ಧರೆಗಿಳಿದ ಸ್ತ್ರೀಕುಲತಿಲಕ “ಮಹಾದೇವಿ”

0
101

ಅದು ಮಲೆನಾಡಿನ ರಮಣೀಯ ಸ್ಥಳ ಉಡುತಡಿ. ಆ ದಿನ ಏಪ್ರಿಲ್ ತಿಂಗಳ ದವನದ ಹುಣ್ಣಿಮೆಯ ಆಹ್ಲಾದಕರ ದಿನ. ಆಕಾಶದ ಚಂದ್ರಮನನ್ನೇ ಅಣಕಿಸುವಂತಹ ಚಂದ್ರಕಾಂತಿಯ, ಚಿತ್ಕಳಾಭರಿತ, ಸೌಂದರ್ಯವೇ ಮೈವೆತ್ತ ಮೂರ್ತಿಯೊಂದು ಧರೆಗಿಳಿಯಿತು. ಹೆಣ್ಣು ಮಗುವಿನ ಜನನ ಕಂಡ ಆ ಮನೆಯ ಅಜ್ಜಿ “ಅಯ್ಯಾ ಹೆಣ್ಣು ಹುಟ್ಟಿತೇ? ನಮ್ಮ ಲಿಂಗಮ್ಮನಿಗೆ! ವಂಶೋದ್ಧಾರಕ ಮಗ ಹುಟ್ಟಬಾರದಾಗಿತ್ತೇ? ಎಂದು ವ್ಯಥೆ ಪಡುತ್ತಾಳೆ. ಆಗ ಬಾಣಂತಿ ಕೋಣೆಯಲ್ಲಿದ್ದ ಲಿಂಗಮ್ಮ “ಅವ್ವಾ ಹಾಗೆಲ್ಲ ಅನ್ನಬೇಡ. ಅಯ್ಯಯ್ಯೋ ಆಗಿದ್ದ ನನ್ನ ಜೀವನವನ್ನು ಆನಂದವಾಗಿಡಲು ಬಂದ ದೇವ ಕುಸುಮವಿದು, ನನ್ನ ಮಡಿಲು ತುಂಬಿ ಬಂಜೆತನದ ಹಣೆಪಟ್ಟಿ ಅಳಿಸಿ ಹಾಕಿದ ನನ್ನ ಪುಣ್ಯ, ನನ್ನ ಭಾಗ್ಯ ಎಂದು ಕೂಗಿ ಹೇಳಿದಳು.

ಭಾರತದ ಮೂಲನಿವಾಸಿಗಳೆನಿಸಿದ ದ್ರಾವಿಡರು ಮಾತ್ರ ಹೆಣ್ಣಿಗೆ ದೇವತೆಯ ಸ್ಥಾನ ಕಲ್ಪಿಸಿದ್ದರು. ಅದು ಮಾತೃಪ್ರಧಾನ ಸಾಮ್ರಾಜ್ಯವಾಗಿತ್ತು. ಪ್ರಕೃತಿಯನ್ನು ಪೂಜಿಸುತ್ತಿದ್ದ ಅವರು ಹೆಣ್ಣನ್ನು ಪ್ರಕೃತಿಗೆ ಹೋಲಿಸಿದರು. ಹೆರುವ ಸಾಹಸ ಪಡುವ ಹೆಣ್ಣಿಗೆ ಶಕ್ತಿ ದೇವತೆ ಎಂದು ಕರೆದಿದ್ದರು. ಉತ್ತರದ ಆರ್ಯರ ಆಕ್ರಮಣದಿಂದಾಗಿ ದ್ರಾವಿಡ ಸಂಸ್ಕೃತಿ ಸಂಕರಗೊಂಡಿತು. ಆರ್ಯರು ತಮ್ಮ ಆಚಾರ-ವಿಚಾರಗಳನ್ನು ಹೇರಿ ದ್ರಾವಿಡ ಜನಾಂಗದ ಮೇಲೆ ಪ್ರಭುತ್ವ ಸಾಧಿಸಿದರು. ಕಾಡ ಶಾಸನಗಳನ್ನೇ ನಾಡ ಶಾಸನಗಳನ್ನಾಗಿ ಪರಿವರ್ತನೆ ಮಾಡಿದರು. ಹೀಗಾಗಿ ಹೆಣ್ಣು ತನ್ನ ಅಸ್ತಿತ್ವ ಕಳೆದುಕೊಳ್ಳಬೇಕಾಯಿತು. ನಂತರದ ವೇದ, ಶಾಸ್ತ್ರ, ಉಪನಿಷತ್ ಕಾಲದಲ್ಲಿ ಹೆಣ್ಣಿಗೆ ದೆವ್ವ, ಪಿಶಾಚಿ, ಮಾಹೆ, ಮೋಹಿನಿ, ಹುಣ್ಣು, ಪಾಪದ ಕೂಸು ಎಂದು ಕರೆಯಲಾಗುತ್ತಿತ್ತು.

