ್ದರು.ಶ್ರೀಹರಿರಾವ್ ಆದವಾನಿ ಪ್ರಾರ್ಥಿಸಿದರು,ರಾಜಶೇಖರ ದೇಸಾಯಿ ಸ್ವಾಗತಿಸಿದರು,ದೇವು ಹೆಬ್ಬಾಳ ನಿರೂಪಿಸಿದರು,ವೆಂಕಟೇಶ ವಂದಿಸಿದರು.