Contact Your\'s Advertisement; 9902492681

ಅಂತೆಯೇ ನಮ್ಮ ಜನಪದರು “ಹೆಣ್ಣಾಗಿ ಹುಟ್ಟುವುದಕ್ಕಿಂತ ಮರವಾಗಿ ಹುಟ್ಟಿದ್ದರೆ ಬಳಲಿ ಬಂದವರಿಗೆ ನೆರಳಾಗುತ್ತಿದ್ದೆ” ಎಂದು ಹಾಡಿದ್ದಾರೆ. ಕವಿ ದೇಜೇಗೌ ಅವರು, “ಈ ಸೃಷ್ಟಿ ಆದಾಗಿನಿಂದ ಹೆಣ್ಣು ಸುರಿಸುವ ಕಣ್ಣೀರಿಗೆ ಕಡಲು, ಅವಳ ಕಷ್ಟಗಳಿಗೆ ಮಳಲು ಕೂಡ ಸಮನಾಗುವುದಿಲ್ಲ” ಎಂದು ನೊಂದು ನುಡಿದಿದ್ದಾರೆ.
ಶತ ಶತಮಾನಗಳಿಂದ ಈ ನೋವು ಅನುಭವಿಸಿದ ಹೆಣ್ಣು ಮಕ್ಕಳಿಗೆ ೧೨ನೇ ಶತಮಾನ ಉದಯದ ಕಾಲ. ಸೂರ್ಯೋದಯದ ಕಾಲ. ಬಸವ ಭಾಸ್ಕರನ ಉದಯದ ಕಾಲ. “ಹೆಣ್ಣಿಲ್ಲದೆ ಜಗತ್ತಿಲ್ಲ. ಹೆಣ್ಣು ಎನ್ನ ಹೆತ್ತ ತಾಯಿ, ಹೆಣ್ಣು ಮಾಯೆ ಅಲ್ಲ. ಮೋಹಿನಿಯೂ ಅಲ್ಲ. ಆಕೆ ಸಾಕ್ಷಾತ್ ಕಪಿಲಸಿದ್ಧ ಮಲ್ಲಿಕಾರ್ಜುನ” ಎಂದು ಕರೆಯುವ ಮೂಲಕ ಅವರು ಹೊಸ ಇತಿಹಾಸ ಬರೆದರು.

ಬಸವಣ್ಣ ಸ್ಥಾಪಿಸಿದ ಲಿಂಗಾಯತ ಧರ್ಮದಲ್ಲಿ ಸ್ತ್ರೀಯರಿಗೆ ಸಮಾನ ಅವಕಾಶಗಳಿದ್ದವು. ವಿಭೂತಿ, ರುದ್ರಾಕ್ಷಿ, ಇಷ್ಟಲಿಂಗ, ಗುರು,ಲಿಂಗ,ಜಂಗಮ, ಪ್ರಸಾದ, ಪಾದೋದಕ, ಮಂತ್ರ ಮುಂತಾದ ಲಾಂಛನಗಳೆಲ್ಲವು ಎಲ್ಲರಿಗೂ ಸಮಾನವಾಗಿದ್ದವು. ದೇಹ ರಚನೆಯಲ್ಲಿ ಬೇರೆಯಿದೆ. ಆದರೆ ಆತ್ಮಚೈತನ್ಯದಲ್ಲಿ ಸ್ತ್ರೀ-ಪುರುಷ ಒಂದೇ ಎಂದು ಹೇಳಿದರು. ಎಲ್ಲರ ಅಂಗದ ಮೇಲೆ ಲಿಂಗ ಕೊಟ್ಟು ಸಮಾನತೆ ಸಾರಿದ ಜಗತ್ತಿನ ಏಕೈಕ ಧರ್ಮ ಅದು ಬಸವ ಧರ್ಮ.

ಗುರುಲಿಂಗ ದೇವರಿಂದ ಲಿಂಗದೀಕ್ಷೆ ಪಡೆದಿದ್ದ ಲಿಂಗಮ್ಮ-ಓಂಕಾರಶೆಟ್ಟಿ ದಂಪತಿ ಈ ಹೆಣ್ಣು ಮಗು ತಮ್ಮ ಬಾಳು ಬೆಳಗಲು ಬಂದ ದೀಪ, ಜ್ಯೋತಿ ಎಂದು ಬಗೆದರು. ೧೨ ದಿನಗಳು ಹೇಗೆ ಕಳೆದವೋ ಗೊತ್ತಾಗಲಿಲ್ಲ. ಆ ದಿನ ಮಗುವಿನ ನಾಮಕರಣ ಸಮಾರಂಭ ಇರುವುದರಿಂದ ಇಡೀ ಊರಿನಲ್ಲಿ ಸಂತಸ, ಸಂಭ್ರಮ ಮನೆ ಮಾಡಿತ್ತು. ಗುರುಲಿಂಗದೇವರು ಮನೆಗೆ ಬಂದು ಮಗುವಿಗೆ “ಮಹಾದೇವಿ” ಎಂದು ಹೆಸರಿಟ್ಟರು.

ಹುಟ್ಟುತ್ತಲೇ ಸಂತಳಾಗಿ ಹುಟ್ಟಿದಂತಿದ್ದ ಮಹಾದೇವಿ ತನ್ನ ವಾರಿಗೆಯ ಗೆಳತಿಯರ ಜೊತೆ ಆಟವಾಡುವಾಗ ಗಂಡ-ಹೆಂಡತಿ ಆಟವಾಡದೆ, ಶಿವ-ಪಾರ್ವತಿಯರ ಆಟ ಆಡುತ್ತಿದ್ದಳು. ನಾಲ್ಕೈದು ವರ್ಷದ ಈ ಬಾಲೆ ಪೂಜೆ-ಪುನಸ್ಕಾರದ ಜೊತೆಗೆ ಒಮ್ಮೊಮ್ಮೆ ಧ್ಯಾನಾಸಕ್ತಳಾಗಿ ಕೂಡುತ್ತಿದ್ದಳು. ಬದುಕಿನಲಿ ನಮ್ಮಂತೆ ಸುಳ್ಳಿನ ಆಟವಾಡದಿರುವ ಮಹಾದೇವಿ ಬಾಲ್ಯದಲ್ಲಿಯೇ ಸತ್ಯ ದರ್ಶನದ ಆಟವಾಡುತ್ತಿದ್ದಳು.

ಕೆಡದಿರೆ, ಕೆಡದಿರೆ ಮೃಡನಡಿಯ ಹಿಡಿಯಿರೆ
ಧೃಡವಲ್ಲ ನೋಡಿರೆ ನಿಮ್ಮೊಡಲು
ದೃಢವಲ್ಲ ನೋಡಿರೆ ನಿಮ್ಮ ಸಂಸಾರ ಸುಖವು
ಚೆನ್ನಮಲ್ಲಿಕಾರ್ಜುನ ಬರೆದ ಅಕ್ಷರವು ತೊಡೆಯದ
ಮುನ್ನವೆ ಬೇಗ ಬೇಗ ಶಿವಶರಣೆನ್ನಿ

ಬದುಕಿನಲ್ಲಿ ಪೆಟ್ಟು ತಿನ್ನದೆ ಎಚ್ಚರವಾದ ಜೀವನ ಅವಳದಾಗಿತ್ತು. ಅವಳಿಗೆ ಆರೇಳು ವರ್ಷವಾಗುತ್ತಲೇ ಕುಟುಂಬ ಮತ್ತು ಇಡೀ ಊರಿಗೆ ಬಹು ದೊಡ್ಡ ಸಮಸ್ಯೆಯೊಂದು ಎದುರಾಗುತ್ತದೆ.

(ಸ್ಥಳ: ಎಚ್.ಸಿ.ಜಿ. ಕ್ಯಾನ್ಸರ್ ಆಸ್ಪತ್ರೆ ಎದುರು, ಖೂಬಾ ಪ್ಲಾಟ್, ಕಲಬುರಗಿ)

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here